Advertisement

Mumbai To Ayodhya: ಶ್ರೀರಾಮನ ದರ್ಶನಕ್ಕಾಗಿ‌ ಮುಸ್ಲಿಂ ಯುವತಿಯ 1425 ಕಿ.ಮೀ ಪಾದಯಾತ್ರೆ

12:02 PM Dec 29, 2023 | Team Udayavani |

ನವದೆಹಲಿ: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ಏತನ್ಮಧ್ಯೆ ಮುಸ್ಲಿಂ ಯುವತಿಯೊಬ್ಬಳು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಕೈಗೊಳ್ಳುವ ಮೂಲಕ ಗಮನಸೆಳೆದಿದ್ದಾಳೆ. ಶಬ್ನಂ ಎಂಬ ಯುವತಿ ತನ್ನ ಇಬ್ಬರು ಗೆಳೆಯರಾದ ರಮಣ್‌ ಶರ್ಮಾ ಮತ್ತು ವಿನೀತ್‌ ಪಾಂಡೆ ಜತೆಗೂಡಿ ಮುಂಬೈನಿಂದ ಅಯೋಧ್ಯೆವರೆಗಿನ 1,425 ಕಿಲೋ ಮೀಟರ್‌ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿ ರಾಮಲಲ್ಲಾನ ದರ್ಶನ ಪಡೆಯುವುದಾಗಿ ತಿಳಿಸಿದ್ದಾಳೆ.

Advertisement

ಇದನ್ನೂ ಓದಿ:Vande Bharat Express ರೈಲಿಗೆ ನಾಳೆ ಚಾಲನೆ ಹಿನ್ನೆಲೆ ವ್ಯವಸ್ಥೆ ಪರಿಶೀಲಿಸಿದ ಸಂಸದ ನಳಿನ್

ಶಬ್ನಂ ಪಾದಯಾತ್ರೆಯು ಆಕೆ ಮುಸ್ಲಿಂ ಎಂಬ ಗುರುತಿನ ಹೊರತಾಗಿಯೂ ಶ್ರೀರಾಮನ ಮೇಲಿನ ಅಚಲ ನಂಬಿಕೆ ಮುಖಾಂತರ ಹೆಚ್ಚು ಗಮನ ಸೆಳೆಯುತ್ತಿದ್ದಾಳೆ. ಶ್ರೀರಾಮನನ್ನು ಪೂಜಿಸಲು ಹಿಂದೂವೇ ಆಗಿರಬೇಕಿಲ್ಲ ಎಂಬ ದೃಢ ನಂಬಿಕೆ ಈಕೆಯದ್ದಾಗಿದೆ. ಉತ್ತಮ ಮಾನವೀಯತೆ ಇದ್ದರೆ ಸಾಕು. ಅದಕ್ಕೆ ಯಾವುದೇ ಧರ್ಮ, ಆಚರಣೆ ಅಡ್ಡಿಬರಲ್ಲ ಎನ್ನುತ್ತಾಳೆ ಶಬ್ನಂ.

ಶ್ರೀರಾಮನ ದರ್ಶನಕ್ಕಾಗಿ ಪಾದಯಾತ್ರೆ ಕೈಗೊಂಡಿರುವ ಶಬ್ನಂ ಪ್ರಸ್ತುತ ಮಧ್ಯಪ್ರದೇಶದ ಸಿಂಧವಾ ಪ್ರದೇಶ ತಲುಪಿದ್ದಾಳೆ. ಪ್ರತಿದಿನ ಶಬ್ನಂ ಸೇರಿದಂತೆ ಮೂವರು 25ರಿಂದ 30 ಕಿಲೋ ಮೀಟರ್‌ ಕ್ರಮಿಸುತ್ತಾರಂತೆ.

ಸುದೀರ್ಘ ಪಾದಯಾತ್ರೆಯ ಬಳಲಿಕೆಯ ಹೊರತಾಗಿಯೂ, ಶ್ರೀರಾಮನ ಮೇಲಿನ ಮೇಲಿನ ಭಕ್ತಿಯ ಸ್ಪೂರ್ತಿಯಿಂದ ತಾವು ದಾರಿಯನ್ನು ಕ್ರಮಿಸುತ್ತಿರುವುದಾಗಿ ಮೂವರು ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಗೆ ಪಾದಯಾತ್ರೆ ಕೈಗೊಂಡಿರುವ ಮೂವರು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ದಾರಿ ಮಧ್ಯೆ ತಮ್ಮನ್ನು ಭೇಟಿಯಾಗುತ್ತಿರುವವರ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Advertisement

ಶ್ರೀರಾಮನನ್ನು ಪೂಜಿಸುವುದು ಯಾವುದೇ ಒಂದು ಧರ್ಮ ಅಥವಾ ಪ್ರದೇಶಕ್ಕೆ ಸೀಮಿತವಾಗಿಲ್ಲ. ಶ್ರೀರಾಮ ಎಲ್ಲಾ ಗಡಿ-ಭಾಷೆ ಮೀರಿ ಇಡೀ ಜಗತ್ತನ್ನು ಒಳಗೊಂಡಿದೆ ಎಂಬುದು ಶಬ್ನಂ ಮನದಾಳದ ಮಾತಾಗಿದೆ.

ಭಗವಾನ್‌ ಶ್ರೀರಾಮ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿರದೇ ಪ್ರತಿಯೊಬ್ಬರಿಗೂ ಸೇರಿದವನು ಎಂದು ಶಬ್ನಂ ತಿಳಿಸಿದ್ದಾಳೆ. ನಿಮ್ಮ ಪಾದಯಾತ್ರೆಗೆ ಸ್ಫೂರ್ತಿ ಏನು ಎಂಬ ಸುದ್ದಿಗಾರರ ಪ್ರಶ್ನೆಗೆ ಶಬ್ನಂ ಈ ಪ್ರತಿಕ್ರಿಯೆ ನೀಡಿದ್ದಾಳೆ.

ಯುವಕರು ಮಾತ್ರ ಇಂತಹ ಪಾದಯಾತ್ರೆಯನ್ನು ಕೈಗೊಳ್ಳಬಹುದು ಎಂಬ ತಪ್ಪು ಕಲ್ಪನೆಯ ಸವಾಲನ್ನು ಶಬ್ನಂ ಸುಳ್ಳಾಗಿಸಿದ್ದಾಳೆ. ಆದರೆ ಶಬ್ನಂ ಪಾದಯಾತ್ರೆ ಕೂಡಾ ಹಲವು ಸವಾಲುಗಳನ್ನು ತಂದೊಡ್ಡಿತ್ತು. ಪಾದಯಾತ್ರೆ ಸಂದರ್ಭದಲ್ಲಿ ಪೊಲೀಸರು ಭದ್ರತೆ ನೀಡುವುದರ ಜತೆ ಈಕೆಯ ಊಟೋಪಚಾರ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಮಾಡಬೇಕಾಗಿತ್ತು ಎಂದು ವರದಿ ವಿವರಿಸಿದೆ.

ಮಹಾರಾಷ್ಟ್ರದ ಕೆಲವು ಸೂಕ್ಷ್ಮ ಪ್ರದೇಶಗಳನ್ನು ಹಾದು ಹೋಗುವಾಗ ಪೊಲೀಸರು ಶಬ್ನಂಗೆ ಸಮರ್ಪಕ ಭದ್ರತೆ ನೀಡಿ, ಕೆಲವು ಅಪಾಯದಿಂದ ರಕ್ಷಿಸಿರುವುದಾಗಿ ವರದಿ ತಿಳಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಲವು ಅಶ್ಲೀಲ ಕಮೆಂಟ್ಸ್‌ ಹೊರತಾಗಿಯೂ ಶಬ್ನಂ ಸ್ಫೂರ್ತಿಯಿಂದ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ.

ಶಬ್ನಂ ಮತ್ತು ತಂಡ ಜನವರಿ 22ರಂದು ಅಯೋಧ್ಯೆ ತಲುಪುವ ನಿರೀಕ್ಷೆ ಹೊಂದಿದೆ ಎಂಬ ಊಹಾಪೋಹದ ಕುರಿತು ಪ್ರತಿಕ್ರಿಯಿಸಿರುವ ಶಬ್ನಂ, ನಾವು ಅಯೋಧ್ಯೆ ತಲುಪುವ ಬಗ್ಗೆ ಯಾವುದೇ ದಿನಾಂಕವನ್ನು ನಿಗದಿ ಮಾಡಿಲ್ಲ. ನಮ್ಮ ಪಾದಯಾತ್ರೆ ಆಧ್ಯಾತ್ಮಿಕ ಭಕ್ತಿಯ ಈಡೇರಿಕೆಯ ವೈಯಕ್ತಿಕ ಯಾತ್ರೆಯಾಗಿದೆ ಎಂದು ತಿಳಿಸಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next