Advertisement

ಮುಂಬಯಿಯ ಕೊಲ್ಲಿಗಳನ್ನು ಜೋಡಿಸಲಿವೆ 3 ಕೇಬಲ್‌ ಆಧಾರಿತ ಸೇತುವೆಗಳು

09:18 AM Jul 31, 2019 | Team Udayavani |

ಮುಂಬಯಿ: ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಮುಂಬಯಿ ತನ್ನ ಪಶ್ಚಿಮ ಉಪನಗರಗಳಲ್ಲಿ ಮೂರು ಕೇಬಲ್‌ ಆಧಾರಿತ ಸೇತುವೆಗಳನ್ನು ಹೊಂದಲಿದೆ. ಮಢ್‌ನಿಂದ ವರ್ಸೋವಾ, ಮಾರ್ವೆಯಿಂದ ಮನೋರಿ ಮತ್ತು ಲೋಖಂಡ್‌ವಾಲಾದಿಂದ ಮಲಾಡ್‌ಗೆ ಸಂಪರ್ಕಿಸುವ ಆರು ಪಥಗಳ ಮೂರು ಸೇತುವೆಗಳನ್ನು ನಿರ್ಮಿಸಲು ಬೃಹನ್ಮುಂಬಯಿ ಮಹಾನಗರ ಪಾಲಿಕೆಯು ಉತ್ಸುಕ ಕಂಪೆನಿಗಳಿಂದ ಬಿಡ್‌ಗಳನ್ನು ಆಹ್ವಾನಿಸಿದೆ. ಮುಂಬಯಿಯ ಕೊಲ್ಲಿಗಳನ್ನು ಜೋಡಿಸಲಿರುವ ಈ ಸೇತುವೆಗಳ ನಿರ್ಮಾಣಕ್ಕೆ 1,145 ಕೋಟಿ ರೂ.ಗಳ ಖರ್ಚು ಅಂದಾಜಿಸಲಾಗಿದೆ.

Advertisement

ನಗರವು ಈಗಾಗಲೇ ಎರಡು ಕೇಬಲ್‌ ಆಧಾರಿತ ಸೇತುವೆಗಳನ್ನು ಹೊಂದಿದೆ. ಈ ಪೈಕಿ ಮೊದಲನೆಯದಾಗಿರುವ ಬಾಂದ್ರಾ-ವರ್ಲಿ ಸೀ ಲಿಂಕ್‌ ಕಳೆದ ಜುಲೈ 23 ರಂದು ತನ್ನ 10 ನೇ ವಾರ್ಷಿಕೋತ್ಸವವನ್ನು ಆಚರಿಸಿದೆ. ವರ್ಸೋವಾ-ಅಂಧೇರಿ-ಘಾಟ್ಕೊಪರ್‌ ಕಾರಿಡಾರ್‌ನಲ್ಲಿರುವ ಮೆಟ್ರೋ ರೈಲು ವಯಾಡಕ್ಟ್ ಎರಡನೇ ಕೇಬಲ್‌ ಆಧಾರಿತ ಸೇತುವೆ ಆಗಿದೆ. ನಗರದ ಕೊಲ್ಲಿಗಳಲ್ಲಿ ನಿರ್ಮಾಣವಾಗಲಿರುವ ಹೊಸ ಸೇತುವೆಗಳಿಂದ ಮುಂಬಯಿಗರ ಸಂಚಾರ ಸುಗಮವಾಗಲಿದೆ. ಪ್ರಸ್ತುತ ನಗರ ನಿವಾಸಿಗರು ಈ ಕೊಲ್ಲಿಗಳಿಗೆ ತಲುಪಲು ಬೋಟ್‌ಗಳನ್ನು ಬಳಸುತ್ತಿದ್ದಾರೆ. ಒಂದೊಮ್ಮೆ ಈ ಸ್ಥಳಗಳಲ್ಲಿ ಸೇತುವೆಗಳು ತಲೆ ಎತ್ತಿದರೆ ಮನೋರಿಯಿಂದ ಮಾರ್ವೆ, ವರ್ಸೋವಾದಿಂದ ಮಢ್‌ ದ್ವೀಪದ ಪ್ರವಾಸಕ್ಕೆ ಪ್ರವಾಸಿಗರಿಗೆ ವಾಹನಗಳ ಮೂಲಕ ತಲುಪಲು ಸಾಧ್ಯವಾಗಲಿದೆ. ಮಹಾನಗರ ಪಾಲಿಕೆಯು ನಗರದ ಈ ಸ್ಥಳಗಳನ್ನು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲು ಬಯಸಿದೆ.

ಯೋಜನೆಯ ಪ್ರಕಾರ, ಮಢ್‌ನಿಂದ ವರ್ಸೋವಾ ಕೊಲ್ಲಿ ನಡುವೆ 1.5 ಕಿ.ಮೀ. ಉದ್ದದ ಸೇತುವೆ ನಿರ್ಮಾಣವಾಗಲಿದೆ. 1.5 ಕಿ.ಮೀ. ಉದ್ದದ ಎರಡನೇ ಸೇತುವೆ ಮಲಾಡ್‌ನ‌ ಮನೋರಿ ಕೊಲ್ಲಿಯಿಂದ ಮಾರ್ವೆ-ಮನೋರಿ ರಸ್ತೆಯನ್ನು ಸಂಪರ್ಕಿಸಲಿದೆ. ಅದೇ, 1.8 ಕಿ.ಮೀ. ಉದ್ದದ ಮೂರನೇ ಸೇತುವೆ ಲೋಖಂಡ್‌ವಾಲಾದಲ್ಲಿರುವ ಓಶಿವಾರಾ ನದಿಯ ಮೂಲಕವಾಗಿ ಮಲಾಡ್‌ ಪಶ್ಚಿಮದ ಲಗೂನ್‌ ರಸ್ತೆಗೆ ಸಂಪರ್ಕಿಸಲಿದೆ. ಈ ಯೋಜನೆಯು ಆರಂಭಿಕ ಹಂತದಲ್ಲಿದ್ದು ಯೋಜನೆಗೆ ಸಂಬಂಧಿಸಿದ ಇನ್ನೂ ಹಲವು ಅನುಮತಿಗಳು ಬಾಕಿ ಉಳಿದಿವೆ. ಈ ಯೋಜನೆ ಅಭಿವೃದ್ಧಿ ಯೋಜನೆ 2034ರ ಭಾಗವಾಗಿದೆ.

ಮೊದಲ ಕೇಬಲ್‌ ಆಧಾರಿತ ಸೇತುವೆ
ಬಾಂದ್ರಾ-ವರ್ಲಿ ಸೀ ಲಿಂಕ್‌ ಮುಂಬಯಿಯ ಮೊದಲ ಕೇಬಲ್‌ ಆಧಾರಿತ ಸೇತುವೆಯಾಗಿದೆ. ಈ ಸೇತುವೆಯ ಉದ್ದ 6 ಕಿ.ಮೀ. ಆಗಿದ್ದು, 4 ಕಿ.ಮೀ. ಉದ್ದದ ಸೇತುವೆಯ ಭಾಗವು ಸಮುದ್ರದ ಮೇಲೆ ನಿಂತಿದೆ. ಇದರ ಒಟ್ಟು ನಿರ್ಮಾಣ ವೆಚ್ಚ 2,000 ಕೋಟಿ ರೂ. ಆಗಿದೆ. ಈ ಸೇತುವೆಯಲ್ಲಿ ಒಟ್ಟು 4 ಪಥಗಳಿವೆ.

ಮಳೆಗಾಲದಲ್ಲಿ ನೆಮ್ಮದಿ ಸಿಗಲಿದೆ
ಮಲಾಡ್‌-ವರ್ಸೋವಾ ಮತ್ತು ಮಾರ್ವೆ-ಮನೋರಿ ಈ ಎರಡು ಸೇತುವೆಗಳು ಅಸ್ತಿತ್ವದಲ್ಲಿರುವ ರಸ್ತೆಗೆಗೆ ಸಂಪರ್ಕ ಕಲ್ಪಿಸಲಿವೆ. ಇದರಿಂದ ಮಳೆಗಾಲದಲ್ಲಿ ದೋಣಿ ಸೇವೆಯನ್ನು ಮುಚ್ಚಿದಾಗ, ಜನರು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೋಗಲು ಅನುಕೂಲವಾಗಲಿದೆ.

Advertisement

ಏನಿದು ಕೇಬಲ್‌ ಆಧಾರಿತ ಸೇತುವೆ ?
ಕೇಬಲ್‌ ಆಧಾರಿತ ಸೇತುವೆ ಒಂದು ರೀತಿಯ ರಚನೆಯಾಗಿದ್ದು, ನದಿ, ಪರ್ವತ, ಕಣಿವೆ ಅಥವಾ ಮಾನವ ನಿರ್ಮಿತ ತಡೆಗೋಡೆಗಳನ್ನು ವಾಹನ ಅಥವಾ ಕಾಲ್ನಡಿಗೆಯ ಮೂಲಕ ದಾಟಲು ಇದನ್ನು ನಿರ್ಮಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next