ಮುಂಬಯಿ: ವಿದ್ಯಾರ್ಥಿ ವೇತನ ಬರೇ ಬಡವರಿಗೆ ಮೀಸಲು ಅಲ್ಲ. ಇದು ಸಮುದಾಯದ ಸಂಸ್ಥೆಯಿಂದ ನೀಡುವ ಪ್ರೋತ್ಸಾಹ ಧನವಾಗಿದೆ. ಆದ್ದರಿಂದ ಫಲಾನುಭವಿಗಳು ಘನತೆಗೆ ಕಡಿಮೆಯಾಗುವ ಮನೋಭಾವ ಬಿಡಬೇಕು. ನಾನು 100 ರೂ. ವೇತನದಿಂದ ಕಲಿತವ. ನಮ್ಮ ಬಾಲ್ಯಾವಸ್ಥೆ, ವಿದ್ಯಾರ್ಥಿ ಕಾಲದಲ್ಲಿ ಆ 100 ರೂ. ಇಡೀ ಜೀವನವನ್ನೇ ಕಟ್ಟಲು ಪೂರಕವಾಗಿತ್ತು. ಮಾತ್ರವಲ್ಲದೆ ವಿದ್ಯಾರ್ಥಿ ವೇತನ ಪಡೆಯುವುದು ತುಂಬಾ ಹೆಮ್ಮೆಯ ವಿಷಯ ಎನ್ನುವುದು ನಮ್ಮವರ ಮನೋಭಾವ ಆಗಿತ್ತು. ಈಗಿನ ಪೀಳಿಗೆಗೆ ವಿದ್ಯಾರ್ಥಿ ವೇತನ ಪಡೆಯುವುದು ನಾಚಿಕೆ ಎಣಿಸುತ್ತಿರುವುದು ದುರಾದೃಷ್ಟ. ಇಂದು ವಿದ್ಯಾದಾನ ಕೊಡುವವರು ಇದ್ದಾರೆ. ಕೊಳ್ಳುವವರು ಇಲ್ಲ ವಾಗುತ್ತಿದ್ದಾರೆ. ಇಂತಹ ಸಂಕೋಚಿತ ಮನೋಭಾವದಿಂದ ಸಮಾಜ ಮುಕ್ತವಾಗಬೇಕು ಎಂದು ತೀಯಾ ಸಮಾಜ ಮುಂಬಯಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ ಅವರು ತಿಳಿಸಿದರು.
ತೀಯಾ ಸಮಾಜ ಮುಂಬಯಿ ಸಂಸ್ಥೆಯು ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕವಾಗಿ ಕೊಡಮಾಡುವ 2018ನೇ ಸಾಲಿನ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವು ಜು. 15 ರಂದು ಸಂಜೆ ಘಾಟ್ಕೊàಪರ್ ಪೂರ್ವದ ಪಂತ್‌ನಗರದಲ್ಲಿನ ಅಂಕುರ್ ನರ್ಸರಿ ಸಭಾಗೃಹದಲ್ಲಿ ನಡೆದಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಸಂಸ್ಥೆಯ ವಿಶ್ವಸ್ಥ ಮಂಡಳಿ ಸದಸ್ಯ ಟಿ. ಬಾಬು ಬಂಗೇರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತರು. ಸಂಸ್ಥೆಯ ಉಪಾಧ್ಯಕ್ಷ ಸುಧಾಕರ್ ಉಚ್ಚಿಲ್, ಗೌರವ ಕೋಶಾಧಿಕಾರಿ ರಮೇಶ್ ಎನ್. ಉಳ್ಳಾಲ್, ಆರೋಗ್ಯ ನಿಧಿ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್ ಮತ್ತು ವೇತನ ಪ್ರಾಯೋಜಕರಾದ ಸುಂದರ್ ಐಲ್, ವೃಂದಾ ದಿನೇಶ್, ಉಜ್ವಲಾ ಚಂದ್ರಶೇಖರ್, ಮೋಹನ್ ಬಿ. ಎಂ, ಚಂದ್ರ ಎಂ. ಸುವರ್ಣ, ದಿವಿಜಾ ಚಂದ್ರಶೇಖರ್, ಕವಿತಾ ಬೆಳ್ಚಡ ಮತ್ತಿತರರು ಉಪಸ್ಥಿತರಿದ್ದು ವಿದ್ಯಾರ್ಥಿ ವೇತನವನ್ನಿತ್ತು ಶುಭಹಾರೈಸಿದರು.
ತೀಯಾ ಸಮಾಜ ಮುಂಬಯಿ ಇದರ ಮುಖವಾಣಿ ತೀಯಾ ಬೆಳಕು ಸಂಪಾದಕ ಶ್ರೀಧರ್ ಎಸ್. ಸುವರ್ಣ ಮಾತನಾಡಿ, ಕಳೆದ ವಾರ ರಷ್ಯಾದ ಟಶೆVಂಟ್‌ನಲ್ಲಿ ಗ್ಲೋಬಲ್ ಫೌಂಡೇಶನ್ ಅಚೀವರ್ ಸಂಸ್ಥೆಯಿಂದ “ಏಯಾ ಪೆಸಿಫಿಕ್ ಅಚೀವರ್ ಅವಾರ್ಡ್’ ಪ್ರಶಸ್ತಿಯಿಂದ ಗೌರವಿಸಲ್ಪಟ್ಟ ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಬೆಳ್ಚಡ ಅವರ ಗೌರವ ಅಖಂಡ ತೀಯಾ ಸಮಾಜಕ್ಕೆ ಸಂದ ಗೌರವ ಆಗಿದೆ. ಆ ಮೂಲಕ ಸಮಾಜವು ಜಾಗತಿಕವಾಗಿ ಗುರುತಿಸುವಂತಾಯಿತು. ಇದು ಸಮಗ್ರ ತೀಯಾ ಜನತೆಗೆ ಹೆಮ್ಮೆ ಎಣಿಸಿದೆ ಎಂದು ನುಡಿದು ಪ್ರಶಸ್ತಿ ಪುರಸ್ಕೃತರಾದ ಅಧ್ಯಕ್ಷ ಚಂದ್ರಶೇಖರ್ ಆರ್. ಬೆಳ್ಚಡ ಅವರನ್ನು ಅಭಿನಂದಿಸಿದರು.
ಪೂರ್ವ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮೋಹನ್ ಬಿ. ಎಂ, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಬಾಬು ಕೋಟ್ಯಾನ್, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ನ್ಯಾಯವಾದಿ ಸದಾಶಿವ ಬಿ. ಕೆ, ನ್ಯಾಯವಾದಿ ನಾರಾಯಣ ಸುವರ್ಣ, ಸುರೇಶ್ ಬಂಗೇರ, ಚಂದ್ರಶೇಖರ ಕೆ. ಬಿ ಸೇರಿದಂತೆ ಮಹಾನಗರದಲ್ಲಿನ ಹೆಚ್ಚಿನ ತೀಯಾ ಬಾಂಧವರು ಉಪಸ್ಥಿತರಿದ್ದರು. ಶ್ರೀಧರ್ ಎಸ್. ಸುವರ್ಣ ಫಲಾನುಭವಿಗಳ ಪಟ್ಟಿ ವಾಚಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಈಶ್ವರ ಐಲ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸಮಾಜದ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವನ್ನಿತ್ತು ಗೌರವಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್