ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಉತ್ತಮ ತೇಜಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 300ಕ್ಕೂ ಹೆಚ್ಚು ಅಂಕಗಳ ಜಿಗಿತವನ್ನು ಸಾಧಿಸಿ ಹೊಸ ಎತ್ತರದ ತಾಜಾ ದಾಖಲೆಯನ್ನು ಸ್ಥಾಪಿಸಿತು.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,651 ಅಂಕಗಳ ಮಟ್ಟಕ್ಕೇರುವ ಮೂಲಕ ಹೊಸ ಎತ್ತರದ ನೂತನ ಸಾರ್ವಕಾಲಿಕ ದಾಖಲೆಯನ್ನು ಸ್ಥಾಪಿಸಿತು.
ಕಳೆದ ಶುಕ್ರವಾರ 84.96 ಅಂಕಗಳ ನಷ್ಟವನ್ನು ಕಂಡಿದ್ದ ಮುಂಬಯಿ ಶೇರು ಇಂದು ಬೆಳಗ್ಗೆ 10.30ರ ಹೊತ್ತಿಗೆ 350.57 ಅಂಕಗಳ ಮುನ್ನಡೆಯೊಂದಿಗೆ 38,602.37 ಅಂಕಗಳ ಮಟ್ಟದಲ್ಲೂ ನಿಫ್ಟಿ ಸೂಚ್ಯಂಕ 101.60 ಅಂಕಗಳ ಮುನ್ನಡೆಯೊಂದಿಗೆ 11,658.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು. ಎಚ್‌ಡಿಎಫ್ಸಿ ಬ್ಯಾಂಕ್, ರಿಲಯನ್ಸ್ , ಎಕ್ಸಿಸ್ ಬ್ಯಾಂಕ್, ಎಸ್‌ಬಿಐ, ಐಸಿಐಸಿಐ ಬ್ಯಾಂಕ್ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಪವರ್ ಗ್ರಿಡ್, ಗ್ರಾಸಿಂ, ಎಸ್ ಬ್ಯಾಂಕ್, ಹಿಂಡಾಲ್ಕೊ, ಭಾರ್ತಿ ಏರ್‌ಟೆಲ್; ಟಾಪ್ ಲೂಸರ್ ಗಳು : ಭಾರ್ತಿ ಇನ್‌ಫ್ರಾಟೆಲ್, ಝೀ ಎಂಟರ್‌ಟೇನ್‌ಮೆಂಟ್, ಡಾ. ರೆಡ್ಡಿ, ವಿಪ್ರೋ, ಸಿಪ್ಲಾ.
ಡಾಲರ್ ಎದುರು ರೂಪಾಯಿ ವಿನಿಮಯ ದರ ಇಂದು ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ 20 ಪೈಸೆ ಸುಧಾರಿಸಿ 69.71ರೂ. ಮಟ್ಟ ತಲುಪಿರುವುದು ಕೂಡ ಶೇರು ಮಾರುಕಟ್ಟೆಗೆ ಇಂದು ಹೊಸ ಉತ್ತೇಜನ ನೀಡಿತು.