ಮುಂಬಯಿ: ಐತಿಹ್ಯ ಪಂಚಮ ಪರ್ಯಾಯ ಮಹೋತ್ಸವ ಪೂರೈಸಿದ ಬಳಿಕ ಮೊದಲ ಬಾರಿಗೆ ಮುಂಬಯಿಗೆ ಚರಣಸ್ಪರ್ಶಗೈದ ಪೇಜಾವರ ಶ್ರೀಗಳಿಗೆ ಯತಿಕುಲ ಚಕ್ರವರ್ತಿ ಪೇಜಾವರ ಸ್ವಾಮಿಗಳ ಅಭಿವಂದನಾ ಸಮಿತಿ ಪೇಜಾವರ ಮಠ ಮುಂಬಯಿ ಮತ್ತು ನಗರದ ತುಳು ಕನ್ನಡಿಗ ಸಂಘ ಸಂಸ್ಥೆಗಳ ವತಿಯಿಂದ ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಜು. 28 ರಂದು ಅಭಿವಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕಾ ಮಹಾಪೌರ ಪ್ರೊ| ವಿಶ್ವನಾಥ್ ಮಹಾದೇಶ್ವರ್ ಮತ್ತು ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದರು. ಸಚಿವ ಪ್ರಕಾಶ್ ಮೆಹ್ತಾ ಮುಖ್ಯ ಅತಿಥಿಯಾಗಿದ್ದರು. ಪೇಜಾವರ ಸ್ವಾಮೀಜಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿ ಧಾರ್ಮಿಕ ಸಭಾಧ್ಯಕ್ಷತೆ ವಹಿಸಿದ್ದರು.
ಅತಿಥಿಗಳು ಮತ್ತು ಭಕ್ತರು ಶ್ರೀಗಳ ರಜತ ತುಲಾಭಾರ ನೆರವೇರಿಸಿ ಸಾರ್ವಜನಿಕವಾಗಿ ಸಮ್ಮಾನಿಸಿ ಅಭಿನಂದಿಸಿದರು. ನಂತರ ಮಹಾನಗರದಲ್ಲಿನ ಉಪಸ್ಥಿತ ತುಳು ಕನ್ನಡಿಗ ಸಂಘ-ಸಂಸ್ಥೆಗಳ ಮುಖ್ಯಸ್ಥರು ಶ್ರೀಗಳಿಗೆ ಪುಷ್ಪ ಗೌರವದೊಂದಿಗೆ ಗೌರವಿಸಿ ಶುಭಹಾರೈಸಿದರು. ಸಾಂತಾಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನ ದಿಂದ ಶ್ರೀ ವಿಶ್ವೇಶತೀರ್ಥರನ್ನು ಪ್ರಾರಂಭದಲ್ಲಿ ಭವ್ಯ ಶೋಭಾಯಾತ್ರೆಯಲ್ಲಿ ಮಠಕ್ಕೆ ಭಕ್ತಿಪೂರ್ವಕವಾಗಿ ಬರಮಾಡಿ ಕೊಳ್ಳಲಾಯಿತು.
ಶ್ರೀ ಪೇಜಾವರ ಮಠ ಮುಂಬಯಿ ಶಾಖೆ ಯ ಸ್ವಾಗತ ಗೋಪುರಕ್ಕೆ ಶ್ರೀಗಳು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ. ಎಸ್. ರಾವ್, ವಿರಾರ್ ಶಂಕರ ಶೆಟ್ಟಿ, ವಿದ್ವಾನ್ ನಾಗರಹಳ್ಳಿ ಪ್ರಹ್ಲಾದ್ ಆಚಾರ್ಯ, ವಿದ್ವಾನ್ ವಿದ್ಯಾಸಿ, ಶಾಖೆಯ ಪ್ರಬಂಧಕರುಗಳಾದ ವಿದ್ವಾನ್ ರಾಮದಾಸ ಉಪಾಧ್ಯಾಯ ರೆಂಜಾಳ, ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್, ನಿರಂಜನ್ ಗೋಗೆr, ಪುರೋಹಿತ ವರ್ಗದಲರು ಸೇರಿದಂತೆ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ- ವರದಿ : ರೋನ್ಸ್ ಬಂಟ್ವಾಳ್