ಮುಂಬಯಿ : ಲೋಕಸಭೆಯಲ್ಲಿ ಐತಿಹಾಸಿಕ ಜಿಎಸ್‌ಟಿಯ ನಾಲ್ಕು ಪೂರಕ ಮಸೂದೆಗಳು ಪಾಸಾಗಿರುವುದರಿಂದ ಹೊಸ ಉಲ್ಲಾಸ ಪಡೆದಿರುವ ಮುಂಬಯಿ ಶೇರು ಪೇಟೆ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 63 ಅಂಕಗಳ ಮುನ್ನಡೆಯನ್ನು ದಾಖಲಿಸಿದೆ.
ಬೆಳಗ್ಗೆ 10.50ರ ಹೊತ್ತಿಗೆ ಸೆನ್ಸೆಕ್ಸ್ 86.03 ಅಂಕಗಳ ಏರಿಕೆಯೊಂದಿಗೆ 29,617.46 ಅಂಕಗಳ ಮಟ್ಟದಲ್ಲೂ , ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 17.35 ಅಂಕಗಳ ಏರಿಕೆಯೊಂದಿಗೆ 9,161.15 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಮಾರ್ಚ್ ತಿಂಗಳ ವಾಯಿದೆ ವಹಿವಾಟಿನ ಚುಕ್ತಾಗೆ ಇಂದು ಕೊನೇ ದಿನವಾಗಿರುವುದರಿಂದ ಹೂಡಿಕೆದಾರರು ಶಾರ್ಟ್ ಕವರಿಂಗ್ ನಡೆಸುತ್ತಿರುವುದು ಕೂಡ ಸೆನ್ಸೆಕ್ಸ್ ಮತ್ತು ನಿಫ್ಟಿಯ ಇಂದಿನ ಏರಿಕೆಗೆ ಕಾರಣವಾಗಿದೆ ಎನ್ನಲಾಗಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಉತ್ತಮ ತೇಜಿ ಕಂಡ ಶೇರುಗಳೆಂದರೆ ಎಸ್‌ಬಿಐ ಅದಾನಿ ಪೋರ್ಟ್, ಮಾರುತಿ ಸುಜುಕಿ, ಹೀರೋ ಮೋಟೋ ಕಾರ್ಪ್, ಆರ್‌ಐಎಲ್, ಲಾರ್ಸನ್, ಸನ್ ಫಾರ್ಮಾ, ಐಟಿಸಿ, ಟಿಸಿಎಸ್, ಹಿಂದ್ ಯುನಿಲಿವರ್, ಏಶ್ಯನ್ ಪೇಂಟ್ ಮತ್ತು ಬಜಾಜ್ ಆಟೋ.
ಅಮೆರಿಕದ ಶೇರು ಮಾರುಕಟ್ಟೆಗಳು ನಿನ್ನೆ ಕುಸಿತ ಕಂಡ ಪರಿಣಾಮವಾಗಿ ಇಂದು ಭಾರತವನ್ನು ಹೊರತುಪಡಿಸಿ ಇತರ ಏಶ್ಯನ್ ಶೇರು ಮಾರುಕಟ್ಟೆಗಳು ಹಿನ್ನಡೆಗೆ ಗುರಿಯಾಗಿವೆ.