ಮುಂಬಯಿ : ಮೂರು ದಿನಗಳಿಂದ ನಿರಂತರ ಏರುಗತಿಯನ್ನು ಕಂಡಿದ್ದ ಮುಂಬಯಿ ಶೇರು ಪೇಟೆ ಇಂದು ಮಂಗಳವಾರದ ಉತ್ತಮ ಆರ್ಥಿಕಾಭಿವೃದ್ಧಿಗಳ ಅಂಕಿ ಅಂಶಗಳ ಹೊರತಾಗಿಯೂ ಆರಂಭಿಕ ವಹಿವಾಟಿನಲ್ಲಿ ಮುಗ್ಗರಿಸಿ 38 ಅಂಕಗಳ ನಷ್ಟಕ್ಕೆ ಗುರಿಯಾಗುವ ಮೂಲಕ ದಿನದ ವಹಿವಾಟನ್ನು 28,313.42 ಅಂಕಗಳ ಮಟ್ಟದಲ್ಲಿ ಆರಂಭಿಸಿದೆ.
ಕಳೆದ ಮೂರು ದಿನಗಳ ಏರುಗತಿಯ ವಹಿವಾಟಿನಲ್ಲಿ ಉಂಟಾಗಿರುವ ಲಾಭದ ನಗದೀಕರಣಕ್ಕೆ ಹೂಡಿಕೆದಾರರು ಮತ್ತು ವಹಿವಾಟುದಾರರು ಮುಂದಾದದ್ದೇ ಇಂದಿನ ಹಿನ್ನಡೆಗೆ ಕಾರಣವೆಂದು ತಿಳಿಯಲಾಗಿದೆ.
ಬೆಳಗ್ಗೆ 11.15ರ ಸುಮಾರಿಗೆ ಸೆನ್ಸೆಕ್ಸ್ 10.97 ಅಂಕಗಳ ನಷ್ಟದೊಂದಿಗೆ 289,340.65 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 9.60 ಅಂಕಗಳ ನಷ್ಟದೊಂದಿಗೆ 8,795.45 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿತ್ತು. ಇಂದಿನ ವಹಿವಾಟಿನಲ್ಲಿ ಟಾಟಾ ಮೋಟರ್ ಶೇರು ಕುಸಿತಕ್ಕೆ ಗುರಿಯಾಗಿರುವುದು ಗಮನಾರ್ಹವಾಗಿದೆ.
ಜಾಗತಿಕವಾಗಿ ಇಂದು ಜಪಾನಿನ ನಿಕ್ಕಿ ಸೂಚ್ಯಂಕ ತನ್ನ ಆರಂಭಿಕ ವಹಿವಾಟಿನಲ್ಲಿ ಶೇ.0.16ರ ನಷ್ಟಕ್ಕೆ ಗುರಿಯಾಗಿದೆ; ಅಂತೆಯೇ ಹಾಂಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.03ರ ನಷ್ಟಕ್ಕೆ ಗುರಿಯಾಗಿದೆ.
ಅಮೆರಿಕದ ಡೋವ್ ಜೋನ್ಸ್ ಸೂಚ್ಯಂಕ ನಿನ್ನೆ ಶೇ.0.7ರಷ್ಟು ಏರಿರುವುದು ಗಮನಾರ್ಹವಾಗಿದೆ.