ಮುಂಬಯಿ : ಕಳೆದ ವಾರ ಒಂದೇ ಸಮನೆ ಏರುಗತಿಯನ್ನು ಕಂಡು ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿದ್ದ ಮುಂಬಯಿ ಶೇರುಪೇಟೆ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಜಾರು ಹಾದಿಗೆ ಹೊರಳಿದೆ.
ಹೂಡಿಕೆದಾರರು ಮತ್ತು ವಹಿವಾಟುದಾರರು ಲಾಭ ನಗದೀಕರಣಕ್ಕೆ ಮುಂದಾದ ಪ್ರಯುಕ್ತ ಇಂದು ಸೆನ್ಸೆಕ್ಸ್ ಸೂಚ್ಯಂಕ ಆರಂಭಿಕ ವಹಿವಾಟಿನಲ್ಲಿ 129 ಅಂಕಗಳ ನಷ್ಟಕ್ಕೆ ಗುರಿಯಾಯಿತು. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 31 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 11.20ರ ಹೊತ್ತಿಗೆ ಸೆನ್ಸೆಕ್ಸ್ 141.64 ಅಂಕಗಳ ನಷ್ಟದೊಂದಿಗೆ 29,507.35 ಅಂಕಗಳ ಮಟ್ಟದಲ್ಲೂ, ನಿಫ್ಟಿ 36.60 ಅಂಕಗಳ ನಷ್ಟದೊಂದಿಗೆ 9,120.35 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಕಳೆದ ವಾರ ಸೆನ್ಸೆಕ್ಸ್ 702.76 ಅಂಕಗಳ ಏರಿಕೆಯನ್ನು ದಾಖಲಿಸಿ 29,648.99 ಅಂಕಗಳ ಎತ್ತರವನ್ನು ತಲುಪಿತ್ತು. ಪಂಚರಾಜ್ಯ ಚುನಾವಣೆಗಳಲ್ಲಿ, ವಿಶೇಷವಾಗಿ ಉತ್ತರಪ್ರದೇಶದಲ್ಲಿ, ಬಿಜೆಪಿ ತೋರಿದ್ದ ಅಭೂತಪೂರ್ವ ವಿಕ್ರಮವೇ ಇದಕ್ಕೆ ಕಾರಣವಾಗಿತ್ತು.
ಇಂದು ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಜಪಾನಿನ ನಿಕ್ಕಿ ಶೇ.0.35, ಚೀನದ ಶಾಂಘೈ ಶೇ.0.02 ನಷ್ಟಕ್ಕೆ ಗುರಿಯಾದರೆ, ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ.0.53ರ ಏರಿಕೆಯನ್ನು ಕಂಡಿದೆ.