ಮುಂಬಯಿ : ಗಮನಾರ್ಹ ಪ್ರಮಾಣದಲ್ಲಿ ವಿದೇಶೀ ಬಂಡವಾಳ ಹರಿದು ಬರುತ್ತಿರುವುದನ್ನು ಅನುಸರಿಸಿ ಹೊಸ ಹುರುಪು ಪಡೆದಿರುವ ಮುಂಬಯಿ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 425 ಅಂಕಗಳ ಅಮೋಘ ರಾಲಿಯನ್ನು ದಾಖಲಿಸಿ 28,726.26 ಅಂಕಗಳ ಮಟ್ಟಕ್ಕೆ ಏರುವ ಮೂಲಕ ನಿರಂತರ ಎರಡನೇ ದಿನವೂ ಮುನ್ನುಗ್ಗಿದೆ.
ಇದೇ ವೇಳೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ 91 ಅಂಕಗಳ ಅಮೋಘ ಜಿಗಿತವನ್ನು ಸಾಧಿಸಿ ದಿನದ ವಹಿವಾಟನ್ನು 8,869.60 ಅಂಕಗಳ ಮಟ್ಟದಲ್ಲಿ ಆರಂಭಿಸಿದೆ.
ಬೆಳಗ್ಗೆ 10.45ರ ಹೊತ್ತಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯನ್ನು ಬಹುಮಟ್ಟಿಗೆ ಬಿಟ್ಟುಕೊಟ್ಟು 170.61 ಅಂಕಗಳ ಏರಿಕೆಯೊಂದಿಗೆ 28,471.88 ಅಂಕಗಳ ಮಟ್ಟದಲ್ಲೂ, ನಿಫ್ಟಿ 39.60 ಅಂಕಗಳ ಏರಿಕೆಯೊಂದಿಗೆ 8,817.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಬ್ಯಾಂಕ್ ನಿಫ್ಟಿ ದಾಖಲೆಯ ಎತ್ತರವನ್ನು ಸಾಧಿಸಿತಾದರೆ ಇನ್‌ಫೋಸಿಸ್ ಶೇರು ಕುಸಿತಕ್ಕೆ ಗುರಿಯಾಯಿತು. ಎಚ್ ಡಿ ಎಫ್ ಸಿ ಬ್ಯಾಂಕ್ ಶೇರು ಶೇ.7.29ರ ಏರಿಕೆಯನ್ನು ದಾಖಲಿಸಿ ಅಚ್ಚರಿ ಉಂಟುಮಾಡಿತು.
ಇಂದಿನ ಅಮೋಘ ಆರಂಭಿಕ ರಾಲಿಗೆ ಕಾರಣವಾದ ಶೇರುಗಳೆಂದರೆ ಎಚ್ ಡಿ ಎಫ್ ಸಿ, ಎಕ್ಸಿಸ್ ಬ್ಯಾಂಕ್, ಲೂಪಿನ್, ಪವರ್ ಗ್ರಿಡ್, ಅದಾನಿ ಪೋರ್ಟ್, ಟಾಟಾ ಮೋಟರ್, ಓಎನ್‌ಜಿಸಿ, ಸಿಪ್ಲಾ, ಭಾರ್ತಿ ಏರ್‌ಟೆಲ್ ಮತ್ತು ಲಾರ್ಸನ್ – ಇವು ಶೇ.1.64ರಷ್ಟು ಏರಿಕೆಯನ್ನು ದಾಖಲಿಸಿದವು.
ಮುಂಬಯಿ ಶೇರು ಪೇಟೆಗೆ ವ್ಯತಿರಿಕ್ತವಾಗಿ ಇಂದು ಏಶ್ಯನ್ ಶೇರು ಪೇಟೆಗಳು ಹಿನ್ನಡೆಯನ್ನು ಕಂಡವು. ಜಪಾನಿನ ನಿಕ್ಕಿ ಶೇ.0.57 ಮತ್ತು ಹಾಂಗಾಂಗ್‌ನ ಹ್ಯಾಂಗ್‌ಸೆಂಗ್ ಶೇ.0.46 ಹಾಗೂ ಶಾಂಘೈ ಕಾಂಪೋಸಿಟ್ ಸೂಚ್ಯಂಕ ಶೇ.0.24ರ ಹಿನ್ನಡೆಗೆ ಗುರಿಯಾದವು.