ಮುಂಬೈ: ಕಳೆದ ಸೋಮವಾರ ಮುಂಬೈ ನಲ್ಲಿ ಸಂಭವಿಸಿದ ಭಾರಿ ಚಂಡಮಾರುತದ ವೇಳೆ 250 ಟನ್ ತೂಕದ ಹೋರ್ಡಿಂಗ್ ಬಿದ್ದು ಮೃತಪಟ್ಟವರಲ್ಲಿ ನಿವೃತ್ತ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಮ್ಯಾನೇಜರ್ ಮತ್ತು ಅವರ ಪತ್ನಿ ಸೇರಿದ್ದು ಇದರೊಂದಿಗೆ ದುರ್ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.
ಘಟನಾ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ರಕ್ಷಣಾ ತಂಡಕ್ಕೆ ನಿವೃತ್ತ ಎಟಿಸಿ ಮ್ಯಾನೇಜರ್ ಮನೋಜ್ ಚಾನ್ಸೋರಿಯಾ (60) ಮತ್ತು ಅವರ ಪತ್ನಿ ಅನಿತಾ (59) ಅವರ ಶವಗಳು ಬುಧವಾರ ರಾತ್ರಿ ಹೋರ್ಡಿಂಗ್ ಬಿದ್ದಿರುವ ಜಾಗದಲ್ಲಿದ್ದ ಕಾರಿನೊಳಗೆ ಪತ್ತೆಹಚ್ಚಿದ್ದಾರೆ.
ಚಾನ್ಸೋರಿಯಾ ಅವರು ಈ ವರ್ಷದ ಮಾರ್ಚ್ನಲ್ಲಿ ಮುಂಬೈ ಎಟಿಸಿಯ ಜನರಲ್ ಮ್ಯಾನೇಜರ್ ಆಗಿ ನಿವೃತ್ತರಾಗಿದ್ದರು. ದಂಪತಿಗಳು ವೀಸಾ ಸಂಬಂಧಿತ ಕೆಲಸಕ್ಕಾಗಿ ಮುಂಬೈಗೆ ಬಂದಿದ್ದು ಕೆಲಸ ಮುಗಿದ ಹಿನ್ನೆಲೆಯಲ್ಲಿ ಜಬಲ್ಪುರಕ್ಕೆ ಹೊರಟಿದ್ದರು ಈ ವೇಳೆ ಪೆಟ್ರೋಲ್ ಹಾಕಿಸಲು ಪೆಟ್ರೋಲ್ ಬಂಕ್ ಗೆ ಬಂದಿದ್ದರು ಈ ವೇಳೆ ಹೋರ್ಡಿಂಗ್ ಕುಸಿದು ಬಿದ್ದಿದೆ.
ಘಟನೆ ಸಂಭವಿಸಿದ ಕೆಲ ಹೊತ್ತಿನಲ್ಲೇ ಮನೋಜ್ ಚಾನ್ಸೋರಿಯಾ ಅವರ ಮೊಬೈಲ್ ಗೆ ಅಮೆರಿಕದಲ್ಲಿದ್ದ ಮಗ ಕರೆ ಮಾಡಿದ್ದಾನೆ ಆದರೆ ತಂದೆ ಕರೆ ಸ್ವೀಕರಿಸಲಿಲ್ಲ ಬಳಿಕ ತಾಯಿಯ ಮೊಬೈಲ್ ಗೆ ಕರೆ ಮಾಡಿದ್ದಾನೆ ಅವರೂ ಕರೆ ಸ್ವೀಕರಿಸಲಿಲ್ಲ ಬಳಿಕ ಭಯಗೊಂಡ ಮಗ ಮುಂಬೈ ನಲ್ಲಿರುವ ತನ್ನ ಸ್ನೇಹಿತರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾನೆ, ಸ್ನೇಹಿತರು ಮುಂಬೈ ನಲ್ಲಿ ಅವರು ತಂಗಿದ್ದ ಸ್ಥಳಗಳನ್ನು ಪರಿಶೀಲಿಸಿ ಎಲ್ಲೂ ಪತ್ತೆಯಾಗದ ಬಳಿಕ ಪೊಲೀಸರಿಗೆ ದೂರು ನೀಡಿದ್ದಾರೆ ಪೊಲೀಸರು ದಂಪತಿಗಳ ಮೊಬೈಲ್ ಫೋನ್ಗಳನ್ನು ಟ್ರ್ಯಾಕ್ ಮಾಡಿದ ವೇಳೆ ಪೆಟ್ರೋಲ್ ಬಂಕ್ ಬಳಿ ಇರುವ ಸುಳಿವು ನೀಡಿದೆ ಇದಾದ ಬಳಿಕ ಕಾರ್ಯಾಚರಣೆ ನಡೆಸಿದ ವೇಳೆ ಹೋರ್ಡಿಂಗ್ ಬಿದ್ದಿರುವ ಅವಶೇಷಗಳ ಒಳಗೆ ನುಜ್ಜುಗುಜ್ಜಾದ ಕಾರಿನಲ್ಲಿ ದಂಪತಿಗಳ ಮೃತ ದೇಹ ಪತ್ತೆಯಾಗಿದೆ.
ಈ ದುರಂತದಲ್ಲಿ ಈವರೆಗೆ 16 ಮಂದಿ ಸಾವನ್ನಪ್ಪಿದ್ದು, 41 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಿಸಿದವರಲ್ಲಿ 34 ಮಂದಿ ಬದುಕುಳಿದಿದ್ದಾರೆ ಮತ್ತು ಮುಂಬೈನ ವಿವಿಧ ಆಸ್ಪತ್ರೆಗಳಿಂದ ಚಿಕಿತ್ಸೆ ಪಡೆದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿದಿದ್ದ ಶ್ಯಾಮ್ ರಂಗೀಲಾ ನಾಮಪತ್ರ ತಿರಸ್ಕೃತ