ಮುಂಬಯಿ : ಭೂ-ರಾಜಕೀಯ ಉದ್ವಿಗ್ನತೆಗಳು ಜಾಗತಿಕ ಶೇರು ಮಾರುಕಟ್ಟೆಗಳ ಮೇಲೆ ಪ್ರಭಾವ ಬೀರಿದ್ದು ಅಂತೆಯೇ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 88 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಬೆಳಗ್ಗೆ 10.27ರ ಸುಮಾರಿಗೆ ಸೆನ್ಸೆಕ್ಸ್ ಉತ್ತಮ ಚೇತರಿಕೆಯನ್ನು ದಾಖಲಿಸಿ ತನ್ನ ಆರಂಭಿಕ ನಷ್ಟವನ್ನು 4 ಅಂಕಗಳಿಗೆ ಇಳಿಸಿಕೊಂಡು 29,45.68 ಅಂಕಗಳ ಮಟ್ಟದಲ್ಲೂ, ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.30 ಅಂಕಗಳ ನಷ್ಟದೊಂದಿಗೆ 9,14.50 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇಂದಿನ ವಹಿವಾಟಿನಲ್ಲಿ ಐಓಸಿ, ಸಿಪ್ಲಾ, ನೆಸ್ಲೆ, ಇಂಡಿಯನ್ ಹ್ಯೂಮ್ ಪೈಪ್, ರಿಲಯನ್ಸ್ ಪವರ್ ಮೊದಲಾದ ಶೇರುಗಳು ಹೂಡಿಕದಾರರ ಮತ್ತು ವಹಿವಾಟು ದಾರರ ಉತ್ತಮ ಬೆಂಬಲವನ್ನು ಪಡೆದುಕೊಂಡು ಸುದ್ದಿ ಮಾಡಿದವು.
ಇಂದಿನ ಆರಂಭಿಕ ವಹಿವಾಟಿನ ಟಾಪ್ ಗೇನರ್‌ಗಳು : ಡಾ. ರೆಡ್ಡೀಸ್ ಲ್ಯಾಬ್, ಅದಾನಿ ಪೋರ್ಟ್, ಗ್ರಾಸಿಂ, ಪವರ್ ಗ್ರಿಡ್ ಮತ್ತು ಗೇಲ್. ಟಾಪ್ ಲೂಸರ್‌ಗಳು : ಭಾರ್ತಿ ಇನ್‌ಫ್ರಾಟೆಲ್, ಸನ್ ಫಾರ್ಮಾ, ಹಿಂಡಾಲ್ಕೊ, ಏಶ್ಯನ್ ಪೇಂಟ್ಸ್, ಅಂಬುಜಾ ಸಿಮೆಂಟ್ಸ್ .
ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಇಂದಿನ ಆರಂಭಿಕ ವಹಿವಾಟಿನಲ್ಲಿ ದೌರ್ಬಲ್ಯ ತೋರಿಬಂತು. ಅಂತೆಯೇ ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ.0.21,ಜಪಾನಿನ ನಿಕ್ಕಿ ಶೇ.0.31 ಹಾಗೂ ಶಾಂಘೈನ ಕಾಂಪೋಸಿಟ್ ಇಂಡೆಕ್ಸ್ ಶೇ.1.02ರಷ್ಟು ಕುಸಿದವು.