ಮುಂಬೈ: ವಾಣಿಜ್ಯ ನಗರಿ ಮುಂಬೈಯಲ್ಲಿ ಧಾರಾಕಾರ ಮಳೆ (ಆಗಸ್ಟ್ 04-2020) ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ನಗರ ಬಹುತೇಕ ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ಅಲ್ಲದೇ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿರುವ ನಿಟ್ಟಿನಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಜಾರಿಗೊಳಿಸಿದೆ.
ಭಾರೀ ಗಾಳಿ, ಮಳೆಯಿಂದಾಗಿ ಬೃಹನ್ಮುಂಬಯಿ ಮುನ್ಸಿಪಲ್ ಕಾರ್ಪೋರೇಷನ್(ಬಿಎಂಸಿ) ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಅಲರ್ಟ್ ಸಂದೇಶ ರವಾನಿಸಲಾಗಿದೆ. ಅಷ್ಟೇ ಅಲ್ಲ ಸಮುದ್ರ ಪ್ರದೇಶ ಮತ್ತು ತಗ್ಗುಪ್ರದೇಶಗಳಿಗೆ ತೆರಳದಂತೆ ಜನರಿಗೂ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರೀ ಮಳೆಯಿಂದಾಗಿ ಸಮುದ್ರದಲ್ಲಿ 4.51 ಮೀಟರ್ ನಷ್ಟು ಎತ್ತರದ ಅಲೆಗಳು ಮೇಲೆಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಭದ್ರತಾ ಏಜೆನ್ಸಿಗೂ ಎಚ್ಚರಿಕೆ ಸಂದೇಶ ರವಾನಿಸಿರುವುದಾಗಿ ಬಿಎಂಸಿ ಎಚ್ಚರಿಕೆ ಸಂದೇಶ ರವಾನಿಸಿದೆ ಎಂದು ವರದಿ ತಿಳಿಸಿದೆ.
ಐಎಂಡಿ(ಭಾರತೀಯ ಹವಾಮಾನ ಇಲಾಖೆ) ಪ್ರಕಾರ, ಮಹಾರಾಷ್ಟ್ರದ ಮುಂಬೈ, ಥಾಣೆ ಮತ್ತು ರಾಯಗಢ್ ಜಿಲ್ಲೆಗಳಲ್ಲಿ ಆಗಸ್ಟ್ 4 ಮತ್ತು 5ರಂದು ಭಾರೀ ಮಳೆಯಾಗಲಿದೆ ಎಂದು ಹೇಳಿದೆ. ರತ್ನಗಿರಿ ಜಿಲ್ಲೆಯಲ್ಲಿಯೂ ಆಗಸ್ಟ್ 4ರಂದು ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.