ಮುಂಬೈ: ಕಳೆದ 24ಗಂಟೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ವಾಣಿಜ್ಯ ನಗರಿ ಮುಂಬೈ ಮತ್ತೆ ತತ್ತರಿಸಿ ಹೋಗಿದ್ದು, ಸಂಚಾರ ದಟ್ಟಣೆಯಿಂದಾಗಿ ರೈಲು ಸಂಚಾರ ಕೂಡಾ ನಿಧಾನಗತಿಯಲ್ಲಿ ಸಾಗಿತ್ತು. ಇದರಿಂದಾಗಿ ಸೋಮವಾರ ಸಾವಿರಾರು ವಿದ್ಯಾರ್ಥಿಗಳು, ಕಚೇರಿಗೆ ಹೊರಟಿದ್ದ ಉದ್ಯೋಗಿಗಳು ತೊಂದರೆ ಅನುಭವಿಸುವಂತಾಯಿತು. ಅಲ್ಲದೇ ಮಳೆಗೆ ನಾಲ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಜನನಿಬಿಡ ಪ್ರದೇಶವಾದ ಮುಂಬೈನ ವಾಡ್ಲಾ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಬೃಹತ್ ಕಂಪೌಂಡ್ ಗೋಡೆ ಕುಸಿದು ಬಿದ್ದ ಪರಿಣಾಮ ಆರು ಕಾರುಗಳು ನಜ್ಜುಗುಜ್ಜಾಗಿ ಹೂತು ಹೋಗಿದ್ದರೆ, ಕೆಲವು ಕಾರುಗಳು ಜಖಂಗೊಂಡಿವೆ. ಅಲ್ಲದೇ ಫ್ಲ್ಯಾಟ್ ನಲ್ಲಿದ್ದ ಸುಮಾರು 200ಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾನಗರ ಪಾಲಿಕೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳು ಲಾಯ್ಡ್ಸ್ ಎಸ್ಟೇಟ್ ನಲ್ಲಿ ಜನರನ್ನು ಸ್ಥಳಾಂತರಿಸಿದ್ದಾರೆ. ಇಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿ ವಿವರಿಸಿದೆ.
ಮಲಾಡ್ ಪ್ರದೇಶದಲ್ಲಿನ ತೆರೆದ ಗುಂಡಿಗೆ 15 ವರ್ಷದ ಬಾಲಕನೊಬ್ಬ ಬಿದ್ದು ಸಾವನ್ನಪ್ಪಿದ್ದರೆ, ಥಾಣೆಯಲ್ಲಿ ಗೋಡೆ ಕುಸಿದ ಪರಿಣಾಮ 13 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ನಿನ್ನೆ ಧೋಬಿ ತಾಲಾವೊ ಪ್ರದೇಶದ ಆಜಾದ್ ಮೈದಾನ ಪ್ರದೇಶದಲ್ಲಿನ ಮರ ಉರುಳಿ ಬಿದ್ದು ಇಬ್ಬರು ಸಾವನ್ನಪ್ಪಿದ್ದರು.
ಅಂಧೇರಿ, ಖಾರ್, ಮಲಾಡ್ ಸೇರಿದಂತೆ ಹಲವು ತಗ್ಗುಪ್ರದೇಶಗಳು ಸಂಪೂರ್ಣ ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿ ಹೇಳಿದೆ.