Advertisement

ಹುಸಿ ಬಾಂಬ್‌ ಬೆದರಿಕೆ ಕರೆ: ಇಬ್ಬರ ಬಂಧನ

08:59 PM Aug 07, 2021 | Team Udayavani |

ಮುಂಬಯಿ: ಮುಂಬಯಿಯ ಮೂರು ರೈಲ್ವೇ ನಿಲ್ದಾಣ ಮತ್ತು ನಟ ಅಮಿತಾಬ್‌ ಬಚ್ಚನ್‌ ಅವರ ಬಂಗ್ಲೆಯಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ ಎಂದು ಹುಸಿ ಕರೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಬಂಧಿತರಲ್ಲಿ ಓರ್ವ ಟ್ರಕ್‌ ಚಾಲಕನಾಗಿದ್ದು, ಶುಕ್ರವಾರ ರಾತ್ರಿ 9.45ರ ಸುಮಾರಿಗೆ ಮುಂಬಯಿ ಪೊಲೀಸರ ಮುಖ್ಯ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಸ್‌, ಬೈಕಲಾ, ದಾದರ್‌ ರೈಲ್ವೇ ನಿಲ್ದಾಣಗಳಲ್ಲಿ ಮತ್ತು ಅಮಿತಾಬ್‌ ಬಚ್ಚನ್‌ ಅವರ ಮನೆಯಲ್ಲಿ ಬಾಂಬ್‌ ಇರಿಸಲಾಗಿದೆ ಎಂದು ಹೇಳಿದ್ದ. ಈ ನಾಲ್ಕು ಸ್ಥಳಗಳಲ್ಲಿ ಪೊಲೀಸರು ತತ್‌ಕ್ಷಣ ಶೋಧ ನಡೆಸಿದ್ದು ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ ಎಂದು ತಿಳಿಸಿದ್ದಾರೆ.

ಸಿಎಸ್‌ಎಂಟಿ ನಿಲ್ದಾಣದ ಎಲ್ಲ ಪ್ಲಾಟ್‌ಫಾರ್ಮ್, ವಿಭಾಗೀಯ ರೈಲ್ವೇ ಮ್ಯಾನೇಜರ್‌ ಕಚೇರಿ, ಪಾರ್ಕಿಂಗ್‌ ಮತ್ತು ಇತರ ಹತ್ತಿರದ ಪ್ರದೇಶಗಳನ್ನು ಬಿಡಿಡಿಎಸ್‌ ಮತ್ತು ಶ್ವಾನದಳಗಳು ಶೋಧ ನಡೆಸಿದರು. ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌), ತ್ವರಿತ ಪ್ರತಿಕ್ರಿಯೆ ತಂಡಗಳು (ಕ್ಯೂಆರ್‌ಟಿ), ಮರೀನ್‌ ಡ್ರೈವ್‌ ಮತ್ತು ಆಜಾದ್‌ ಮೈದಾನ ಸೇರಿದಂತೆ ಕೆಲವು ಸ್ಥಳೀಯ ಪೊಲೀಸ್‌ ಠಾಣೆಗಳ ತಂಡಗಳು ಕಾರ್ಯಾಚರಣೆ ನಡೆಸಿವೆ. ಆದರೆ ಅನುಮಾನಾಸ್ಪದವಾಗಿ ಏನೂ ಕಂಡುಬಂದಿಲ್ಲ.

ಪೊಲೀಸರು ಕರೆ ಮಾಡಿದ ಮೊಬೈಲ್‌ ಸಂಖ್ಯೆಯನ್ನು ಟ್ರ್ಯಾಕ್‌ ಮಾಡಿದ್ದು, ಥಾಣೆ ಜಿಲ್ಲೆಯ ಮುಂಬ್ರಾ ಬಳಿಯ ಶಿಲ್‌ಫಾಠಾ ಪ್ರದೇಶದಲ್ಲಿ ಆತನನ್ನು ಪತ್ತೆ ಹಚ್ಚಿದ್ದಾರೆ. ಕರೆ ಮಾಡಿದವ ಮಹಾರಾಷ್ಟ್ರದ ಮರಾಠವಾಡ ಪ್ರದೇಶದ ಟ್ರಕ್‌ ಚಾಲಕರಾಗಿದ್ದಾರೆ. ಆತನಿಗೆ ಕುಡಿಯುವ ಅಭ್ಯಾಸವಿದೆ ಎಂದು ತಿಳಿದುಬಂದಿದೆ. ಆತನೊಂದಿಗೆ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next