ಮಹಾರಾಷ್ಟ್ರ: ಈವರೆಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರ್ತಿಗಳನ್ನು ಧ್ವಂಸಗೈಯುತ್ತಿದ್ದ ಪ್ರಕರಣ ವರದಿಯಾಗುತ್ತಿತ್ತು. ಆದರೆ ಇದೀಗ ಮುಂಬೈನ ದಾದರ್ ನಲ್ಲಿರುವ ದಿ.ಡಾ.ಬಿಆರ್ ಅಂಬೇಡ್ಕರ್ ಅವರ ನಿವಾಸಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶಗೊಳಿಸಿರುವ ಘಟನೆ ನಡೆದಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈನ ದಾದರ್ ನಲ್ಲಿರುವ ಅಂಬೇಡ್ಕರ್ ಅವರ ಐತಿಹಾಸಿಕ “ರಾಜ್ ಗೃಹ” ನಿವಾಸಕ್ಕೆ ಕನಿಷ್ಠ ಇಬ್ಬರು ಅಪರಿಚಿತ ವ್ಯಕ್ತಿಗಳು ಮಂಗಳವಾರ ಸಂಜೆ ಒಳನುಗ್ಗಿದ್ದರು. ಅಷ್ಟೇ ಅಲ್ಲ ಸಿಸಿಟಿವಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್, ಹೂ ಕುಂಡಗಳನ್ನು ಒಡೆದು ಹಾಕಿ ಸ್ಥಳದಿಂದ ಕಾಲ್ಕಿತ್ತಿರುವುದಾಗಿ ವರದಿ ವಿವರಿಸಿದೆ.
ಈ ಘಟನೆಯನ್ನು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಖಂಡಿಸಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಈ ಸುದ್ದಿ ಹರಡುತ್ತಿದ್ದಂತೆಯೇ ಸ್ಥಳಕ್ಕೆ ದಲಿತ ಸಂಘಟನೆಯ ಸದಸ್ಯರು ಆಗಮಿಸಿ ಪ್ರತಿಭಟನೆ ನಡೆಸಿರುವುದಾಗಿ ವರದಿಯಾಗಿದೆ.
ಯಾವುದೇ ಕಾರಣಕ್ಕೂ ರಾಜ್ ಗೃಹ ಪ್ರದೇಶಕ್ಕೆ ತೆರಳಬೇಡಿ, ಅಲ್ಲದೇ ಶಾಂತಿ ಕಾಪಾಡಿ ಎಂದು ಅಂಬೇಡ್ಕರ್ ಮೊಮ್ಮಕ್ಕಳಾದ ಡಾ.ಪ್ರಕಾಶ್ ಅಂಬೇಡ್ಕರ್ ಮತ್ತು ಭೀಮ್ ರಾವ್ ಅಂಬೇಡ್ಕರ್ ಹಾಗೂ ಇತರ ರಾಜಕೀಯ ಮುಖಂಡರು ದಲಿತ ಮುಖಂಡರಲ್ಲಿ ಮನವಿ ಮಾಡಿಕೊಂಡಿರುವುದಾಗಿ ವರದಿ ವಿವರಿಸಿದೆ.