ಮುಂಬಯಿ: ಕೆಲ ದಿನಗಳ ಹಿಂದೆ ಮುಂಬಯಿಯ ಡೋಂಗ್ರಿಯಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ 29ರ ಹರೆಯದ ವ್ಯಕ್ತಿಯನ್ನು ನೇಪಾಳದ ಗಡಿ ಭಾಗದಲ್ಲಿ ರವಿವಾರ ಬಂಧಿಸಲಾಗಿದೆ.
ಹಣದ ವಿವಾದದಿಂದಾಗಿ ಬಬ್ಲೂ ಯಾದವ್ ಮತ್ತು ಇನ್ನೋರ್ವ ವ್ಯಕ್ತಿ ಸೇರಿಕೊಂಡು ಮುಖೇಶ್ ಗುಪ್ತಾ ಎನ್ನುವವರನ್ನು ಕೊಲೆ ಮಾಡಿದ್ದರು. ಘಟನೆಯ ಅನಂತರ ಯಾದವ್ ನೇಪಾಳಕ್ಕೆ ಪರಾರಿಯಾಗಿದ್ದರೆ, ಮತ್ತೊಬ್ಬ ತನ್ನ ಊರಾದ ಉತ್ತರ ಪ್ರದೇಶದ ಮೀರಗಂಜ್ ಗೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಸೆ.15 ರಂದು ಕೊಲೆ ಬೆಳಕಿಗೆ ಬಂದ ಅನಂತರ ನಾವು ಆರೋಪಿಗಳನ್ನು ಬೇಟೆಯಾಡಲು ತಂಡಗಳನ್ನು ರಚಿಸಿದೆವು. ಸುಳಿವಿನ ಮೇರೆಗೆ ನಾವು ಯಾದವ್ ನನ್ನು ಇಂಡೋ-ನೇಪಾಳ ಗಡಿಯಲ್ಲಿರುವ ಅರಣ್ಯ ಪ್ರದೇಶದಿಂದ ಬಂಧಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಅವರೇನೋ ಶಬ್ದ ಬಳಕೆ ಮಾಡಿದರು, ಇನ್ನು ಈ ರೀತಿ ಮಾತಾಡಬಾರದು ಅಷ್ಟೇ: ವಾರ್ನ್ ಮಾಡಿದ ನಾರಾಯಣಗೌಡ
ಗುಪ್ತಾ ಮತ್ತು ಯಾದವ್ ಬಡಗಿಗಳಾಗಿದ್ದು, ಡೋಂಗ್ರಿಯ ಫ್ಲಾಟೋಂದರಲ್ಲಿ ಗುತ್ತಿಗೆ ಕೆಲಸ ಪಡೆದಿದ್ದರು. ಹಣಕ್ಕೆ ಸಂಬಂಧಿಸಿದಂತೆ ಅವರ ನಡುವೆ ವಿವಾದ ಉಂಟಾಗಿತ್ತು ಎಂದು ಡೋಂಗ್ರಿ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಅವಿನಾಶ್ ತಿಳಿಸಿದ್ದಾರೆ. ಆರೋಪಿ ಯಾದವ್ ನನ್ನು ಸೆ. 24 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.