ಮುಂಬಯಿ: ನಗರದಲ್ಲಿ ಸುಮಾರು 3ಲ.ದಷ್ಟು ಬೀದಿ ಬದಿ ವ್ಯಾಪಾರಿಗಳಿದ್ದು ಪ್ರತಿಯೋರ್ವರು ಪ್ರತಿದಿನ 20-100ರೂ.ಗಳವರೆಗೆ ಹಫ್ತಾವನ್ನು ಪಾಲಿಕೆಯ ಅತಿಕ್ರಮಣ ನಿಯಂತ್ರಣ ದಳದ ಅಧಿಕಾರಿಗಳಿಗೆ ನೀಡುತ್ತಿದ್ದು ಈ ಮೂಲಕ ತಮ್ಮ ವ್ಯಾಪಾರವನ್ನು ರಕ್ಷಿಸಿಕೊಳ್ಳುತ್ತಿದ್ದಾರೆ. ಅಂದರೆ ನಗರದ ಬೀದಿ ಬದಿಗಳಲ್ಲಿ ವ್ಯಾಪಾರ ನಡೆಸಲು ಈ ವ್ಯಾಪಾರಿಗಳು ಪ್ರತಿದಿನ 1.5 ಕೋ. ರೂ.ಗಳ ಹಫ್ತಾವನ್ನು ನೀಡುತ್ತಿದ್ದಾರೆ.
ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಪ್ರತಿಯೊಂದೂ ವಾರ್ಡ್‌ನಲ್ಲಿಯೂ ಅತಿಕ್ರಮಣ ನಿಯಂತ್ರಣ ದಳವಿದ್ದು ಮೂರ್‍ನಾಲ್ಕು ದಿನಗಳಿಗೊಮ್ಮೆಯೋ ವಾರ ಕ್ಕೊಮ್ಮೆಯೋ ನೆಪಮಾತ್ರಕ್ಕಾಗಿ ಬೀದಿ ಬದಿ ವ್ಯಾಪಾರಿಗಳ ತೆರವು ಕಾರ್ಯಾಚರಣೆಯನ್ನು ಕೈಗೊಳ್ಳುತ್ತದೆ. ವಿಚಿತ್ರ ಎಂದರೆ ಈ ದಳ ಕಾರ್ಯಾಚರಣೆ ಆರಂಭಿಸುವುದಕ್ಕೆ ಸುಮಾರು ಅರ್ಧ ತಾಸು ಮುನ್ನ ಬೀದಿ ಬದಿ ವ್ಯಾಪಾರಿಗಳಿಗೆ ಸೂಚನೆ ಬರುತ್ತದೆ. ತತ್‌ಕ್ಷಣವೇ ವ್ಯಾಪಾರಿಗಳು ತಮ್ಮ ಸಾಮಾನುಗಳನ್ನು ಚೀಲಗಳಲ್ಲಿ ತುಂಬಿ ಜಾಗವನ್ನು ಖಾಲಿ ಮಾಡುತ್ತಾರೆ. ಎಲ್ಲೋ ಒಂದೊಂದು ದಿನ ಪಾಲಿಕೆ ಸಿಬಂದಿಗಳು ತೆರವು ಕಾರ್ಯಾಚರಣೆ ಸಂಬಂಧ ವ್ಯಾಪಾರಿಗಳಿಗೆ ಮಾಹಿತಿಯನ್ನು ನೀಡದೇ ಹೋದಲ್ಲಿ ಮಾತ್ರ ಸಿಬಂದಿಗಳು ಬೀದಿಬದಿ ವ್ಯಾಪಾರಿಗಳ ಸಾಮಾನು, ಸರಂಜಾಮುಗಳನ್ನು ಪಾಲಿಕೆಯ ಗಾಡಿಗೆ ತುಂಬಿ ಕೊಂಡೊಯ್ಯುತ್ತಾರೆ.
ದಿನವಹಿ 120 ಕೋ. ವ್ಯವಹಾರಪಾಲಿಕೆಯ ಅಂಕಿಅಂಶಗಳ ಪ್ರಕಾರ ನಗರದಲ್ಲಿನ ಬೀದಿಬದಿ ವ್ಯಾಪಾರಿಗಳು ಪ್ರತಿದಿನ 120 ಕೋ. ರೂ.ಗಳಷ್ಟು ವ್ಯವಹಾರವನ್ನು ನಡೆಸುತ್ತಿದ್ದಾರೆ. ಈ ವ್ಯಾಪಾರಿಗಳಿಂದ ಹಫ್ತಾ ವಸೂಲಿಗಾಗಿ ಕೆಲ ವ್ಯಕ್ತಿಗಳನ್ನು ನೇಮಿಸಲಾಗಿದ್ದು ಇವರು ದಿನವಹಿ ವ್ಯಾಪಾರಿಗಳಿಂದ ಹಣವನ್ನು ವಸೂಲು ಮಾಡಿ ಅದನ್ನು ಪಾಲಿಕೆ ಮತ್ತು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸುತ್ತಾರೆ. ಇನ್ನು ಶೇs…ಗಳ ನಿಯಂತ್ರಣದಲ್ಲಿರುವ ಮಾರುಕಟ್ಟೆಗಳಲ್ಲಿನ ವ್ಯಾಪಾರಿಗಳನ್ನು ಬಿಎಂಸಿ ಅಧಿಕಾರಿಗಳು ನೇರವಾಗಿ ನಿರ್ವಹಿಸುತ್ತಿದ್ದಾರೆ. ಕೆಲ ಮಾರುಕಟ್ಟೆಗಳಲ್ಲಿ ವಾರಕ್ಕೊಮ್ಮೆ ವ್ಯಾಪಾರಿಗಳಿಂದ ಹಫ್ತಾ ಪಾವತಿಯಾಗುತ್ತಿದ್ದರೆ ಇತರೆ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಪ್ರತಿನಿತ್ಯ ಹಫ್ತಾವನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಹಫ್ತಾದ ಪ್ರಮಾಣವೂ ಒಂದು ಮಾರುಕಟ್ಟೆಯಿಂದ ಒಂದು ಮಾರುಕಟ್ಟೆಗೆ ಬದಲಾಗುತ್ತದೆ. ಚರ್ಚ್ ಗೇಟ್ ನಿಲ್ದಾಣದಿಂದ ಸಿಎಸ್‌ಎಂಟಿವರೆಗಿನ ರಸ್ತೆ ಬದಿಯಲ್ಲಿನ ವ್ಯಾಪಾರಿಗಳು ಪ್ರತಿದಿನ 50ರೂ.ಗಳನ್ನು ಪಾವತಿಸುತ್ತಿದ್ದಾರೆ. ಪ್ರತಿನಿತ್ಯದ ಪಾವತಿಯ ಹೊರತಾಗಿಯೂ ಪಾಲಿಕೆಯ ವಾಹನ ಕಂಡುಬಂದಲ್ಲಿ ಈ ವ್ಯಾಪಾರಿಗಳೂ ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಜಾಗ ಖಾಲಿ ಮಾಡಲೇ ಬೇಕಿದೆ. ತಮ್ಮ ವ್ಯಾಪಾರದ ಬಗೆಗೆ ಖಾತರಿ ಇಲ್ಲವಾಗಿದ್ದರೂ ದಿನನಿತ್ಯ ಹಫ್ತಾವನ್ನು ಪಾವತಿಸುವುದು ಅನಿವಾರ್ಯವಾಗಿದೆ ಎಂದು ನಗರದ ಫೋರ್ಟ್ ಪ್ರದೇಶದ ಬೀದಿಬದಿ ವ್ಯಾಪಾರಿಯೋರ್ವರು ಹೇಳಿದರು.
ಎರಡೆರಡು ತಂಡಗಳಿಗೆ ಹಫ್ತಾ
ಬಾಂದ್ರಾ ಲಿಂಕಿಂಗ್ ರೋಡ್‌ನಲ್ಲಿನ ಬೀದಿಬದಿ ವ್ಯಾಪಾರಿಗಳು ಪ್ರತಿದಿನ 100ರೂ.ಗಳ ಹಫ್ತಾವನ್ನು ನೀಡುತ್ತಿದ್ದಾರೆ. ಇನ್ನು ಕುರ್ಲಾ ರೈಲ್ವೇ ನಿಲ್ದಾಣದ ಬೀದಿಬದಿ ವ್ಯಾಪಾರಿಗಳು ಬಿಎಂಸಿ ಸಿಬಂದಿಗಳಿಗೆ ಪ್ರತಿನಿತ್ಯ 20ರೂ.ಗಳನ್ನು ಪಾವತಿಸುತ್ತಿದ್ದಾರೆ. ಕುರ್ಲಾದ ಬೀದಿ ಬದಿ ವ್ಯಾಪಾರಿಗಳು ವಾರ್ಡ್ ಮಟ್ಟದ ದಳ ಮತ್ತು ಬಿಎಂಸಿ ಕೇಂದ್ರೀಯ ಅತಿಕ್ರಮಣ ತೆರವು ದಳ ಹೀಗೆ ಎರಡು ತಂಡಗಳಿಗೆ ಹಫ್ತಾವನ್ನು ಪಾವತಿಸುತ್ತಿದ್ದಾರೆ. ಬಿಎಂಸಿಯ ಕೇಂದ್ರೀಯ ಅತಿಕ್ರಮಣ ತೆರವು ದಳ ದಕ್ಷಿಣ ಮುಂಬಯಿನ ಫ್ಯಾಶನ್ ಸ್ಟ್ರೀಟ್‌ನಲ್ಲಿನ ಅಕ್ರಮ ಬೀದಿಬದಿ ವ್ಯಾಪಾರಿಗಳೊಂದಿಗೆ ಕೈಜೋಡಿಸಿರುವುದು ಪತ್ತೆಯಾದ ಬಳಿಕ ನಾಲ್ಕು ತಿಂಗಳುಗಳ ಹಿಂದೆ ಈ ದಳವನ್ನು ವಿಸರ್ಜಿಸಲಾಗಿತ್ತು.
ಪಾಲಿಕೆಯ ತಂಡಗಳು ಬೀದಿಬದಿ ವ್ಯಾಪಾರಿಗಳ ಸಾಮಾನು ಸರಂಜಾಮುಗಳನ್ನು ವಶಪಡಿಸಿ ಕೊಂಡ ಸಂದರ್ಭದಲ್ಲಿ ಅದನ್ನು ಮರು ಸ್ವಾಧೀನಪಡಿಸಿಕೊಳ್ಳಲು ಹೆಚ್ಚುವರಿಯಾಗಿ ಪ್ರತಿಯೊಂದೂ ಸರಕಿಗೂ 20-100ರೂ.ಗಳನ್ನು ವ್ಯಾಪಾರಿಗಳು ಪಾವತಿಸಬೇಕಿದೆ.