Advertisement

ದರೋಡೆಗೈದ ಕಳ್ಳನ ಹೆಡೆಮುರಿ ಕಟ್ಟಿದ ಕನ್ನಡಿಗ

12:30 AM Jan 17, 2019 | Team Udayavani |

ಮುಂಬಯಿ: ರೈಲಿನಲ್ಲಿ ಮತ್ತು ಬರಿಸುವ ಔಷಧ ನೀಡಿ ದರೋಡೆ ಮಾಡಿದ ಕಳ್ಳನೋರ್ವನನ್ನು ಸಂತ್ರಸ್ತರೋರ್ವರು ಹದಿನೈದು ದಿನಗಳ ಬಳಿಕ ಸ್ವತಃ ಹಿಡಿದು ಪೊಲೀಸರಿಗೊಪ್ಪಿಸಿದ ರೋಚಕ ಘಟನೆ ಗೋರೆಗಾಂವ್‌ನಲ್ಲಿ ನಡೆದಿದೆ. ಇಂಥ ದಿಟ್ಟತನ ತೋರಿದ್ದು ಮೂಲತಃ ಬಂಟ್ವಾಳದ ಪಾಣೆಮಂಗಳೂರಿನ ರಾಜೇಶ್‌ ಕುಲಾಲ್‌ (31). ಮುಂಬಯಿಯಲ್ಲಿ ಎಲೆಕ್ಟ್ರಿಕಲ್‌ ಕಾಂಟ್ರ್ಯಾಕ್ಟರ್‌ ಆಗಿ ಕೆಲಸ ಮಾಡುತ್ತಿರುವ ರಾಜೇಶ್‌ ಸೋಮವಾರ ಗೋರೆ ಗಾಂವ್‌ನಲ್ಲಿ ದರೋಡೆ ಕೋರರಲ್ಲಿ ಓರ್ವನನ್ನು ಹಿಡಿಯಲು ಯಶಸ್ವಿಯಾಗಿದ್ದಾರೆ. 

Advertisement

ನಡೆದಿದ್ದೇನು? 
ಪತ್ನಿಯ ಜನ್ಮದಿನ ಆಚರಿಸಲು ಡಿ. 29ರಂದು ರಾಜೇಶ್‌ ಮಂಗಳೂರಿಗೆ ಹೊರಟಿದ್ದರು. ಹೊಸ ವರ್ಷ ನಿಮಿತ್ತ ವಿಮಾನ ಯಾನ ದುಬಾರಿಯಾಗಿದ್ದರಿಂದ ಕೊನೆ ಕ್ಷಣದಲ್ಲಿ ರೈಲಿನಲ್ಲಿ ಊರಿಗೆ ಹೊರಟಿದ್ದರು. ಜಾಮ್‌ನಗರ ಎಕ್ಸ್‌ಪ್ರೆಸ್‌ ಮೂಲಕ ಜನರಲ್‌ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. 

ರತ್ನಾಗಿರಿ ಬಳಿಕ ಸೀಟು ಹೊಂದುವ ನೀರಿಕ್ಷೆಯಲ್ಲಿದ್ದರು. ಮುಂದಿನ ಕಂಪಾರ್ಟ್‌ಮೆಂಟ್‌ನಲ್ಲಿದ್ದ ಸ್ನೇಹಿತರ ಬಳಿ ಮಾತನಾಡಿ ವಾಪಸ್‌ ಸೀಟಿಗೆ ಬಂದು ಕುಳಿತಿದ್ದಾಗ, ಇತರ ಮೂವರು ಪುರುಷರೂ ಅಲ್ಲಿದ್ದರು. ಸಂಜೆ 6 ಗಂಟೆ ವೇಳೆಗೆ ಅವರು ರಾಜೇಶ್‌ಗೆ ಬಿಸ್ಕೆಟ್‌ ನೀಡಿದ್ದು, ನೀರು ಕುಡಿದ ಬಳಿಕ ಪ್ರಜ್ಞಾಹೀನರಾಗಿದ್ದರು. ಅನಂತರ ಕಾಸರಗೋಡು ರೈಲ್ವೇ ನಿಲ್ದಾಣದಲ್ಲಿ ಅವರನ್ನು ಕೆಳಗಿಳಿಸಿ ಮಂಗಳೂರು ಸೆಂಟ್ರಲ್‌ ರೈಲಿಗೆ ಹತ್ತಿಸಲಾಗಿದೆ. ಮರುದಿನ ಬೆಳಗ್ಗೆ  ಮಂಗಳೂರು ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ರೈಲ್ವೇ ಪೊಲೀಸರು ವೆನಾಕ್‌ಗೆ ದಾಖಲಿಸಿ ಚಿಕಿತ್ಸೆ ನೀಡಿದ್ದರು. ಅಲ್ಲಿವರೆಗೂ ರಾಜೇಶರಿಗೆ ಇದು ಅರಿವಿಗೆ ಬಂದಿರಲಿಲ್ಲ. ಮೂರು ದಿನಗಳ ಬಳಿಕ ಅವರು ಚೇತರಿಸಿಕೊಂಡು ಘಟನೆಯ ಬಗ್ಗೆ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ದೂರು ದಾಖಲಿಸಿದ್ದರು.

ದರೋಡೆಕೋರನ ಕಾಲರ್‌ ಹಿಡಿದರು!
ರಾಜೇಶ್‌ ಸೋಮವಾರ ಉದ್ಯೋಗ ನಿಮಿತ್ತ ಭಾಯಂದರ್‌ನಲ್ಲಿ  ಲೋಕಲ್‌ ರೈಲು ಹಿಡಿದಿದ್ದು, ರೈಲು ಗೋರೆಗಾಂವ್‌ ನಿಲ್ದಾಣಕ್ಕೆ ಸಮೀಪಿಸುತ್ತಿದ್ದಂತೆ ರೈಲಿನಲ್ಲಿ ಮೂವರನ್ನು ನೋಡಿದ್ದಾರೆ. ಇವರಲ್ಲಿ ಇಬ್ಬರನ್ನು ಎಲ್ಲೋ ನೋಡಿದಂತೆ ಆಗಿದ್ದು, ಕೂಡಲೇ ಅವರಿಗೆ ಬಿಸ್ಕೆಟ್‌, ಮತ್ತಿನೌಷಧ ತಿಂದು ಪ್ರಜ್ಞಾಹೀನನಾಗಿದ್ದು ನೆನಪಾಗಿದೆ. ಕೂಡಲೇ ಅವರಲ್ಲೊಬ್ಬನ ಶರಟಿನ ಕಾಲರನ್ನು ರಾಜೇಶ್‌ ಹಿಡಿದಿದ್ದು, ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆ ಇಬ್ಬರು ರೈಲಿನಿಂದ ಜಿಗಿದು ಪರಾರಿಯಾಗಿದ್ದು, ಸಹ ಪ್ರಯಾಣಿಕರ ಸಹಾಯದಿಂದ  ಓರ್ವನನ್ನು ಪೊಲೀಸರಿಗೊಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು  ಮಧ್ಯಪ್ರದೇಶ ಮೂಲದ ದೀಪಕ್‌ ಸಾಹು (35) ಎಂದು ಗುರುತಿಸಲಾಗಿದೆ. ಈತ ಗ್ಯಾಂಗ್‌ ಒಂದರಲ್ಲಿ ಸಕ್ರಿಯವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  

15 ಸಾವಿರ, ಮೊಬೈಲ್‌ ಲಪಟಾಯಿಸಿದ್ದರು!
ದರೋಡೆಕೋರರು, 15 ಸಾವಿರ ನಗದು, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌, 2 ಫೋನ್‌ಗಳನ್ನು ಲಪಟಾಯಿಸಿದ್ದರು. ಮಂಗಳೂರು ನಿಲ್ದಾಣದಲ್ಲಿ ಬಂದು ಬಿದ್ದ ಕಾರಣ ಪಕ್ಕೆಲುಬಿಗೆ ಗಾಯವಾಗಿತ್ತು. ರಾಜೇಶ್‌ ಅವರಿಗೆ ಮತ್ತಿನೌಷಧ ನೀಡಿದ ಬಗ್ಗೆ ವೆನಾಕ್‌ ವೈದ್ಯರು ವರದಿ ನೀಡಿದ್ದು, ಪನ್ವೇಲ್‌ನಲ್ಲೂ ದೂರು ದಾಖಲಾಗಿತ್ತು. 

Advertisement

 ಆ ಘಟನೆ ನೆನಪಿಸಿಕೊಂಡಾಗ ಸತ್ತು ಬದುಕಿ ಬಂದ ಅನುಭವವಾಗುತ್ತದೆ. ನನ್ನಂತೆ ಬೇರೆಯವರು ಇವರಿಂದ ನೋವು ಅನುಭವಿಸಬಾರದೆಂಬ ಉದ್ದೇಶದಿಂದ ಆರೋಪಿಗಳನ್ನು ಹಿಡಿಯಲು ಮುಂದಾದೆ. ಸಹ ಪ್ರಯಾಣಿಕರು ಪ್ರಾರಂಭದಲ್ಲೇ ಸಹಕಾರ ನೀಡಿದ್ದರೆ ಎಲ್ಲರನ್ನೂ ಹಿಡಿಯಬಹುದಿತ್ತು. ಕಳ್ಳರು ಎಂದು ಬೊಬ್ಬೆ ಹಾಕಿದ್ದರಿಂದ ಮತ್ತೂಬ್ಬರ ನೆರವಿನಲ್ಲಿ ಓರ್ವನನ್ನು ಮಾತ್ರ ಹಿಡಿಯಲು ಸಾಧ್ಯವಾಗಿದೆ. ವಿಲಾಸಿಗರ ರೀತಿ ಇರುವ ಅವರನ್ನು ಕಳ್ಳರೆಂದು ನಂಬಲು ಸಾಧ್ಯವೇ ಇಲ್ಲ. ಪ್ರಯಾಣಿಕರು ಅಪರಿಚಿತರು ನೀಡುವ ಆಹಾರವನ್ನು ದಯವಿಟ್ಟು  ತಿನ್ನಲು ಹೋಗಬೇಡಿ.           
ರಾಜೇಶ್‌ ಕುಲಾಲ್‌

Advertisement

Udayavani is now on Telegram. Click here to join our channel and stay updated with the latest news.

Next