ಹೊಸದಿಲ್ಲಿ : ಕೇವಲ 13,000 ರೂ. ಖರ್ಚಿನ ಮಿತಿ ಹೊಂದಿದ್ದ ಎಸ್‌ಬಿಐ ವಿದೇಶೀ ಟ್ರಾವೆಲ್ ಕಾರ್ಡ್ ಬಳಸಿಕೊಂಡು ಮುಂಬಯಿ ನಿವಾಸಿ ಸಂದೀಪ್ ಕುಮಾರ್ ರಘು ಪೂಜಾರಿ, ಬ್ರಿಟಿಷ್ ಇ-ಕಾಮರ್ಸ್ ವೆಬ್ ಸೈಟ್‌ಗಳಲ್ಲಿ 9.1 ಕೋಟಿ ರೂ. ಖರ್ಚು ಮಾಡಿದ್ದು ಸಿಬಿಐ ಈ ಸಂಬಂಧ ಪೂಜಾರಿ ಮತ್ತು ಇತರ ಅಪರಿಚಿತ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಸಂಚು, ಮೋಸ, ವಂಚನೆ, ಫೋರ್ಜರಿ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆ ಉಲ್ಲಂಘನೆಯ ಕೇಸನ್ನು ದಾಖಲಿಸಿಕೊಂಡಿದೆ.
ಎಸ್‌ಬಿಐ ಈ ಬಗ್ಗೆ ಸಿಬಿಐಗೆ ದೂರು ನೀಡಿತ್ತು. SBI ತನ್ನ ನವೀ ಮುಂಬಯಿಯ ಎನ್‌ಆರ್‌ಐ ಸೀವುಡ್ಸ್ ಶಾಖೆ ಆರೋಪಿಗೆ ವಿದೇಶಿ ಟ್ರಾವೆಲ್ ಕಾರ್ಡ್ ನೀಡಿತ್ತು. ಇದಕ್ಕಾಗಿ ಯಲಮಂಚಿಲಿ ಸಾಫ್ಟ್ ವೇರ್ ಎಕ್ಸ್ ಪೋರ್ಟ್ ಲಿಮಿಟೆಡ್ ಸಂಸ್ಥೆ ಪ್ರೀಪೇಡ್ ಅರ್ಜಿ ಸಲ್ಲಿಸಿತ್ತು. ಮತ್ತು ಎಂಫಸಿಸ್ ಸಂಸ್ಥೆ ಡಾಟಾ ಬೇಸ್ ಸಪೋರ್ಟ್ ರಿಸೋಸರ್ಸ್ ಒದಗಿಸಿತ್ತು ಎಂದು ದೂರಿನಲ್ಲಿ ತಿಳಿಸಿದೆ.
2017ರ ಫೆ.28ರಂದು ಯಲಮಂಚಿಲಿ ಸಾಫ್ಟ್ ವೇರ್ ಎಕ್ಸ್‌ಪೋರ್ಟ್ ಲಿಮಿಟೆಡ್‌ನ ಚೀಫ್ ಆಪರೇಟಿಂಗ್ ಆಫೀಸರ್, ವಿದೇಶೀ ಟ್ರಾವೆಲ್ ಕಾರ್ಡ್ ಬಳಸಿಕೊಂಡು ಮಾಡಲಾದ ಕೋಟ್ಯಂತರ ಖರ್ಚಿನ ಮಾಹಿತಿಯನ್ನು ಬ್ಯಾಂಕಿಗೆ ವರದಿ ಮಾಡಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ.
ಪ್ರೀ ಪೇಡ್ ಕಾರ್ಡಿನ ಬ್ಯಾಲೆನ್ಸನ್ನು ಅಕ್ರಮವಾಗಿ ತಿದ್ದಲಾಗಿ ಒಬ್ಬನೇ ವ್ಯಕ್ತಿಗೆ ಸೇರಿದ ಮೂರು ವಿದೇಶಿ ಟ್ರಾವೆಲ್ ಕಾರ್ಡ್‌ಗಳಿಗೆ ಆಥರೈಸೇಶನ್ ನೀಡಲಾಗಿದ್ದುದು ಪತ್ತೆಯಾಯಿತು ಎಂದು ಬ್ಯಾಂಕ್ ತನ್ನ ದೂರಿನಲ್ಲಿ ಹೇಳಿದೆ.
ಎನ್‌ಆರ್‌ಐ ಸೀವುಡ್ಸ್ ಶಾಖೆ 2016ರ ನವೆಂಬರ್ 7ರಂದು ವಿದೇಶಿ ಟ್ರಾವೆಲ್ ಕಾರ್ಡ್ ನೀಡಿದ್ದು ಅದರ ಆಧಾರದಲ್ಲಿ ಇನ್ನೂ ಎರಡು ಕಾರ್ಡುಗಳನ್ನು ಕಾರ್ಡುದಾರನಿಗೆ ನೀಡಲಾಗಿತ್ತು ಎಂದು ಎಸ್‌ಬಿಐ ಹೇಳಿದೆ.
ಸಂದೀಪ್ ಕುಮಾರ್ ರಘು ಪೂಜಾರಿ ಎಂಬವರಿಗೆ 200 ಡಾಲರ್ ಮೊತ್ತಕ್ಕೆ ಕಾರ್ಡುಗಳನ್ನು ನೀಡಲಾಗಿತ್ತು. ಅನಂತರದಲ್ಲಿ ಆ ಕಾರ್ಡಿಗೆ ಯಾವುದೇ ಲೋಡಿಂಗ್ ಅಥವಾ ರೀಲೋಡಿಂಗ್ ನಡೆದಿಲ್ಲ. 2016ರ ನವೆಂಬರ್ 8ರಿಂದ ನಾಲ್ಕು ಮರ್ಚಂಟ್ ಸೈಟ್‌ಗಳಲ್ಲಿ ಇ ಕಾಮರ್ಸ್ ವ್ಯವಹಾರಗಳು ನಡೆದಿವೆ ಎಂದು ಬ್ಯಾಂಕ್ ತನ್ನ ದೂರಿನಲ್ಲಿ ತಿಳಿಸಿದೆ.