ಮುಂಬಯಿ: ಸೊಸೈಟಿ ಆವರಣಕ್ಕೆ ಬಕ್ರೀದ್ ಅಂಗವಾಗಿ ವ್ಯಕ್ತಿಯೊಬ್ಬ ಮೇಕೆಗಳನ್ನು ತಂದ ವೇಳೆ ಹನುಮಾನ್ ಚಾಲೀಸಾ ಹೇಳಿ ಅದನ್ನು ವಿರೋಧಿಸಿರುವ ಘಟನೆ ಮುಂಬಯಿಯಲ್ಲಿ ನಡೆದಿದೆ.
ಮೊಹ್ಸಿನ್ ಶೇಖ್ ಎನ್ನುವವರು ಬಕ್ರೀದ್ ಹಬ್ಬದ ಪ್ರಯುಕ್ತ ಎರಡು ಮೇಕೆಗಳನ್ನು ಖರೀದಿಸಿ ಸೊಸೈಟಿ ಆವರಣಕ್ಕೆ ತಂದಿದ್ದಾರೆ. ಈ ವೇಳೆ ಇದನ್ನು ವಿರೋಧಿಸಿ ಹಿಂದೂಗಳ ಗುಂಪು ಪ್ರತಿಭಟನೆ ಮಾಡಿದೆ. ಮೇಕೆಗಳನ್ನು ನಮ್ಮ ಸೊಸೈಟಿ ಆವರಣದಿಂದ ಕರೆದುಕೊಂಡು ಹೋಗಬೇಕು ಎಂದು ಆಗ್ರಹಿಸಿದ್ದಾರೆ. ಕೆಲ ನಿವಾಸಿಗಳು ಹನುಮಾನ್ ಚಾಲೀಸಾವನ್ನು ಪಠಿಸಿ, ಮೇಕೆ ಬಲಿಯನ್ನು ಇಲ್ಲಿ ಮಾಡಬಾರದು ಎಂದು ಪ್ರತಿಭಟಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮೊಹ್ಸಿನ್ ಶೇಖ್ “ನಮ್ಮ ಸೊಸೈಟಿಯಲ್ಲಿ ಕನಿಷ್ಠ 200-250 ಮುಸ್ಲಿಂ ಕುಟುಂಬಗಳು ವಾಸವಾಗಿದ್ದು, ಪ್ರತಿ ವರ್ಷ ಮೇಕೆಗಳನ್ನು ಸಾಕಲು ಜಾಗ ನೀಡಲಾಗುತ್ತಿದೆ. ಈ ವರ್ಷ ಮಾತ್ರ ಮೇಕೆಗಳನ್ನು ಆವರಣದಲ್ಲಿ ಸಾಕಲು ಸೊಸೈಟಿ ಅನುಮತಿ ನಿರಾಕರಿಸಿದೆ. ಈ ಕಾರಣಕ್ಕಾಗಿ ನಾನು ಮನೆಗೆ ಮೇಕೆಗಳನ್ನು ತಂದಿದ್ದೇನೆ. ಇದುವರೆಗೆ ನಾನು ಸೊಸೈಟಿ ಆವರಣದಲ್ಲಿ ಮೇಕೆಯನ್ನು ಬಲಿಕೊಟ್ಟಿಲ್ಲ ಎಂದು ಹೇಳಿದ್ದಾರೆ.
ವಾಗ್ವಾದವನ್ನು ಕೇಳಿ ಮಧ್ಯ ಪ್ರವೇಶಿಸಿದ ಪೊಲೀಸರು ವಿವಾದವನ್ನು ಇತ್ಯರ್ಥಪಡಿಸಿದ್ದಾರೆ. ಸೊಸೈಟಿ ಆವರಣದಲ್ಲಿ ಬಲಿದಾನ ನಡೆಯುವುದಿಲ್ಲ ಎಂದು ಸೊಸೈಟಿ ಸದಸ್ಯರಿಗೆ ಪೊಲೀಸರು ಭರವಸೆ ನೀಡಿದರು.
ಸೊಸೈಟಿ ಆವರಣದಲ್ಲಿ ಮೇಕೆಗಳನ್ನು ಬಲಿ ನೀಡಿದರೆ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.