Advertisement

ಮುಂಬಯಿ ಮಡಗಾಂವ್‌ ರೈಲು; ರೈಲ್ವೇ ಸಚಿವರಿಗೆ ಸಂಸದ ನಳಿನ್‌ ಕಟೀಲು ಪತ್ರ

03:56 PM Feb 21, 2024 | Team Udayavani |

ಮಂಗಳೂರು: ಮಂಗಳೂರು ಸೆಂಟ್ರಲ್‌- ಮಡಗಾಂವ್‌ ಮಧ್ಯೆ ಸಂಚರಿಸುತ್ತಿರುವ ವಂದೇಭಾರತ್‌(ವಿ.ಬಿ) ರೈಲನ್ನು ಮುಂಬಯಿವರೆಗೆ ವಿಸ್ತರಿಸುವ ಮೂಲಕ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಯಾಣಿಕರಿಗೆ ನ್ಯಾಯ ಒದಗಿಸಬೇಕು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಅವರು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

Advertisement

ಆರಂಭದಿಂದಲೂ ನಂ.20645/46 ವಂದೇಭಾರತ್‌ ಎಕ್ಸ್‌ಪ್ರೆಸ್‌ ರೈಲನ್ನು ಮುಂಬಯಿಗೆ ವಿಸ್ತರಿಸಬೇಕು ಎನ್ನುವ ಒತ್ತಾಸೆಯನ್ನು ಪ್ರಯಾಣಿಕರು ಮುಂದಿರಿಸಿದ್ದರು. ಅದನ್ನು ಈಡೇರಿಸಬೇಕು. ಅಥವಾ ಮುಂಬಯಿ-ಮಡಗಾಂವ್‌ ಮಧ್ಯೆ ಸಂಚರಿಸುತ್ತಿರುವ ನಂ.22229/30 ವಂದೇಭಾರತ್‌ ರೈಲನ್ನು ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಸ್ತುತ ಕೆಲವರು ಮಂಗಳೂರು ವಂದೇಭಾರತ್‌ ರೈಲನ್ನೇ ಕೋಯಿಕ್ಕೋಡ್‌ಗೆ ವಿಸ್ತರಿಸಬೇಕೆಂಬ ಬೇಡಿಕೆ ಮಂಡಿಸಿರುವುದು ಕಂಡು ಬಂದಿದೆ. ಆದರೆ ಈ ವಿಸ್ತರಣೆ ಯಿಂದ ಯಾವುದೇ ಉಪಯೋಗವಿಲ್ಲ. ಅದರ ಬದಲಿಗೆ ಮುಂಬಯಿಗೆ ವಿಸ್ತರಿಸುವುದರಿಂದ ಹೆಚ್ಚು ಪ್ರಯೋಜನವಾಗಲಿದೆ. ಯಾಕೆಂದರೆ ಮುಂಬಯಿಗೆ ತೆರಳುವ ಯಾವುದೇ ಬೇರೆ ಹಗಲು ರೈಲು ಮಂಗಳೂರಿಗೆ ಇಲ್ಲ. ಈಗಿರುವ ಎಲ್ಲ ರೈಲುಗಳಲ್ಲಿ ಸದಾ ಅಧಿಕ ಸಂಖ್ಯೆಯ ಪ್ರಯಾಣಿಕರು ಇರುವ ಕಾರಣ ಕಾದಿರಿಸಲು ಆಸನಗಳೇ ಸಿಗುವುದಿಲ್ಲ. ಬಹಳ ಪ್ರಯಾಸ ಪಡುವಂತಿದೆ. ಈ ಭಾಗದಿಂದ ತುರ್ತು ಕೆಲಸಗಳಿಗೆ, ಉದ್ಯೋಗಕ್ಕಾಗಿ ಹೆಚ್ಚಾಗಿ ಮುಂಬಯಿಗೆ ತೆರಳುವವರ ಸಂಖ್ಯೆ ಹೆಚ್ಚಿದೆ. ಹಾಗಾಗಿ ಮುಂಬಯಿಗೆ ರೈಲನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಎರಡು ಹೆಚ್ಚುವರಿ ನಿಲುಗಡೆ
ಈಗ ಈ ರೈಲು ಮೂಕಾಂಬಿಕಾ ರೋಡ್‌ ಬೈಂದೂರು ಮತ್ತು ಕುಮಟಾ ನಿಲ್ದಾಣಗಳಲ್ಲಿ ನಿಲುಗಡೆ ಇಲ್ಲ. ಈ ಎರಡೂ ನಿಲ್ದಾಣಗಳಿಗೆ ದೊಡ್ಡ ಸಂಖ್ಯೆಯಲ್ಲಿ ಯಾತ್ರಿಕರು ಬರುತ್ತಾರೆ. ಆದರೆ ವಂದೇಭಾರತ್‌ಗೆ ನಿಲುಗಡೆ ಇರದ ಕಾರಣ
ಪ್ರಯಾಣಿಕರು ಸೌಲಭ್ಯವನ್ನು ಬಳಸಿಕೊಳ್ಳದಂತಾಗಿದೆ. ಮುಂಬಯಿಗೆ ವಿಸ್ತರಣೆಯಾಗುವಾಗಲೂ ಈ ಎರಡು ನಿಲ್ದಾಣಗಳಲ್ಲಿ ನಿಲುಗಡೆ ಒದಗಿಸಬೇಕು ಎಂದು ನಳಿನ್‌ ಒತ್ತಾಯಿಸಿದ್ದಾರೆ.

ಇತರ ರೈಲುಗಳಿಗಿಂತ ವಂದೇಭಾರತ್‌ ರೈಲಿನಲ್ಲಿ ಹೆಚ್ಚಿನ ಸೌಲಭ್ಯ, ಉತ್ತಮ ಆಸನ ವ್ಯವಸ್ಥೆ, ಅಧಿಕ ವೇಗ ಹಾಗೂ ಆರಾಮದಾಯಕವಾಗಿದೆ. ಹಾಗಾಗಿ 12 ಗಂಟೆಗಿಂತ ಅಧಿಕ ಪ್ರಯಾಣ ಅವಧಿ ಇದ್ದರೂ ಕುಳಿತು ಪ್ರಯಾಣಿಸುವುದು ತ್ರಾಸದಾಯಕವಲ್ಲ. ಹಾಗಾಗಿ ವಂದೇಭಾರತ್‌ ಮುಂಬಯಿಗೆ ವಿಸ್ತರಣೆಯಾಗಲಿ ಎಂದು ಒತ್ತಾಯಿಸಿದ್ದಾರೆ.

Advertisement

ಮುಂಬಯಿ ಮಡಗಾಂವ್‌ ವಂದೇಭಾರತ್‌ ರೈಲನ್ನು ಮಂಗಳೂರಿಗೆ ವಿಸ್ತರಿಸುವಾಗ ಮಂಗಳೂರು ಮಡಗಾಂವ್‌ ವಂದೇಭಾರತ್‌ನ ರೇಕ್‌ಗಳನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು, ಆ ಮೂಲಕ ರೇಕ್‌ ಸಂಖ್ಯೆ 8ರಿಂದ 16ಕ್ಕೇರಲಿದೆ. ಅಥವಾ ಮುಂಬಯಿ ಮಡಗಾಂವ್‌ ವಂದೇಭಾರತ್‌ ಮಂಗಳೂರಿಗೆ ವಿಸ್ತರಣೆ ಅಸಾಧ್ಯವಾದರೆ ಮಂಗಳೂರು ಮಡಗಾಂವ್‌ ರೈಲನ್ನೇ ಮುಂಬಯಿಗೆ ಈಗಿರುವ ಕೋಚ್‌ ಗಳೊಂದಿಗೆ ವಾರಕ್ಕೆ ಮೂರು ದಿನಗಳಂತೆ ಮುಂಬಯಿ ಮತ್ತು ಮಂಗಳೂರು ಸೆಂಟ್ರಲ್‌ ಮಧ್ಯೆ ಓಡಿಸಿದರೆ ಜನರಿಗೆ ಅನುಕೂಲವಾಗಲಿದೆ. ಹಾಗೆಯೇ ಪ್ರವಾಸೋದ್ಯಮಕ್ಕೂ ಪುಷ್ಟಿ ಸಿಗಲಿದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next