ಮಾಟುಂಗ: ಮಾಟುಂಗ ಪೂರ್ವದ ಮುಂಬಯಿ ಕನ್ನಡ ಸಂಘದ ನಿಧಿ ಸಂಗ್ರಹಣ ಸಮಿತಿ ವತಿಯಿಂದ ನಿಧಿ ಸಂಗ್ರಹಕ್ಕಾಗಿ ವಿಶೇಷ ಸಭೆಯು ಆ. 28ರಂದು ಸಂಜೆ 5ರಿಂದ ಮಾಟುಂಗ ಪೂರ್ವದ ಸಂಘದ ವಾಚನಾಲಯದಲ್ಲಿ ನಡೆಯಲಿದೆ.
ಮಾಟುಂಗ ಪೂರ್ವದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಮುಂಬಯಿ ಕನ್ನಡ ಸಂಘವು ಕಳೆದ ವರ್ಷಗಳಿಂದ ಕನ್ನಡ ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದೆ. ಸಂಘಕ್ಕೆ ತನ್ನದೇ ಆದಂತಹ ಸಭಾಗೃಹ ಇಲ್ಲದಿದ್ದರೂ ಈ ಎಲ್ಲ ಕಾರ್ಯಕ್ರಮಗಳನ್ನು ಸದಾ ನಡೆಸುವಲ್ಲಿ ಸಂಘವು ಯಶಸ್ವಿಯಾಗಿದೆ. ಅಲ್ಲದೆ ಸಂಘವು ಉಚಿತ ವಾಚನಾಲಯದ ಸುಮಾರು 14 ಸಾವಿರಕ್ಕೂ ಹೆಚ್ಚು ಪುಸ್ತಕಗಳಿರುವ ಉತ್ತಮ ಗ್ರಂಥಾಲಯವನ್ನು ನಡೆಸುತ್ತಿದೆ. ಮುಂಬಯಿ ಕನ್ನಡ ಸಂಘದ ಕಚೇರಿ ಮತ್ತು ಗ್ರಂಥಾಲಯವು ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿರುವ ವೆಂಕಟೇಶ ನಿವಾಸದ ಕಟ್ಟಡದಲ್ಲಿದೆ.
ಇದನ್ನೂ ಓದಿ:‘ನಾನು ತಪ್ಪು ಮಾಡಲ್ಲ, ತಲೆಯೂ ಬಾಗಿಸೋಲ್ಲ’: DSS ಅಧ್ಯಕ್ಷ ರಘು ವಿರುದ್ಧ ಜಗ್ಗೇಶ್ ಆಕ್ರೋಶ
ಇದು 95 ವರ್ಷಗಳ ಹಳೆಯ ಕಟ್ಟಡವಾಗಿದ್ದು, 2021ರ ಡಿಸೆಂಬರ್‌ನಲ್ಲಿ ಈ ಕಟ್ಟಡವನ್ನು ಕೆಡವಿ ನವೀಕರಿಸಲು ನಿರ್ಧರಿಸಲಾಗಿದೆ. ಈ ಕಟ್ಟಡದಲ್ಲೇ ಸಂಘಕ್ಕೆ 1,080 ಚದರ ಅಡಿಯ ಒಂದು ಕಿರು ಸಭಾಗೃಹ ಖರೀದಿಸಲು ನಿರ್ಧರಿಸಲಾಗಿದೆ. ಇದಕ್ಕೆ ಸುಮಾರು 2 ಕೋ. ರೂ. ಗಳಿಗೂ ಹೆಚ್ಚು ವೆಚ್ಚ ತಗಲಲಿದ್ದು, 3 ವರ್ಷಗಳ ಅವಧಿಯಲ್ಲಿ ಈ ಸಭಾಗೃಹ ನಿರ್ಮಾಣವಾಗಲಿದೆ. ಆದುದರಿಂದ ಈ ಸಭಾಗೃಹ ಖರೀದಿಸಲು ನಿಧಿ ಸಂಗ್ರಹಕ್ಕಾಗಿ ವಿಶೇಷ ಸಮಿತಿಯೊಂದನ್ನು ರಚಿಸಲಾಗಿದ್ದು, ಬೃಹತ್ ನಿಧಿ ಸಂಗ್ರಹಕ್ಕಾಗಿ ಈಗಾಗಲೇ ಸಮಿತಿಯ ಸರ್ವ ಸದಸ್ಯರು ಕಾರ್ಯಪ್ರವೃತ್ತಗೊಂಡಿದ್ದಾರೆ.
ಸಭೆಯಲ್ಲಿ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪಸಮಿತಿಯ ಸದಸ್ಯರು, ನಿಧಿ ಸಂಗ್ರಹಕ್ಕೆ ಸಹಾಯ ಮಾಡಲಿಚ್ಛಿಸುವ ಸಹೃದಯಿ ದಾನಿಗಳು ಪಾಲ್ಗೊಂಡು ಸಭೆಯ ಯಶಸ್ಸಿಗೆ ಸಹಕರಿಸುವಂತೆ ಸಂಘದ ಅಧ್ಯಕ್ಷ ಗುರುರಾಜ ಎಸ್. ನಾಯಕ್, ಕಿರು ಸಭಾಗೃಹ ಸಮಿತಿಯ ಮುಖ್ಯಸ್ಥ ಕಮಲಾಕ್ಷ ಜಿ. ಸರಾಫ್ ಮತ್ತು ವಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಡಾ| ರಜನಿ ವಿ. ಪೈ ಪ್ರಕಟನೆಯಲ್ಲಿ ತಿಳಿಸಿದ್ದಾರೆ.