ಮುಂಬೈ: ಇನ್ನೇನು ಕೋಲ್ಕತಾ ನೈಟ್ ರೈಡರ್ಸ್ ತಂಡ ನಿರಾತಂಕವಾಗಿ ಗೆಲುವು ಕಾಣುತ್ತದೆ, ಮುಂಬೈ ಇಂಡಿಯನ್ಸ್ ಗೆ ಎರಡನೇ ಸೋಲು ಎಂದುಕೊಂಡವರ ಲೆಕ್ಕಾಚಾರಗಳನ್ನು ಬುಡಮೇಲಾಗಿತ್ತು. ಬೌಲರ್ ಗಳ ಬಿಗು ದಾಳಿಗೆ ಕೆಕೆಆರ್ ಬ್ಯಾಟ್ಸ್‌ಮನ್ ಗಳು ಕಂಗಾಲಾಗಿದ್ದರು. ಫಲಿತಾಂಶ ರೋಹಿತ್ ಬಳಗಕ್ಕೆ 10 ರನ್ ಅಂತರದ ರೋಚಕ ಜಯ!
ಚೆನ್ನೈ ಅಂಗಳದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ ತಂಡ 20 ಓವರ್ ಗಳಲ್ಲಿ 152 ರನ್ ಗಳಿಸಿ ಆಲ್ ಔಟಾಯಿತು. ಸೂರ್ಯ ಕುಮಾರ್ ಯಾದವ್ ಅರ್ಧ ಶತಕ ಮತ್ತು ನಾಯಕ ರೋಹಿತ್ ಶರ್ಮಾ 42 ರನ್ ಗಳಿಸಿದರು. ಒಂದು ಹಂತದಲ್ಲಿ ಕೇವಲ ಒಂದು ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದ್ದ ತಂಡ ನಂತರ ಸತತ ವಿಕೆಟ್ ಕಳೆದುಕೊಂಡಿತು. ಅದರಲ್ಲೂ ಅಂತಿಮ ಐದು ಓವರ್ ನಲ್ಲಿ ಮುಂಬೈ ತಂಡದ ಏಳು ಬ್ಯಾಟ್ಸ್‌ಮನ್ ಗಳು ಔಟಾದರು.
ಕೆಕೆಆರ್ ಪರ ಆಂದ್ರೆ ರಸೆಲ್ ಕೇವಲ ಎರಡು ಓವರ್ ಹಾಕಿ 15 ರನ್ ನೀಡಿ ಐದು ವಿಕೆಟ್ ಪಡೆದರು.
ಸಾಧಾರಣ ಗುರಿ ಬೆನ್ನತ್ತಿದ ಕೆಕೆಆರ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತು. ಶುಭ್ಮನ್ ಗಿಲ್ ಮತ್ತು ನಿತೀಶ್ ರಾಣಾ ಮೊದಲ ವಿಕೆಟ್ ಗೆ 72 ರನ್ ಜೊತೆಯಾಟ ಆಡಿದರು. ಆದರೆ ನಂತರ ಬಂದ ಯಾವೊಬ್ಬ ಆಟಗಾರನೂ ಎರಂಡಕೆ ರನ್ ಗಳಿಸಲಿಲ್ಲ. ಕೊನೆಯ ಐದು ಓವರ್ ನಲ್ಲಿ ಆರು ವಿಕೆಟ್ ಸಹಾಯದಿಂದ ಕೇವಲ 31 ರನ್ ಬೇಕಿತ್ತು. ಆದರೆ ಮುಂಬೈ ಬೌಲರ್ ಗಳು ಬಿಗು ದಾಳಿ ನಡೆಸಿದರು. ಕೆಕೆಆರ್ ಏಳು ವಿಕೆಟ್ ನಷ್ಟಕ್ಕೆ ಕೇವಲ 142 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುುಂಬೈ ಪರ ಪ್ರಮುಖ ನಾಲ್ಕು ವಿಕೆಟ್ ಪಡೆದ ರಾಹುಲ್ ಚಾಹರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಂಬೈ ಮೊದಲ ಜಯದೊಂದಿಗೆ ಎರಡು ಅಂಕ ಪಡೆಯಿತು.