ಮುಂಬೈ : ಗಾಯಗೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ಮುಂಬೈ ಇಂಡಿಯನ್ಸ್ ಸಂದೀಪ್ ವಾರಿಯರ್ ಅವರನ್ನು ತಂಡಕ್ಕೆ ಸೇರಿಸಿರುವುದಾಗಿ ಶುಕ್ರವಾರ ಹೇಳಿದೆ. ಬೆನ್ನುನೋವಿನ ಕಾರಣ ಬುಮ್ರಾ ಇಡೀ ಟೂರ್ನಿಯಿಂದ ಹೊರಗುಳಿಯಲಿದ್ದಾರೆ.
“ಬಲಗೈ ವೇಗದ ಬೌಲರ್ ಸಂದೀಪ್ ವಾರಿಯರ್ ಅವರು ಜಸ್ಪ್ರೀತ್ ಬುಮ್ರಾ ಅವರ ಬದಲಿ ಆಟಗಾರನಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. 2021 ರಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಿದ ಸಂದೀಪ್, ದೇಶೀಯ ಕ್ರಿಕೆಟ್ ನಲ್ಲಿ 200 ಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ಅನುಭವಿ ಆಟಗಾರರಾಗಿದ್ದು, ಅವುಗಳಲ್ಲಿ 69 ಟಿ 20 ಮಾದರಿಯಲ್ಲಿ ಆಡಿದ್ದಾರೆ, ಇದುವರೆಗೆ ತಮ್ಮ ವೃತ್ತಿಜೀವನದಲ್ಲಿ 362 ವಿಕೆಟ್‌ಗಳನ್ನು ಗಳಿಸಿದ್ದಾರೆ, ಎಂದು ಮುಂಬೈ ಇಂಡಿಯನ್ಸ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
“ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ IPL 2023 ರ ತಂಡದ ಮೊದಲ ಪಂದ್ಯಕ್ಕೆ ಮುಂಚಿತವಾಗಿ ಸಂದೀಪ್ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
ದೇಶೀಯ 66 ಪ್ರಥಮ ದರ್ಜೆ, 69 ಲಿಸ್ಟ್ ಎ ಮತ್ತು 68 ಟಿ 20 ಪಂದ್ಯಗಳನ್ನು ಆಡಿರುವ ವಾರಿಯರ್ ಕ್ರಮವಾಗಿ 217, 83 ಮತ್ತು 62 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಜುಲೈ 2021 ರಲ್ಲಿ ಶ್ರೀಲಂಕಾ ವಿರುದ್ಧ ಕೊಲಂಬೊದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದರು. ಅವರು 2020 ರಲ್ಲಿ ತಮಿಳುನಾಡಿಗೆ ತೆರಳುವ ಮೊದಲು ದೇಶೀಯ ಕ್ರಿಕೆಟ್‌ನಲ್ಲಿ ಕೇರಳವನ್ನು ಪ್ರತಿನಿಧಿಸಿದ್ದರು.
ಏಪ್ರಿಲ್ 2 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ RCB ವಿರುದ್ಧ ಮುಂಬೈ ಇಂಡಿಯನ್ಸ್ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. 29 ರ ಹರೆಯದ ಬುಮ್ರಾ ಈ ವರ್ಷದ ಆರಂಭದಲ್ಲಿ ನ್ಯೂಜಿ ಲ್ಯಾಂಡ್ ನಲ್ಲಿ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅವರು ಸಂಪೂರ್ಣ IPL ಮತ್ತು ಜೂನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ನಲ್ಲೂ ಆಡಲು ಸಾಧ್ಯವಾಗುತ್ತಿಲ್ಲ.