ದ್ವಿತೀಯ ದಿನದಾಟದಲ್ಲೂ ಬೌಲರ್‌ಗಳ ಕೈ ಮೇಲಾಯಿತು. ಮುಂಬಯಿಯ 224 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ವಿದರ್ಭ 105 ರನ್ನಿಗೆ ಕುಸಿಯಿತು. 119 ರನ್ನುಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿದ ಬಳಿಕ 2 ವಿಕೆಟಿಗೆ 141 ರನ್ ಗಳಿಸಿದೆ. ಒಟ್ಟು ಮುನ್ನಡೆ 260ಕ್ಕೆ ಏರಿದೆ.
Advertisement
ಪಂದ್ಯವಿನ್ನೂ 3 ದಿನ ಕಾಣಲಿಕ್ಕಿದ್ದು, ಮುಂಬಯಿಗೆ ಉತ್ತಮ ಬ್ಯಾಟಿಂಗ್ ಪ್ರ್ಯಾಕ್ಟೀಸ್ ನಡೆಸಲು ಧಾರಾಳ ಅವಕಾಶ ವಿದೆ. ಒಟ್ಟು ಮುನ್ನಡೆ 400 ರನ್ ಗಡಿ ಮುಟ್ಟುವುದರಲ್ಲಿ ಅನುಮಾನವಿಲ್ಲ. ಇದನ್ನು ಬೆನ್ನಟ್ಟಿ ಗೆಲುವು ಸಾಧಿಸುವುದು ವಿದರ್ಭಕ್ಕೆ ಅಸಾಧ್ಯ ಎಂದೇ ವಿಶ್ಲೇಷಿ ಸಬೇಕಾಗುತ್ತದೆ.
3 ವಿಕೆಟಿಗೆ 31 ರನ್ ಗಳಿಸಿದ್ದ ವಿದರ್ಭ ಸೋಮವಾರದ ಮೊದಲ ಅವಧಿಯ ಆಟದಲ್ಲೇ ಉಳಿದ ಏಳೂ ವಿಕೆಟ್‌ಗಳನ್ನು ಕಳೆದುಕೊಂಡಿತು. ಆತಿಥೇಯರ ಬೌಲಿಂಗ್ ದಾಳಿ ಅಷ್ಟೊಂದು ಹರಿತವಾಗಿತ್ತು. ಕೊನೆಯ ರಣಜಿ ಪಂದ್ಯ ಆಡುತ್ತಿರುವ ಧವಳ್ ಕುಲಕರ್ಣಿ, ಶಮ್ಸ್ ಮುಲಾನಿ ಮತ್ತು ತನುಷ್ ಕೋಟ್ಯಾನ್ ತಲಾ 3 ವಿಕೆಟ್ ಉಡಾಯಿಸಿ ವಿದರ್ಭದ ಮುನ್ನಡೆಗೆ ತಡೆಯೊಡ್ಡಿದರು. ಇವರಲ್ಲಿ ತನುಷ್ ದಾಳಿ ಅತ್ಯಂತ ಹರಿತವಾಗಿತ್ತು. 3 ವಿಕೆಟಿಗೆ ಅವರು ನೀಡಿದ್ದು 7 ರನ್ ಮಾತ್ರ.
27 ರನ್ ಮಾಡಿದ ಯಶ್ ರಾಥೋಡ್ ವಿದರ್ಭ ಸರದಿಯ ಗರಿಷ್ಠ ಸ್ಕೋರರ್. ಇವರು ತನುಷ್ ಕೋಟ್ಯಾನ್ ಎಸೆತದಲ್ಲಿ ಬೌಲ್ಡ್ ಆದರು. ಧವಳ್ ಕುಲಕರ್ಣಿ ಅಗ್ರ ಕ್ರಮಾಂಕದ ಮೇಲೆ ಘಾತಕವಾಗಿ ಎರಗಿದರು. ಶಮ್ಸ್ ಮುಲಾನಿ ಮಧ್ಯಮ ಕ್ರಮಾಂಕವನ್ನು ಅದುರಿಸಿದರು. ಮುಶೀರ್, ರಹಾನೆ ಫಿಫ್ಟಿ
ಮುಂಬಯಿಯ ದ್ವಿತೀಯ ಸರದಿ ಯಲ್ಲಿ ಮಿಂಚಿದವರೆಂದರೆ ಮುಶೀರ್ ಖಾನ್ ಮತ್ತು ನಾಯಕ ಅಜಿಂಕ್ಯ ರಹಾನೆ. ಇಬ್ಬರೂ ಅರ್ಧ ಶತಕ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮುಶೀರ್ 51 ಮತ್ತು ರಹಾನೆ 58 ರನ್ ಗಳಿಸಿದ್ದಾರೆ. ಇವರಿಬ್ಬರಿಂದ ಮುರಿಯದ 3ನೇ ವಿಕೆಟಿಗೆ 232 ಎಸೆತಗಳಿಂದ 107 ರನ್ ಒಟ್ಟು ಗೂಡಿದೆ. ಇದು ಈ ಪಂದ್ಯದಲ್ಲಿ ದಾಖಲಾದ ಮೊದಲ ಅರ್ಧ ಶತಕ ಹಾಗೂ ಮೊದಲ ಶತಕದ ಜತೆಯಾಟ. ಇವರಿಬ್ಬರೂ ಮೊದಲ ಸರದಿಯಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಅಲ್ಲಿ ಮಿಂಚಿದ ಆರಂಭಿಕರಾದ ಪೃಥ್ವಿ ಶಾ (11) ಮತ್ತು ಭೂಪೇನ್ ಲಾಲ್ವಾನಿ (18) ಬೇಗನೇ ವಾಪಸಾದರು. ಯಶ್ ಠಾಕೂರ್ ಮತ್ತು ಹರ್ಷ ದುಬೆ ಈ ವಿಕೆಟ್ ಕೆಡವಿದರು.
ಸಂಕ್ಷಿಪ್ತ ಸ್ಕೋರ್: ಮುಂಬಯಿ-224 ಮತ್ತು 2 ವಿಕೆಟಿಗೆ 141 (ರಹಾನೆ ಬ್ಯಾಟಿಂಗ್ 58, ಮುಶೀರ್ ಬ್ಯಾಟಿಂಗ್ 51, ಲಾಲ್ವಾನಿ 18, ಪೃಥ್ವಿ ಶಾ 11, ಯಶ್ ಠಾಕೂರ್ 25ಕ್ಕೆ 1, ಹರ್ಷ ದುಬೆ 46ಕ್ಕೆ 1). ವಿದರ್ಭ-105 (ಯಶ್ ರಾಥೋಡ್ 27, ಅಥರ್ವ ತೈಡೆ 23, ಆದಿತ್ಯ ಠಾಕರೆ 19, ಯಶ್ ಠಾಕೂರ್ 16, ತನುಷ್ ಕೋಟ್ಯಾನ್ 7ಕ್ಕೆ 3, ಧವಳ್ ಕುಲಕರ್ಣಿ 15ಕ್ಕೆ 3, ಶಮ್ಸ್ ಮುಲಾನಿ 32ಕ್ಕೆ 3).