ನವಿಮುಂಬಯಿ: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಮಹಾಸಭೆಯು ಐರೊಲಿಯ ಹೆಗ್ಗಡೆ ಭವನದಲ್ಲಿ ಆ. 5 ರಂದು ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ದತ್ತು ಸ್ವೀಕಾರ, ಇನ್ನಿತರ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಜಯ್ ಬಿ. ಹೆಗ್ಡೆ ಅವರು ವಹಿಸಿದ್ದರು. ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ಸಂಜೀವ ಪಿ. ಹೆಗ್ಡೆ, ಉಪಾಧ್ಯಕ್ಷ ಸುರೇಶ್ ಎಸ್ ಹೆಗ್ಡೆ, ಕಾರ್ಯದರ್ಶಿ ಶಂಕರ್ ಹೆಗ್ಡೆ, ಗೌರವ ಕೋಶಾಧಿಕಾರಿ ರಮೇಶ್ ಹೆಗ್ಡೆ ಉಪಸ್ಥಿತರಿದ್ದರು.
ಸುಜಾತಾ ಹೆಗ್ಡೆ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭ ಗೊಂಡ ಮಹಾಸಭೆಯಲ್ಲಿ, 53ನೇ ವಾರ್ಷಿಕ ಮಹಾಸಭೆಯ ಮುಖ್ಯಾಂ ಶಗಳು, ವಾರ್ಷಿಕ ವರದಿ ಮತ್ತು 2017-18ನೇ ಸಾಲಿನ ಲೆಕ್ಕ ಪತ್ರ ಮುಂತಾದ ವಿಷಯಗಳನ್ನು ಮಂಡಿಸಿ ಸದಸ್ಯರಿಂದ ಮಂಜೂರು ಪಡೆಯಲಾಯಿತು. 2018-19ನೇ ಶೈಕ್ಷಣಿಕ ಸಾಲಿಗೆ ಆಂತರಿಕ ಲೆಕ್ಕ ಪರಿಶೋಧಕರಾಗಿ ಗಣೇಶ್ ಎಸ್. ಹೆಗ್ಡೆ ಥಾಣೆ ಇವರನ್ನು ನೇಮಿಸಲಾಯಿತು. ಬಾಹ್ಯ ಲೆಕ್ಕ ಪರಿಶೋಧಕರಾಗಿ ಮೆಸರ್ಸ್ ಎಂ. ಎ. ಚೌಹಾಣ್ ಆ್ಯಂಡ್ ಕಂಪನಿ ಥಾಣೆ ಇವರನ್ನು ನೇಮಿಸಲಾಯಿತು. ಅನಂತರ ಸಮಾಜದ 137 ಬಡ ವಿದ್ಯಾರ್ಥಿಗಳಿಗೆ 2017-18ನೇ ವರ್ಷದ ವಿದ್ಯಾರ್ಥಿವೇತನವನ್ನು ನೀಡಿ ಗೌರವಿಸಲಾಯಿತು.
ಸಮಾಜದ 15 ಬಡ ಮಕ್ಕಳನ್ನು ಸಮಾಜದ ದಾನಿಗಳಾದ ಕೊಡ್ಯಡ್ಕ ಜಯರಾಮ ಹೆಗ್ಡೆ, ದಿ| ಸಿ. ಬಾಬು ಹೆಗ್ಡೆ ಡೊಂಬಿವಲಿ, ಮನೋಜ್ ಹೆಗ್ಡೆ ಥಾಣೆ, ಸುರೇಂದ್ರ ಕುಮಾರ್ ಹೆಗ್ಡೆ ಅಂಧೇರಿ, ದೇವೇಂದ್ರ ಹೆಗ್ಡೆ ಬೆಂಗಳೂರು, ಲೀಲಾವತಿ ರವೀಂದ್ರ ಹೆಗ್ಡೆ ಮುಲುಂಡ್ ಮತ್ತು ಸುಧಾಕರ್ ಶೆಟ್ಟಿ, ಗುಣಾನಂದ್ ಸುಂದರ್ ಹೆಗ್ಡೆ ಪನ್ವೇಲ…, ಕೌಶಲ್ಯಾ ಹೆಗ್ಡೆ ಚೆಂಬೂರ್, ರಾಜೀವಿ ಬಾಬಣ್ಣ ಹೆಗ್ಡೆ ಹೆರ್ಮುಂಡೆ ಮತ್ತು ದಯಾನಂದ್ ಬಾಬಣ್ಣ ಹೆಗ್ಡೆ, ಮುಲುಂಡ್ ಇವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಕ ವಿದ್ಯಾರ್ಥಿ ವೇತನ ನಿಧಿಯಡಿಯಲ್ಲಿ ದತ್ತು ಸ್ವೀಕರಿಸಲಾಯಿತು. ಅನಂತರ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ 2017-18ನೇ ವರ್ಷದಲ್ಲಿ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕವನ್ನು ಪಡೆದ 21 ವಿದ್ಯಾರ್ಥಿಗಳನ್ನು ಸ್ಮರಣಿಕೆ ಮತ್ತು ಗೌರವ ಧನವನ್ನು ನೀಡಿ ಸಮಾಜದ ಗಣ್ಯರಿಂದ ಸತ್ಕರಿಸಲಾಯಿತು.
ಮಹಾಸಭೆಯಲ್ಲಿ ಮಾಜಿ ಅಧ್ಯಕ್ಷರಾದ ವಿ. ಎಸ್. ಹೆಗ್ಡೆ, ಬಿ. ಸಿ. ಹೆಗ್ಡೆ, ಲಿಂಗಯ್ಯ ಜಿ. ಹೆಗ್ಡೆ, ಸುರೇಂದ್ರಕುಮಾರ್ ಹೆಗ್ಡೆ, ಮನೋಜ್ ಹೆಗ್ಡೆ ಹಾಗೂ ಹಿರಿಯ ಸದಸ್ಯರು, ಆಡಳಿತ ಮಂಡಳಿಯ ಸದಸ್ಯರು, ಯುವ ವಿಭಾಗದ ಸದಸ್ಯರು, ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.