ಮುಂಬೈ: ಸಾಕು ನಾಯಿಯೊಂದು ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿಯೊಬ್ಬರಿಗೆ ಕೋರ್ಟ್ ಬರೋಬ್ಬರಿ 12 ವರ್ಷಗಳ ಬಳಿಕ ಮೂರು ತಿಂಗಳ ಸಾಧಾರಣ ಶಿಕ್ಷೆ ವಿಧಿಸಿದೆ.
ಸಾರ್ವಜನಿಕ ಸ್ಥಳದಲ್ಲಿ ಅಪಾಯಕಾರಿ ತಳಿಯ ನಾಯಿಯನ್ನು ಹೊರಗಡೆ ಕರೆತರುವ ವೇಳೆ ಸಮರ್ಪಕ ಎಚ್ಚರಿಕೆ ವಹಿಸಿಲ್ಲ ಎಂಬುದು ಪ್ರಕರಣ ವಿಚಾರಣೆ ವೇಳೆ ಕೋರ್ಟ್ ಅಭಿಪ್ರಾಯವ್ಯಕ್ತಪಡಿಸಿದೆ ಎಂದು ವರದಿ ತಿಳಿಸಿದೆ.
ಉದ್ಯಮಿ, ರಾಟ್ಟವೈಲರ್ ಶ್ವಾನದ ಮಾಲೀಕ ಸೈರಲ್ ಪೆರ್ಸೈ ಹೋರ್ಮುಸಿಜಿ (44ವರ್ಷ) ಭಾರತೀಯ ದಂಡ ಸಂಹಿತೆ 289ರ ಅಡಿಯಲ್ಲಿ ದೋಷಿ ಎಂದು ಗುರ್ಗಾಂವ್ ಕೋರ್ಟ್ ಮ್ಯಾಜಿಸ್ಟ್ರೇಟ್ ಎನ್.ಎ.ಪಟೇಲ್ ಆದೇಶ ನೀಡಿದ್ದರು.
2010ರಲ್ಲಿ ಈ ಘಟನೆ ನಡೆದಿತ್ತು. ಸಂತ್ರಸ್ತೆ ಕೇರ್ಸಿ ಇರಾನಿ ಮತ್ತು ಹೋರ್ಮುಸಿಜಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಾಗ್ವಾದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಹೋರ್ಮುಸಿಜಿ ಸಾಕು ನಾಯಿ ರಾಟ್ ವೈಲರ್ ಕಾರಿನೊಳಗೆ ಇತ್ತು. ಈ ಸಂದರ್ಭದಲ್ಲಿ ನಾಯಿ ಕಾರಿನಿಂದ ಹೊರಬರಲು ಪ್ರಯತ್ನಿಸುತ್ತಿತ್ತು. ಏತನ್ಮಧ್ಯೆ ಕಾರಿನ ಬಾಗಿಲು ತೆರೆಯದಂತೆ ಮನವಿ ಮಾಡಿಕೊಂಡರೂ ಕೂಡಾ ಆರೋಪಿ ಹೋರ್ಮುಸಿಜಿ ಕಾರಿನ ಬಾಗಿಲನ್ನು ತೆರೆದಿದ್ದ. ತಕ್ಷಣವೇ ನಾಯಿ ನೇರವಾಗಿ ಇರಾನಿ ಮೇಲೆ ದಾಳಿ ನಡೆಸಿತ್ತು.
ಇರಾನಿ ಅವರ ಬಲ ಕಾಲಿಗೆ ಎರಡು ಬಾರಿ ಹಾಗೂ ಬಲಗೈಗೆ ಒಂದು ಬಾರಿ ಕಚ್ಚಿ ಎಳೆದಾಡಿತ್ತು. ಇದು ಅಪಾಯಕಾರಿ ತಳಿಯ ನಾಯಿ ಎಂಬುದು ಆರೋಪಿಗೆ ತಿಳಿದಿದ್ದರೂ, ಕಾರಿನಿಂದ ಹೊರ ಬಿಟ್ಟಿದ್ದು ತಪ್ಪು ಎಂಬುದಾಗಿ ಕೋರ್ಟ್ ಅದೇಶದಲ್ಲಿ ತಿಳಿಸಿದೆ.
ಈ ಘಟನೆ ಬಗ್ಗೆ ದೂರು ದಾಖಲಾಗಿದ್ದ ನಂತರ, ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಸುದೀರ್ಘ 12ವರ್ಷಗಳ ನಂತರ ಕೋರ್ಟ್ ಶಿಕ್ಷೆಯನ್ನು ಪ್ರಕಟಿಸಿ ತೀರ್ಪು ನೀಡಿದೆ.