ಮುಂಬಯಿ : ಮುಂಬಯಿ ಮಹಾ ನಗರದಲ್ಲಿ ಇಂದು ಗುರುವಾರ ಬೆಳಗ್ಗಿನಿಂದ ಜಡಿಮಳೆ ಆಗುತ್ತಿರುವ ಪರಿಣಾಮವಾಗಿ ನಗರದ ಜನಜೀವನ ತೀವ್ರವಾಗಿ ಬಾಧಿತವಾಗಿದೆ.
ಖಾರ್, ಸಯಾನ್, ವೋರ್ಲಿ ಮುಂತಾದ ಪ್ರದೇಶಗಳಲ್ಲಿ ನೀರು ತುಂಬಿದ್ದು ಜನರು ಮೊಣಕಾಲು ಮಟ್ಟದ ನೀರಿನಲ್ಲಿ ಕಷ್ಟಪಟ್ಟು ನಡೆದುಕೊಂಡು ಹೋಗುತ್ತಿರುವ ದೃಶ್ಯ ಕಂಡು ಬರುತ್ತಿದೆ.
ಇಂದು ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ಬಿಎಂಸಿಯ ಸ್ವಯಂಚಾಲಿತ ಹವಾಮಾನ ಸ್ಟೇಶನ್ ಪ್ರಕಾರ ಕುರ್ಲಾದಲ್ಲಿ 15 ಮಿ.ಮೀ., ಚೆಂಬೂರ್‌ನಲ್ಲಿ 13 ಮಿಮೀ., ಗೋರೆಗಾಂವ್‌ನಲ್ಲಿ 26 ಮಿ.ಮೀ., ಮತ್ತು ಮಲಾಡ್‌ನಲ್ಲಿ 18 ಮಿ.ಮೀ. ಮಳೆಯಾಗಿದೆ.
ಮುಂದಿನ 48 ತಾಸುಗಳಲ್ಲಿ ಜಡಿ ಮಳೆ ಮುಂದುವರಿಯುವ ಸೂಚನೆ ಇರುವ ಹಿನ್ನೆಲೆಯಲ್ಲಿ ಮುಂಬಯಿ ಮುನಿಸಿಪಲ್ ಕಾರ್ಪೊರೇಶನ್ ತನ್ನ ಅಧಿಕಾರಿಗಳ ಶನಿವಾರ, ಭಾನುವಾರಗಳ ರಜೆಯನ್ನು ರದ್ದು ಮಾಡಿದೆ.
ಭಾರತದ ಹವಾಮಾನ ಇಲಾಖೆಯ ವರದಿಗಳ ಪ್ರಕಾರ ಮುಂಗಾರು ಮಾರುತಗಳು ಇಂದು ಗುರುವಾರ ಕರಾವಳಿ ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರ ದಾಟಿ ಮುನ್ನುಗ್ಗುತ್ತಿವೆ. ಜೂನ್ 10ರ ವರೆಗೂ ಉತ್ತರ ಮಹಾರಾಷ್ಟ ಕರಾವಳಿಯಲ್ಲಿ ಭಾರೀ ಮಳೆಯಾಗಲಿದೆ.
ಮುಂಬಯಿಯಲ್ಲಿ ಭಾರೀ ಮಳೆಯಿಂದಾಗಿ ಇಂದು ಗುರುವಾರ ಲಂಡನ್ – ಮುಂಬಯಿ ಹಾರಾಟದ ಜೆಟ್ ಏರ್ ವೇಸ್‌ನ ವಿಮಾನವನ್ನು ಬೇರೆಡೆಗೆ ವರ್ಗಾಯಿಸಲಾಗಿದೆ.