ಮಹಾರಾಷ್ಟ್ರ: ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಕೂದಲು ಕಸಿ ಮಾಡಿಸಿಕೊಂಡ(ಹೇರ್ ಟ್ರಾನ್ಸ್ ಪ್ಲಾಂಟೇಶನ್) ಎರಡು ದಿನಗಳ ನಂತರ ಸಾಕಿ ನಾಕಾದ ಉದ್ಯಮಿಯೊಬ್ಬರು ಸಾವನ್ನಪ್ಪಿರುವ ಘಟನೆ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ ಎಂದು ಆಂಗ್ಲ ದೈನಿಕವೊಂದು ವರದಿ ಮಾಡಿದೆ.
ಶ್ರವಣ್ ಕುಮಾರ್ ಚೌಧರಿ(43ವರ್ಷ) ಎಂಬವರು ಮುಂಬೈನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೂದಲು ಕಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದು, ಶುಕ್ರವಾರ ಚೌಧರಿ ಅವರ ಮುಖ ಊದಿಕೊಳ್ಳತೊಡಗಿತ್ತು, ಅಲ್ಲದೇ ಉಸಿರಾಟದ ತೊಂದರೆ ಅನುಭವಿಸತೊಡಗಿದ್ದರು.
ಕೂಡಲೇ ತಜ್ಞ ವೈದ್ಯರು ಬಂದು ಪರೀಕ್ಷಿಸಿದ್ದರು, ಆದರೆ ಶನಿವಾರ ಮುಂಜಾನೆ 6.45ರ ಹೊತ್ತಿಗೆ ಅಸು ನೀಗಿರುವುದಾಗಿ ವೈದ್ಯರು ತಿಳಿಸಿದ್ದರು ಎಂದು ವರದಿ ಹೇಳಿದೆ. ಮಾರಕ ಅಲರ್ಜಿ ರಿಯಾಕ್ಷನ್ ನಿಂದಾಗಿ ಸಾವು ಸಂಭವಿಸಿರಬೇಕೆಂದು ವೈದ್ಯರು ಸಮಜಾಯಿಷಿ ನೀಡಿದ್ದಾರೆ.
ಮನೆಯಲ್ಲಿ ಹೆಂಡತಿ, ಮಕ್ಕಳಿಗೆ ಹೇಳದೆ ಕೂದಲು ಕಸಿ ಮಾಡಿಸಿಕೊಳ್ಳಲು ಚೌಧರಿ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಸುಮಾರು 5 ಲಕ್ಷ ರೂಪಾಯಿ ಹಣವನ್ನು ಆಸ್ಪತ್ರೆಗೆ ಪಾವತಿಸಿದ್ದರು. ಅದರಂತೆ ಆಸ್ಪತ್ರೆಯಲ್ಲಿ ಚೌಧರಿಯ ಬೊಕ್ಕ ತಲೆಗೆ 9,500ರಷ್ಟು ಕೂದಲನ್ನು ಕಸಿ ಮಾಡಲಾಗಿತ್ತು..ಇದಕ್ಕಾಗಿ ಸುಮಾರು 15 ಗಂಟೆಗಳಷ್ಟು ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು ಎಂದು ವರದಿ ವಿವರಿಸಿದೆ.
ಚೌಧರಿ ಮುಂಬೈಯಲ್ಲಿ ಸರಕು ಸಾಗಣೆಯ ಉದ್ಯಮ ಹೊಂದಿದ್ದರು. ಇವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಿಂಚ್ ಪೋಕ್ಲಿ ಆಸ್ಪತ್ರೆಗೆ ಈ ರೀತಿಯ ಹೇರ್ ಟ್ರಾನ್ಸ್ ಪ್ಲಾಂಟೇಶನ್ ನಡೆಸಲು ಅವಕಾಶ ಇದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಅಪರಾಧ ದಂಡ ಸಂಹಿತೆ ಕಲಂ 174ರ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಸಾಕಿನಾಕಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2016ರಲ್ಲಿಯೂ ಚೆನ್ನೈಯ 22ವರ್ಷದ ಮೆಡಿಕಲ್ ವಿದ್ಯಾರ್ಥಿ(ಸಂತೋಷ್)ಯೊಬ್ಬ ಹೇರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಿಸಿಕೊಂಡು ಅದು ಯಶಸ್ವಿಯಾಗದೇ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಸುಮಾರು 10 ಗಂಟೆಗಳ ಶಸ್ತ್ರಚಿಕಿತ್ಸೆಯ ಬಳಿಕ ಜ್ವರ ಪ್ರಾರಂಭವಾಗಿದ್ದು, ಕೂದಲು ಕಸಿ ಮಾಡಿಸಿದ್ದ 2 ದಿನಗಳ ನಂತರ ಸಾವನ್ನಪ್ಪಿದ್ದ ಎಂದು ವರದಿ ತಿಳಿಸಿದೆ.