ಮುಂಬಯಿ: ದಕ್ಷಿಣ ಮುಂಬಯಿಯಲ್ಲಿರುವ ಡೋಂಗ್ರಿ ಪ್ರಾಂತ್ಯದಲ್ಲಿ 100 ವರ್ಷಗಳಷ್ಟು ಹಳೆಯದಾದ “ಕೌಸರ್‌ಬಾಗ್’ ಎಂಬ ನಾಲ್ಕು ಅಂತಸ್ತಿನ ಕಟ್ಟಡವೊಂದು ಮಂಗಳವಾರ ಬೆಳಗ್ಗೆ 11.40ರ ಸುಮಾರಿಗೆ ಕುಸಿದಿದೆ. ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿ, 40ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ.
ಕಟ್ಟಡದಲ್ಲಿ 10ರಿಂದ 12 ಕುಟುಂಬಗಳು ವಾಸವಾಗಿದ್ದವು ಎನ್ನಲಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆ (ಎನ್‌ಡಿಆರ್‌ಎಫ್), ಅಗ್ನಿಶಾಮಕ ದಳಗಳನ್ನು ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ. ಕಟ್ಟಡ ಬಿದ್ದ ಪ್ರದೇಶ ತೀರಾ ಕಿಷ್ಕಿಂಧೆಯಾಗಿದ್ದು, ಅತೀವ ಜನಸಂದಣಿ ಇರುವ ಕಾರಣ, ಪರಿಹಾರ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಆ್ಯಂಬುಲೆನ್ಸ್‌ಗಳನ್ನು 50 ಮೀ. ದೂರದಲ್ಲಿ ನಿಲ್ಲಿಸಬೇಕಾದ ಅನಿವಾರ್ಯವಿದೆ.
ಘಟನೆ ನಡೆದ ಕೆಲ ಗಂಟೆಗಳ ಕಾಲ ಈ ಕಟ್ಟಡ ಮುಂಬಯಿ ಬೃಹತ್ ನಗರ ಪಾಲಿಕೆಗೆ (ಬಿಎಂಸಿ) ಸೇರಿಧ್ದೋ ಅಥವಾ ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ (ಎಂಎಚ್‌ಎಡಿಎ) ಸೇರಿಧ್ದೋ ಎಂಬ ಗೊಂದಲ ಮೂಡಿತ್ತು. ಆದರೆ, ಅನಂತರ, ಈ ಕಟ್ಟಡ ಎಂಎಚ್‌ಎಡಿಎಗೆ ಸೇರಿರುವುದು ಖಚಿತವಾಯಿತು. ಇದರ ಬೆನ್ನಲ್ಲೇ, 2012ರಲ್ಲೇ ಕಟ್ಟಡದ ನವೀಕರಣಕ್ಕಾಗಿ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಗಿತ್ತು. 2017ರಲ್ಲಿ ಕಟ್ಟಡ ತೆರವುಗೊಳಿಸುವಂತೆ ಅಲ್ಲಿನ ನಿವಾಸಿಗಳಿಗೆ ನೋಟಿಸ್ ಕಳುಹಿಸಲಾಗಿತ್ತು ಎಂದು ಎಂಎಚ್‌ಎಡಿಎ ಹೇಳಿದೆ.
ಪ್ರಧಾನಿ ಶೋಕ: ಕಟ್ಟಡ ಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ಎನ್‌ಡಿಆರ್‌ಎಫ್ ಹಾಗೂ ಸ್ಥಳೀಯ ಸಂಸ್ಥೆಗಳು ಪರಿಹಾರ ಕಾರ್ಯದಲ್ಲಿ ಮಗ್ನವಾಗಿವೆ” ಎಂದು ಟ್ವೀಟ್ ಮಾಡಿದ್ದಾರೆ.
ನೇಪಾಲ ಪ್ರವಾಹ: ಸಾವಿನ ಸಂಖ್ಯೆ 78ಕ್ಕೇರಿಕೆ
ಪ್ರವಾಹದಿಂದ ತತ್ತರಿಸಿರುವ ನೇಪಾಲದಲ್ಲಿ ಸಾವಿನ ಸಂಖ್ಯೆ 78ಕ್ಕೇರಿದೆ. ಸುಮಾರು 40 ಜನರು ಗಾಯಗೊಂಡಿದ್ದು, 17,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನೇಪಾಲದಲ್ಲಿ ಗುರುವಾರದಿಂದ ಅತೀವ ಮಳೆಯಾಗುತ್ತಿದ್ದು, ರಾಜಧಾನಿ ಕಾಠ್ಮಂಡು, ಕಲಂಕಿ, ಕುಪೊಂಡೋಲ, ಕುಲೇಶ್ವರ್ ಹಾಗೂ ಬಾಲು ಸೇರಿದಂತೆ 25 ಜಿಲ್ಲೆಗಳು ಪ್ರವಾಹಕ್ಕೆ ತುತ್ತಾಗಿವೆ.
ಮಂಗಳವಾರ ಬೆಳಗ್ಗೆ ಕುಸಿದ 100 ವರ್ಷ ಹಳೆಯ ಕಟ್ಟಡ
2017ರಲ್ಲೇ ಕಟ್ಟಡ ತೆರವಿಗೆ ನೋಟಿಸ್ ನೀಡಿದ್ದಾಗಿ ಹೇಳಿದ ಸರಕಾರ