Advertisement

ಸಂಕಷ್ಟದಲ್ಲಿ ಮುಂಬಯಿ; ವಾಣಿಜ್ಯ ನಗರಿಗೆ ಸೋಂಕಿನ ಆವಾಸ ಸ್ಥಾನದ ಅಪಖ್ಯಾತಿ

02:04 AM May 22, 2020 | Hari Prasad |

ಮುಂಬಯಿ/ಹೊಸದಿಲ್ಲಿ: ಅಪಾಯಕಾರಿ ಬೆಳವಣಿಗೆ ಎಂಬಂತೆ, ದೇಶದ ವಾಣಿಜ್ಯ ನಗರಿ ಎಂದೇ ಹೆಸರಾಗಿರುವ ಮುಂಬಯಿ ಈಗ ದೇಶದ ಕೋವಿಡ್ ಕೇಂದ್ರ ಸ್ಥಾನವಾಗಿ ಮಾರ್ಪಾಡಾಗಿದೆ.

Advertisement

ದೇಶದಲ್ಲೇ ಅತಿ ಹೆಚ್ಚು ಕೋವಿಡ್ ಸೋಂಕಿತರಿರುವ ರಾಜ್ಯ ಎಂಬ ಕುಖ್ಯಾತಿಗೆ ಮಹಾರಾಷ್ಟ್ರ ಪಾತ್ರವಾದರೆ, ಎರಡನೇ ಸ್ಥಾನದಲ್ಲಿರುವ ರಾಜ್ಯವಾದ ತಮಿಳುನಾಡಿಗಿಂತ ಹೆಚ್ಚು ಸೋಂಕಿತರು ವಾಣಿಜ್ಯ ನಗರಿ ಮುಂಬಯಿನಲ್ಲೇ ಇದ್ದಾರೆ.

ಈ ಎರಡು ಹಣೆಪಟ್ಟಿಗಳ ಜೊತೆಗೆ ಮತ್ತೂಂದು ಅಚ್ಚರಿಯ ಸಂಗತಿಯೆಂದರೆ, ಮುಂಬಯಿನ ಧಾರಾವಿಯಲ್ಲಿರುವ ಸೋಂಕಿತರ ಸಂಖ್ಯೆ ಇಡೀ ಕರ್ನಾಟಕ ರಾಜ್ಯದ ಸೋಂಕಿತರ ಸಂಖ್ಯೆಯನ್ನೂ ಮೀರಿದೆ.

ಏಷ್ಯಾ ಖಂಡದ ಎರಡನೇ ಅತಿದೊಡ್ಡ ಕೊಳೆಗೇರಿ ಪ್ರದೇಶ ಎಂದೇ ಹೆಸರಾದ ಧಾರಾವಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ.

8.5 ಲಕ್ಷ ಜನರು ವಾಸಿಸುವ ಪ್ರದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 1,400 ಸಮೀಪಿಸಿದ್ದು, ಈ ವಿಚಾರದಲ್ಲಿ ಕರ್ನಾಟಕ (1,246) ಮತ್ತು ಹರ್ಯಾಣ (928)ದಂಥ ರಾಜ್ಯಗಳನ್ನೇ ಧಾರಾವಿ ಮೀರಿಸಿದೆ.

Advertisement

ಅವ್ಯವಸ್ಥೆಯ ಆಗರ: ವರದಿಯೊಂದರ ಪ್ರಕಾರ, ಮುಂಬಯಿನ ಕೊಳೆಗೇರಿ ಜನಸಂಖ್ಯೆ ನಗರದ ಒಟ್ಟು ಜನಸಂಖ್ಯೆಯ ಶೇ.42ರಷ್ಟಿದೆ. ಈ ಪೈಕಿ ಶೇ.57 ರಷ್ಟು ಕುಟುಂಬಗಳು ಒಂದು ಕೊಠಡಿಯಿರುವ ಮನೆಗಳಲ್ಲಿ ವಾಸಿಸುತ್ತವೆ.

ಹೀಗಿರುವಾಗ ಸಾಮಾಜಿಕ ಅಥವಾ ಶಾರೀರಿಕ ಅಂತರ ಕಾಪಾಡಿಕೊಳ್ಳುವುದು ಕನಸಿನ ಮಾತೇ ಸರಿ. ಅಷ್ಟೇ ಅಲ್ಲದೆ, ಕೊಳೆಗೇರಿ ಪ್ರದೇಶಗಳಲ್ಲಿ ಮನೆಗಳು ಒತ್ತೊತ್ತಾಗಿವೆ, ಹಲವು ಮನೆಗಳಿಗೆ ಒಂದೇ ಶೌಚಾಲಯ ವ್ಯವಸ್ಥೆಯಿದೆ.

ಹೀಗೆ ಅವ್ಯವಸ್ಥೆಯ ಆಗರವಾಗಿರುವ ಇಂಥ ಪ್ರದೇಶಗಳಲ್ಲಿ ಸೋಂಕು ಅವ್ಯಾಹತವಾಗಿ ವ್ಯಾಪಿಸುತ್ತಿರುವುದು ಸರಕಾರಕ್ಕೆ ಸವಾಲಾಗಿ ಪರಿಣಮಿಸಿದೆ. ಮುಂಬಯಿವೊಂದರಲ್ಲೇ 674 ಕಂಟೈನ್‌ಮೆಂಟ್‌ ವಲಯಗಳಿರುವುದು ಪರಿಸ್ಥಿತಿಯ ಗಂಭೀರತೆಗೆ ಕನ್ನಡಿ ಹಿಡಿದಿದೆ.

37 ಸಾವಿರ ದಾಟಿದ ಪ್ರಕರಣ: ಮಹಾರಾಷ್ಟ್ರದಲ್ಲಿ ಬುಧವಾರ ಒಂದೇ ದಿನ 2,217 ಮಂದಿಗೆ ಸೋಂಕು ದೃಢಪಟ್ಟು, ಒಟ್ಟು ಸೋಂಕಿತರ ಸಂಖ್ಯೆ 37 ಸಾವಿರ ದಾಟಿದೆ. ವಾಣಿಜ್ಯ ನಗರಿ ಮುಂಬಯಿವೊಂದರಲ್ಲೇ ಅತೀ ಹೆಚ್ಚು ಅಂದರೆ 22,746 ಮಂದಿಗೆ ಸೋಂಕು ತಗುಲಿದ್ದು, ಇಲ್ಲಿ 800 ಮಂದಿ ಸಾವಿಗೀಡಾಗಿದ್ದಾರೆ.

ಇಡೀ ಮಹಾರಾಷ್ಟ್ರದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.60ರಷ್ಟು ಪ್ರಕರಣಗಳು ಮುಂಬಯಿನಲ್ಲೇ  ಪತ್ತೆಯಾಗಿದೆ. ಅಲ್ಲದೆ, ಮುಂಬಯಿನಲ್ಲಿ ಮರಣ ಪ್ರಮಾಣವು ಶೇ.3.5 ಆಗಿದ್ದು, ದೇಶದ ಸರಾಸರಿ ಮರಣ ಪ್ರಮಾಣವನ್ನೂ (ಶೇ.3.1) ಇದು ಮೀರಿಸಿದೆ.

ನ್ಯೂಯಾರ್ಕ್‌ ಮಾದರಿ ಹೆಚ್ಚುತ್ತಿದೆ ಸೋಂಕು
ಅಮೆರಿಕದಲ್ಲಿ ನ್ಯೂಯಾರ್ಕ್‌ ನಗರವು ಹೇಗೆ ಸೋಂಕಿನ ಹಾಟ್‌ ಬೆಡ್‌ ಆಗಿ ಪರಿವರ್ತನೆಗೊಂಡಿತೋ, ಭಾರತದ ವಾಣಿಜ್ಯ ನಗರಿ ಮುಂಬಯಿ ಕೂಡ ಅದೇ ಹಾದಿಯಲ್ಲಿ ಸಾಗಿದೆ. ನ್ಯೂಯಾರ್ಕ್‌ ನಗರಕ್ಕೆ ಹೋಲಿಸಿದರೆ ಮುಂಬಯಿನ ಗಾತ್ರ ಅರ್ಧದಷ್ಟಿದೆ. ಆದರೆ, ಜನಸಂಖ್ಯೆ ಮಾತ್ರ ನ್ಯೂಯಾರ್ಕ್‌ ಗಿಂತ ಒಂದೂವರೆ ಪಟ್ಟು ಅಧಿಕವಿದೆ.

1,388 ಪೊಲೀಸರಿಗೆ ಸೋಂಕು, 12 ಸಾವು
ಮಹಾರಾಷ್ಟ್ರದಲ್ಲಿ ಒಟ್ಟಾರೆ 1,388 ಪೊಲೀಸರಿಗೆ ಸೋಂಕು ತಗುಲಿದೆ, 12 ಮಂದಿ ಸಾವಿಗೀಡಾಗಿದ್ದಾರೆ. ಸದ್ಯ 948 ಪೊಲೀಸರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. 428 ಮಂದಿ ಗುಣಮುಖರಾಗಿದ್ದಾರೆ.

ಸಾವಿರಾರು ಪೊಲೀಸರನ್ನೂ ಕ್ವಾರೆಂಟೈನ್‌ನಲ್ಲಿ ಇಡಲಾಗಿದೆ. ಇದರಿಂದ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಆಗಿದೆ, ಹೀಗಾಗಿ ಹೆಚ್ಚಿನ ಪೊಲೀಸ್‌ ಸಿಬ್ಬಂದಿಯನ್ನು ಮಹಾರಾಷ್ಟ್ರಕ್ಕೆ ಕಳಿಸಿಕೊಡಬೇಕೆಂದು ಕೇಂದ್ರಕ್ಕೆ ಮಹಾರಾಷ್ಟ್ರ ಸರಕಾರ ಪತ್ರ ಬರೆದಿದೆ.

ಮುಂಗಾರು ಆಗಮನಕ್ಕೆ ಮುನ್ನ ನಾವು ಪರಿಸ್ಥಿತಿಯನ್ನು ನಿಯಂತ್ರಿಸಬೇಕಿದೆ. ಏಪ್ರಿಲ್ – ಮೇ ತಿಂಗಳ ಪ್ರಕರಣಗಳನ್ನು ನೋಡಿದರೆ ಆತಂಕವಾಗುತ್ತಿದೆ. ಆದರೆ, ಪರಿಸ್ಥಿತಿ ಕೈಮೀರಿ ಹೋಗಲು ನಾನು ಬಿಡುವುದಿಲ್ಲ.
– ಉದ್ಧವ್‌ ಠಾಕ್ರೆ, ಮಹಾರಾಷ್ಟ್ರ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next