Advertisement

ಜಾಗತಿಕ ಟಾಪ್‌ ಸ್ಟಾರ್ಟ್‌ ಅಪ್‌ ಹಬ್‌ಗಳಲ್ಲಿ ಬೆಂಗಳೂರಿಗೆ ಸ್ಥಾನ

11:02 AM Sep 25, 2021 | Team Udayavani |

ಲಂಡನ್: ಜಗತ್ತಿನ ಪ್ರಮುಖ ಸ್ಟಾರ್ಟ್‌ ಅಪ್‌ ಹಬ್‌ಗಳ ಪಟ್ಟಿಯಲ್ಲಿ ಬೆಂಗಳೂರು, ಮುಂಬಯಿ, ಲಂಡನ್‌ ಸ್ಥಾನ ಪಡೆದಿವೆ. ಟಾಪ್‌ 100 ಸ್ಟಾರ್ಟ್‌ ಅಪ್‌ ಹಬ್‌ಗಳ ಪೈಕಿ ಮುಂಬಯಿ ಮೊದಲ ಸ್ಥಾನವನ್ನು ಕಾಯ್ದುಕೊಂಡರೆ, ಲಂಡನ್‌ ಎರಡನೇ ಸ್ಥಾನವನ್ನು ಪಡೆದಿದೆ. ಟಾಪ್‌ 30 ಜಾಗತಿಕ ಟೆಕ್‌ ಹಬ್‌ಗಳ ಪಟ್ಟಿಯಲ್ಲಿ ಬೆಂಗಳೂರು 23ನೇ ಸ್ಥಾನ ಪಡೆದುಕೊಂಡರೆ, ದಿಲ್ಲಿಯು ಟಾಪ್‌ 40ರ ಪಟ್ಟಿಯಲ್ಲಿ 36ನೇ ಸ್ಥಾನ ಪಡೆದಿದೆ.

Advertisement

ಕಾರ್ಯಕ್ಷಮತೆ, ಪ್ರತಿಭೆ, ಸಂಪರ್ಕ ಸಾಧನೆ ಸೇರಿದಂತೆ 7 ಮಾನದಂಡಗಳ ಆಧಾರದಲ್ಲಿ ಈ ಸ್ಥಾನಗಳನ್ನು ನೀಡಲಾಗಿದೆ. ಟೆಕ್‌ ಸ್ಟಾರ್ಟ್‌ ಅಪ್‌ ಸ್ಥಾಪನೆಗೆ ಅತ್ಯಂತ ಆಕರ್ಷಣೀಯವಾದ ನಗರವೆಂದರೆ ಲಂಡನ್‌ ಎಂದು ಸ್ಟಾರ್ಟ್‌ ಅಪ್‌ ಜಿನೋಮ್‌ನ “ಗ್ಲೋಬಲ್‌ ಸ್ಟಾರ್ಟ್‌ ಅಪ್‌ ರ್‍ಯಾಂಕಿಂಗ್‌’ನಲ್ಲಿ ಉಲ್ಲೇಖೀಸಲಾಗಿದೆ. ಭಾರತದ ಸ್ಟಾರ್ಟಪ್‌ಗಳು ಪ್ರಸಕ್ತ ವರ್ಷದ ಮೊದಲಾರ್ಧದಲ್ಲಿ 12.1 ಶತಕೋಟಿ ಡಾಲರ್‌ ಸಂಗ್ರಹಿಸಿದ್ದು, ಟೆಕ್‌ ಮತ್ತು ಇನೋವೇಶನ್‌ನಲ್ಲಿ ಜಾಗತಿಕ ಹಬ್‌ ಆಗಿ ಭಾರತ ಮುಂದಡಿಯಿಡುತ್ತಿರುವುದಕ್ಕೆ ಇದು ಸಾಕ್ಷಿ ಎಂದು ವರದಿ ಹೇಳಿದೆ.

ಬೆಂಗಳೂರು ಮತ್ತು ಕರ್ನಾಟಕದ ಇತರ ಪ್ರದೇಶಗಳು ಜಗತ್ತಿನಲ್ಲೇ 4ನೇ ಅತಿದೊಡ್ಡ ತಂತ್ರಜ್ಞಾನ ಮತ್ತು ನಾವೀನ್ಯತೆಯ ಕ್ಲಸ್ಟರ್‌ಗಳಾಗಿ ರೂಪುಗೊಂಡಿವೆ. ಇಲ್ಲಿ 400ಕ್ಕೂ ಅಧಿಕ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳಿವೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು, ಮುಂಬಯಿ ಹೊರತು ಪಡಿಸಿ ಭಾರತದ ಚೆನ್ನೈ, ಪುಣೆ ಮತ್ತು  ಹೈದರಾಬಾದ್‌ ಕೂಡ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

Advertisement

Udayavani is now on Telegram. Click here to join our channel and stay updated with the latest news.

Next