ಮುಂಬಯಿ: ಈಗಾಗಲೇ ಭಾರೀ ಮಳೆಯಿಂದ ತತ್ತರಿಸಿ ಹೋಗಿರುವ ವಾಣಿಜ್ಯ ನಗರಿ ಮುಂಬಯಿಗೆ ಮತ್ತೊಮ್ಮೆ ವರುಣಾಘಾತ ಸಾಧ್ಯತೆ ಎದುರಾಗಿದೆ. ಮಾತ್ರವಲ್ಲದೇ ಮುಂಬಯಿ ನಗರಕ್ಕೆ ಹವಾಮಾನ ಇಲಾಖೆ ಮುಂದಿನ 24 ಗಂಟೆಗಳಲ್ಲಿ ‘ರೆಡ್ ಅಲರ್ಟ್’ ಸೂಚನೆ ನೀಡಿದೆ. ಮಳೆ ಕೊರತೆ ಎದುರಿಸುತ್ತಿರುವ ಲಾತೂರ್, ಬೀಢ್ ಮತ್ತು ನಾಂದೇಡ್ ಪ್ರದೇಶಗಳಿಗೂ ಸಹ ಹವಾಮಾನ ಇಲಾಖೆ ‘ಹಳದಿ ಎಚ್ಚರಿಕೆ’ ನೀಡಿದೆ.
ಮುಂದಿನ 24 ಗಂಟೆಗಳಲ್ಲಿ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಇಲಾಖೆ ಎಚ್ಚರಿಕೆ ಸೂಚನೆಯನ್ನು ರವಾನಿಸಿದೆ. ಈ ಕುರಿತಾಗಿ ಎಚ್ಚರಿಕೆಯ ಸೂಚನೆ ನೀಡಿರುವ ಭಾರತೀಯ ಹವಾಮಾನ ಇಲಾಖೆ, ಮುಂದಿನ 24 ಗಂಟೆಗಳಲ್ಲಿ ಮುಂಬಯಿ ನಗರ ಸೇರಿದಂತೆ ನಾಶಿಕ್, ಪುಣೆ ಮತ್ತು ಔರಂಗಾಬಾದ್ ಪ್ರದೇಶಗಳಲ್ಲೂ ‘ಭಾರೀ ಮತ್ತು ಭರ್ಜರಿ ಮಳೆ’ಯಾಗುವ ಮುನ್ಸೂಚನೆಯನ್ನು ನೀಡಿದೆ.
ವಿದರ್ಭ, ಮಧ್ಯಮಹಾರಾಷ್ಟ್ರದ ಘಟ್ಟ ಪ್ರದೇಶಗಳು ಮತ್ತು ಉತ್ತರ ಕೊಂಕಣ, ಗೋವಾ, ಆಂಧ್ರ ಕರಾವಳಿ, ತೆಲಂಗಾಣ ಹಾಗೂ ರಾಯಲಸೀಮೆ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ‘ಭಾರೀ ಮಳೆ’ಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಮುಂದಿನ ದಿನಗಳಲ್ಲಿ ವಾಣಿಜ್ಯ ನಗರಿಯಲ್ಲಿ ಕನಿಷ್ಟ 26 ಡಿಗ್ರಿ ಸೆಲ್ಷಿಯಸ್ ಮತ್ತು ಗರಿಷ್ಠ 30 ಡಿಗ್ರಿ ಸೆಲ್ಷಿಯಷ್ ಉಷ್ಣಾಂಶ ದಾಖಲುಗೊಳ್ಳುವ ನಿರೀಕ್ಷೆ ಇದೆ ಎಂದೂ ಹವಾಮಾನ ಇಲಾಖೆ ಹೇಳಿದೆ.
ವಾಣಿಜ್ಯ ನಗರಿಯಲ್ಲಿ ಈ ಬಾರಿ ಸಮೃದ್ಧ ಮಳೆಯಾಗಿದೆ. ಸೆಪ್ಟಂಬರ್ ತಿಂಗಳಲ್ಲಿ ಇಲ್ಲಿಯವರೆಗೆ ನಗರದಲ್ಲಿ 915 ಮಿಲಿ ಮೀಟರ್ ಮಳೆಯಾಗಿರುವುದು ದಾಖಲೆಯಾಗಿದೆ. ಈ ಮುಂಗಾರು ಋತುವಿನಲ್ಲಿ ಮುಂಬಯಿ ನಗರದಲ್ಲಿ ಒಟ್ಟಾರೆಯಾಗಿ 2366 ಮಿಲಿಮೀಟರ್ ಮಳೆಯಾಗಿದ್ದು ಇದು ನಗರದಲ್ಲಿ ಪ್ರತೀವರ್ಷ ಸುರಿಯುವ ಸರಾಸರಿ ಮಳೆಗಿಂತ (1800 ಮಿ.ಮಿ.) 26 ಪ್ರತಿಶತ ಅಧಿಕವಾಗಿದೆ.