Advertisement

ಅತ್ತೆಯಲ್ಲಿ ಅಮ್ಮ ಕಾಣುತ್ತಿದ್ದಾಳೆ…

12:59 PM May 13, 2020 | mahesh |

“ಮನೆ- ಕಾಲೇಜು, ಕಾಲೇಜು- ಮನೆ’ ಈ ಚಕ್ರದಿಂದ ನಮಗೆ ಬಿಡುವು ಸಿಗೋದೇ ಇಲ್ಲವೇನೋ. ದಿನ ಬೆಳಗಾದರೆ ಅದೇ ಓಟ, ಅದೇ ಗಡಿಬಿಡಿ. ಒಂದಷ್ಟು ದಿನ ರಜೆ ತಗೊಂಡು, ಆರಾಮಾಗಿ ಮನೆಯಲ್ಲಿರೋಣ ಅನ್ನಿಸುತ್ತೆ- ಸ್ಟಾಫ್ ರೂಮಿನಲ್ಲಿ ಹೆಂಗಸರು ಮಾತ್ರ ಇರೋವಾಗ, ಈ ಮಾತು ಒಬ್ಬರಿಂದಲಾದರೂ ಬಂದೇ ಬರುತ್ತದೆ. ದಿನಾ ಗಂಟೆಗಟ್ಟಲೆ ನಿಂತು ಪಾಠ ಮಾಡುತ್ತಾ, ಹದಿಹರೆಯದ ಮಕ್ಕಳ ತರಲೆ, ಚೇಷ್ಟೆ, ಉಡಾಳತನವನ್ನು ಸಹಿಸಿಕೊಳ್ಳುತ್ತಾ, ವಾರವಿಡೀ ಕಳೆಯುವವರಿಗೆ ಭಾನುವಾರದ ರಜೆ, ರಜೆ ಅಂತ ಅನ್ನಿಸುವುದೇ ಇಲ್ಲ. ಹೀಗಿರುವಾಗ, ಲಾಕ್‌ಡೌನ್‌ ಘೋಷಣೆಯಾದಾಗ ಮಕ್ಕಳಿಗಿಂತ ಜಾಸ್ತಿ ನಮಗೇ ಖುಷಿಯಾಗಿತ್ತು. ಸಹೋದ್ಯೋಗಿ ರಮ್ಮಾ ಫೋನ್‌ ಮಾಡಿ, “ಮೇಡಂ, ಒಂದು ವಾರ ಲೇಟಾಗಿ ಏಳಬಹುದು’ ಅಂತ
ಕುಣಿದಾಡಿದ್ದರು. ಆದರೆ, ಒಂದು ವಾರದ ಲಾಕ್‌ಡೌನ್‌ ಒಂದು ತಿಂಗಳವರೆಗೆ ಮುಂದುವರಿದಾಗ, ಆನ್‌ಲೈನ್‌ ಮೂಲಕ ಮಕ್ಕಳಿಗೆ ತರಗತಿಗಳನ್ನು ಮಾಡಿ, ಅಂತ ಪ್ರಿನ್ಸಿಪಾಲರು ಹೇಳಿದರು.

Advertisement

ವಿಡಿಯೋ ತರಗತಿಗೆ ಅಡ್ಜಸ್ಟ್ ಆಗುವ ಹೊತ್ತಿಗೆ, ಒಂದು ವಾರದ ರಜೆಯ “ಮಜಾ’ ಮುಗಿದು ಹೋಗಿತ್ತು. ಲಾಕ್‌ಡೌನ್‌ಗೂ ಸ್ವಲ್ಪ ದಿನಗಳ ಮುಂಚೆ, ಊರಿನಿಂದ ಅತ್ತೆ ಬಂದಿದ್ದರು. ಧಾರಾವಾಹಿಗಳಲ್ಲಿ ತೋರಿಸುವಷ್ಟು ಅಲ್ಲದಿದ್ದರೂ, ಕೆಲವು ವಿಷಯಗಳಲ್ಲಿ ನಮ್ಮತ್ತೆ ಸ್ವಲ್ಪ ಸ್ಟ್ರಿಕ್ಟೇ! ಈರುಳ್ಳಿ, ಬೆಳ್ಳುಳ್ಳಿ ತಿನ್ನುವುದಿಲ್ಲ, ಮೊಸರು ಜಾಸ್ತಿ ನೀರಾಗಿರಬಾರದು, ಕಾಫಿಯಲ್ಲಿ ಸಕ್ಕರೆ ಕಡಿಮೆ ಇರಬೇಕು, ಸ್ನಾನ ಮಾಡಿಯೇ ತಿಂಡಿ ತಿನ್ನಬೇಕು, ದಿನವೂ ಮನೆಯ ಕಸ ಗುಡಿಸಿ, ಒರೆಸಬೇಕು ಅಂತೆಲ್ಲಾ ಇದೆ. ಅವರ ರೀತಿ ನೀತಿಗೆ ನಮ್ಮನ್ನೂ, ಮುಖ್ಯವಾಗಿ ಮಕ್ಕಳನ್ನೂ ಅಡ್ಜಸ್ಟ್
ಮಾಡುವಷ್ಟರಲ್ಲಿ, ಮತ್ತೂಂದು ವಾರ ಕಳೆಯಿತು.

ಒಂದು ದಿನ ಬೆಳಗ್ಗೆ ಕಾಫಿ ಹೀರುತ್ತಾ, “ಕಲಾ, ಮನೇನ ಸ್ವಲ್ಪ ಕ್ಲೀನ್‌ ಇಟ್ಕೊಬೇಕು. ನೋಡು, ಕಪಾಟು, ಟಿವಿ ಸ್ಟ್ಯಾಂಡ್ ಮೇಲೆಲ್ಲಾ ಧೂಳು, ಬಲೆ ಕಟ್ಟಿದೆ’ ಅಂದರು. ಅದೇನೋ ಹೇಳ್ತಾರಲ್ಲ, ಅಮ್ಮ ನೂರು ಹೇಳಿದರೂ ಏನೂ ಆಗೋದಿಲ್ಲ, ಅತ್ತೆ ಒಂದು ಮಾತು ಹೇಳಿದರೂ ಬೇಜಾರಾಗುತ್ತೆ ಅಂತ. ನನಗೂ ಹಾಗೇ ಆಯ್ತು. ಅತ್ತೆಯ ಮಾತನ್ನು ಸೀರಿಯಸ್ಸಾಗಿ ತಗೊಂಡು ಇಡೀ ಮನೆ ಕ್ಲೀನಿಂಗ್‌ ಶುರುಮಾಡಿದೆ. ಒಂದು ದಿನ ಕಟೈನ್‌ಗಳನ್ನೆಲ್ಲ ಒಗೆದು ಹಾಕಿದೆ. ಮತ್ತೂಂದು ದಿನ ಕಪಾಟು ತೆರೆದು, ಒಳಗಿನ ಬಟ್ಟೆಗಳನ್ನೆಲ್ಲ ಜೋಡಿಸಿದೆ. ಇನ್ನೊಂದಿನ ಶೂ ಕೇಸ್‌ ಕ್ಲೀನ್‌,
ಬೆಡ್‌ಶೀಟ್‌ ಕ್ಲೀನ್‌ ಮನೆಯ ಎಕ್ಸ್ ಟ್ರಾ ಹಾಸಿಗೆಗಳನ್ನೆಲ್ಲ ಬಿಸಿಲಿಗೆ ಹಾಕಿದ್ದು, ಅಂತ ದಿನಾ ಒಂದೊಂದು ಕೆಲಸಾನ ಮೈ ಮೇಲೆ ಎಳೆದುಕೊಂಡು ಮಾಡಿದೆ. ಜೊತೆ ಜೊತೆಗೆ ಮಕ್ಕಳಿಗೆ ಆನ್‌ಲೈನ್‌ ಪಾಠ ನಡೆದೇ ಇತ್ತು.

ಇಷ್ಟೆಲ್ಲಾ ಮಾಡಿ ಒಂದಿನ ಹುಷಾರಿಲ್ಲದೆ ಮಲಗಿದಾಗ, ಅತ್ತೆಯೇ ಅಡುಗೆ ಕೆಲಸ ವಹಿಸಿಕೊಂಡರು.  ಅವತ್ತು ಊಟಕ್ಕೆ ಕೂತಿದ್ದಾಗ- “ಪಾಪ, ಮನೆ ಒಳಗೂ, ಹೊರಗೂ ದುಡಿತಾಳೆ ಅವ್ಳು. ಈಗ ರಜೆ ಇದೆ. ಇಬ್ರೂ ಕೆಲಸ ಹಂಚಿಕೊಂಡು ಮಾಡ್ಸೋದಲ್ವ? ಮೊನ್ನೆಯಿಂದ ಒಬ್ಳೆ ಎಲ್ಲ ಕೆಲಸ ಮಾಡಿದ್ಳು. ನೀನು ನೋಡ್ಕೊಂಡ್‌ ಸುಮ್ನೆ ಇದ್ಯಲ್ಲ, ಬಾಯಿ ಬಿಟ್ಟು ಹೇಳದೆ, ಈ ಗಂಡಸರಿಗೆ ಕೆಲವೆಲ್ಲ ಅರ್ಥವೇ ಆಗೋದಿಲ್ಲ ಅನ್ಸುತ್ತೆ. ನೀನು ಅವಳ ಕೆಲಸಕ್ಕೆ ಕೈ ಜೋಡಿಸಿದ್ರೆ, ಮಕ್ಕಳೂ ಅದನ್ನ ನೋಡಿ ಕಲಿಯುತ್ತೆ’ ಅಂತ ಮಗನನ್ನು ತರಾಟೆಗೆ ತೆಗೆದುಕೊಂಡಾಗಲೇ, ಅತ್ತೆಯ ಇನ್ನೊಂದು ಮುಖ ನಂಗೆ ಕಾಣಿಸಿದ್ದು… ಮದುವೆ ಆದಾಗಿನಿಂದ ಅತ್ತೆ ಊರಲ್ಲಿ, ನಾವು ಬೆಂಗಳೂರಿನಲ್ಲಿ ಇದ್ದುದರಿಂದ ಅವರನ್ನು ಸರಿಯಾಗಿ ಅರ್ಥಮಾಡಿಕೊಳ್ಳಲೇ ಆಗಿರಲಿಲ್ಲ. ಸದ್ಯ ಈ ಲಾಕ್‌ ಡೌನ್‌ನಿಂದಾಗಿ ಅದೊಂದು ಒಳ್ಳೆಯದಾಯ್ತು. ಆ ಘಟನೆ ನಂತರ ಅತ್ತೆಯಲ್ಲಿ ಅಮ್ಮ ಕಾಣಿಸುತ್ತಿದ್ದಾಳೆ ನನಗೆ..

Advertisement

Udayavani is now on Telegram. Click here to join our channel and stay updated with the latest news.

Next