ಅವರು ಜು.19ರಂದು ಸಂಜೆ ಮುಲುಂಡ್ ಪೂರ್ವದ ಕೇಳ್ಕರ್ ಕಾಲೇಜು ಹತ್ತಿರದ ಮರಾಠ ಮಂಡಳ್ ಸಭಾಗೃಹದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಮತ್ತು ಮುಲುಂಡ್ ಫ್ರೆಂಡ್ಸ್ ಇದರ ವತಿಯಿಂದ ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ನಾಡಿ ಅವರ ನೇತೃತ್ವದಲ್ಲಿ ವಿ.ಪಿ. ಎಂ. ಕನ್ನಡ ಶಾಲಾ ಮಕ್ಕಳಿಗೆ ನೀಡಲಾದ ಪ್ರತಿಭಾ ಪುರಸ್ಕಾರ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ, ಸಂಸ್ಥೆಯು ನೀಡಿದ ಸಮ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.
Advertisement
ಮಕ್ಕಳಿಗೆ ಮನೆಯೇ ಮೊದಲ ಪಾಠ ಶಾಲೆ. ಅದು ನಿಜವಾಗಬೇಕಾದರೆ ಅಲ್ಲಿ ಪಾಲಕರ, ಮಾರ್ಗದರ್ಶಕರ ಕೆಲಸ ಬಹಳಷ್ಟಿದೆ. ದೇಶಕ್ಕಾಗಿ ಹೋರಾಡಿದ ಸಂಪನ್ಮೂಲ ವ್ಯಕ್ತಿಗಳ ಆದರ್ಶ ಬದುಕಿನ ಬಗ್ಗೆ ಮಕ್ಕಳಿಗೆ ತಿಳಿಸಿ ಹೇಳುವ ಅಗತ್ಯವಿದೆ ಎಂದೆನ್ನುತ್ತಾ ಮುಲುಂಡ್ ಫ್ರೆಂಡ್ಸ್ ಮಕ್ಕಳ ವಿದ್ಯಾರ್ಥಿ ಬದುಕಿಗಾಗಿ ನೀಡುತ್ತಾ ಬಂದಿರುವ ಪ್ರೋತ್ಸಾಹವನ್ನು ಶ್ಲಾಘಿಸಿದರು ಮತ್ತು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ವಿಶುಕುಮಾರ್ ಶೆಟ್ಟಿ ಅಂಬಲಪಾಡಿ ಅವರನ್ನು ಮುಲುಂಡ್ ಫ್ರೆಂಡ್ಸ್ ಮತ್ತು ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ವತಿಯಿಂದ ಅತಿಥಿ ಗಣ್ಯರುಗಳ ಹಸ್ತದಲ್ಲಿ ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ನೆನಪಿನ ಕಾಣಿಕೆ, ಸಮ್ಮಾನ ಪತ್ರದೊಂದಿಗೆ ಸಮ್ಮಾನಿಸಿ ಅಭಿನಂದಿಸಲಾಯಿತು.
ರಾಜಕೀಯ ನೇತಾರ, ಹೊಟೇಲ್ ಉದ್ಯಮಿ ಜಯಪ್ರಕಾಶ್ ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ, ಸುರೇಶ್ ಶೆಟ್ಟಿ ಯೆಯ್ನಾಡಿ ಅವರ ವಿದ್ಯಾಸೇವೆ ಅಭಿನಂದನಾರ್ಹ. ಅವರ ಸಮಾಜ ಸೇವೆಗೆ ನಮ್ಮ ಸಹಕಾರ ನಿರಂತರವಿದೆ ಎಂದರು.
ವಿ.ಪಿ.ಎಂ. ಕನ್ನಡ ಶಾಲೆಯ 10ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಪ್ರಾಥಮಿಕ ಶಾಲಾ ಮಕ್ಕಳಿಗೆ ಸಮವಸ್ತ್ರವನ್ನು ಅತಿಥಿ ಗಣ್ಯರ ಹಸ್ತದಿಂದ ವಿತರಿಸಲಾಯಿತು. ಪ್ರತಿಭಾ ಪುರಸ್ಕಾರದ ಯಾದಿಯನ್ನು ಜೊತೆ ಕಾರ್ಯದರ್ಶಿ ಯುವರಾಜ್ ಶೆಟ್ಟಿ ಓದಿದರು. ಸಮ್ಮಾನ ಪತ್ರವನ್ನು ವಾಚಿಸಿ ಕಾರ್ಯಕ್ರಮವನ್ನು ಚಲನಚಿತ್ರ ನಟ ಬಾಬಾ ಪ್ರಸಾದ್ ಅರಸರವರು ನಿರೂಪಿಸಿದರು. ಕೋಶಾಧಿಕಾರಿ ವೇಣುಗೋಪಾಲ್ ಶೆಟ್ಟಿ ವಂದಿಸಿದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಸೌತ್ ಸೇವಾ ಸಂಘ ಕಲೀಲಾ ಇದರ ಅಧ್ಯಕ್ಷ ವಿಜಯ ಶೆಟ್ಟಿ, ಮುಲುಂಡ್ ಉದ್ಯಮಿ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು.
Related Articles
Advertisement
ಮುಖ್ಯ ಅತಿಥಿ, ಮುಲುಂಡ್‌ನ ಹೊಟೇಲ್ ಉದ್ಯಮಿ, ಯಕ್ಷ ಮಾನಸ ಮುಂಬಯಿಯ ಅಧ್ಯಕ್ಷ ಶೇಖರ್ ಆರ್. ಶೆಟ್ಟಿ ಮಾತನಾಡುತ್ತ, ಸಮಾಜ ಸೇವಕ ಸುರೇಶ್ ಶೆಟ್ಟಿ ಯೆಯ್ನಾಡಿ ಅವರು ತಮ್ಮ ಮುಲುಂಡ್ ಫ್ರೆಂಡ್ಸ್‌ನ ಆಶ್ರಯದಲ್ಲಿ ಕಳೆದ 22 ವರ್ಷಗಳಿಂದ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸುತ್ತಾ ಬಂದಿದ್ದು, ಈ ಬಾರಿಯೂ ಅದನ್ನು ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಇದರ ಸಹಯೋಗದೊಂದಿಗೆ ನೀಡು ತ್ತಿದ್ದಾರೆ. ಇದು ನಿಜವಾಗಿಯೂ ಮೆಚ್ಚುವಂತಹ ಕೆಲಸ ಎಂದು ಶ್ಲಾಘಿಸಿದರು. ಮತ್ತು ವಿಶುಕುಮಾರ್ ಶೆಟ್ಟಿ ಅವರ ಉತ್ಕೃಷ್ಟ ಸೇವೆ, ಸಮಾಜ ಪರ ಚಿಂತನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಸಾಧನೆ ಗಿನ್ನೆಸ್ ಬುಕ್‌ನಲ್ಲಿ ದಾಖಲೆಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಮುಲುಂಡ್ ಫ್ರೆಂಡ್ಸ್ ಶಾಲಾ ಮಕ್ಕಳ ಪ್ರತಿಭಾ ಪುರಸ್ಕಾರ ಹಾಗೂ ಸಮವಸ್ತ್ರ ವಿತರಣೆ ಕಾರ್ಯಕ್ರಮದ ಜೊತೆಗೆ ಓರ್ವ ಶ್ರೇಷ್ಠ ಸಮಾಜ ಸೇವಕರಾಗಿರುವ ವಿಶುಕುಮಾರ್ ಶೆಟ್ಟಿ ಅವರನ್ನು ಆಹ್ವಾನಿಸಿ ಸಮ್ಮಾನಿಸಿದೆ. ಇದು ನಿಜವಾಗಿಯೂ ಅರ್ಥಪೂರ್ಣ. ಅವರು ಮಾಡಿದ ಮಾನವೀಯತೆಯನ್ನು ಮೆರೆಯುವ ಕೆಲಸಗಳನ್ನು ಕೇಳಿದಾಗ ನಿಜವಾಗಿಯೂ ಇಂಥವರು ಬೇಕೆಂದೆನಿಸುತ್ತದೆ. ಕಣ್ಣ ಮುಂದೆ ಒಂದು ಅಪಘಾತವಾದರೆ ಯಾರೂ ಸಹಾಯಕ್ಕೆ ಬಾರದ ಇಂದಿನ ಕಾಲದಲ್ಲಿ ವಿಶುಕುಮಾರ್ ಅವರು ಸಾವಿರಾರು ಜನರಿಗೆ ಮರುಜೀವ ನೀಡುವಲ್ಲಿ ತಮ್ಮ ಯೋಗದಾನವನ್ನು ನೀಡಿದ್ದಾರೆ. ಅವರ ಈ ಕೆಲಸವನ್ನು ಸರಕಾರ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.