Advertisement

ಮುಲುಂಡ್‌ ಬಂಟ್ಸ್‌ ವಾರ್ಷಿಕ ಕ್ರೀಡೋತ್ಸವದ ಸಮಾರೋಪ ಸಮಾರಂಭ

09:58 AM Feb 16, 2018 | |

ಮುಂಬಯಿ: ಮುಲುಂಡ್‌ ಬಂಟ್ಸ್‌ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವಾ ಚಟುವಟಿಕೆಗಳೊಂದಿಗೆ  ಪ್ರತೀ ವರ್ಷ ಕ್ರೀಡೆಗೂ ಮಹತ್ವವನ್ನು ನೀಡುತ್ತಾ ಬಂದಿದೆ. ಸಮಾಜ ಬಾಂಧವರಲ್ಲಿನ ಕ್ರೀಡಾ ಪ್ರತಿಭೆಯನ್ನು ಹೊರಗೆಡಲು ಕಳೆದ ಕೆಲವು ವರ್ಷಗಳಿಂದ ಕ್ರೀಡಾಕೂಟವನ್ನು ಮುಲುಂಡ್‌ ಬಂಟ್ಸ್‌ ಆಯೋಜಿಸುತ್ತಾ ಬಂದಿದೆ. ಸದಸ್ಯ ಬಾಂಧವರು ಹಾಗೂ ಅವರ ಮಕ್ಕಳು ಅತಿ ಉತ್ಸಾಹದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಸಹಕಾರವನ್ನು ನೀಡುತ್ತಿದ್ದಾರೆ. ಜೀವನದಲ್ಲಿ ಯಶಸ್ಸನ್ನು ಕಾಣಲು ಶಿಕ್ಷಣದೊಂದಿಗೆ ಕ್ರೀಡೆಯೂ ಅಗತ್ಯವಿದೆ. ಪಾಲಕರು ತಮ್ಮ ಮಕ್ಕಳಿಗೆ ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಕ್ರೀಡೆಯಿಂದ ವ್ಯಕ್ತಿತ್ವ ವಿಕಸನ ವಾಗಲು ಸಾಧ್ಯವಿದೆ. ಭಾರತ ಸರಕಾರ ಕೂಡ ಕ್ರೀಡೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ  ಎಂದು ಮುಲುಂಡ್‌ ಬಂಟ್ಸ್‌ನ ಅಧ್ಯಕ್ಷ ಪ್ರಕಾಶ್‌ ಶೆಟ್ಟಿ ಹುಂತ್ರಿಕೆ ಅವರು ನುಡಿದರು.

Advertisement

ಫೆ. 11 ರಂದು ಮುಲುಂಡ್‌  ಜಿಮಾVನದಲ್ಲಿ ಮುಲುಂಡ್‌ ಬಂಟ್ಸ್‌ ಆಯೋಜಿಸಿದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಸದಸ್ಯ ಬಾಂಧವರು ಸಂಸ್ಥೆಯ ಎಲ್ಲಾ ಕಾರ್ಯಕ್ರಮಗಳ ಯಶಸ್ಸಿಗೆ ಸಹಕರಿಸುವಂತೆ ವಿನಂತಿಸಿ, ವಿಜೇತ ಸ್ಪರ್ಧಿಗಳಿಗೆ ಹಾಗೂ ಪಾಲ್ಗೊಂಡ ಎಲ್ಲರಿಗೂ ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಥಾಣೆ ಬಂಟ್ಸ್‌ನ ಅಧ್ಯಕ್ಷ ಕುಶಲ ಸಿ. ಭಂಡಾರಿ ಅವರು ಮಾತನಾಡಿ, ಸಮಾಜದ ಮಕ್ಕಳಲ್ಲಿ ಅಡಕವಾಗಿರುವ ಕ್ರೀಡಾಪ್ರತಿಭೆಯನ್ನು ಗುರುತಿಸಲು ಇಂತಹ ಕ್ರೀಡಾಕೂಟ ಸಹಕಾರಿಯಾಗಿವೆ. ಸಮಾಜ ಬಾಂಧವರು ಒಂದೆಡೆ ಸೇರುವ ಅವಕಾಶವನ್ನು ಕ್ರೀಡಾಕೂಟವು ಕಲ್ಪಿಸಿಕೊಡುತ್ತದೆ. ಬಹಳ ಅನ್ಯೋನ್ಯತೆಯಲ್ಲಿರುವ ಥಾಣೆ ಬಂಟ್ಸ್‌ ಹಾಗೂ ಮುಲುಂಡ್‌ ಬಂಟ್ಸ್‌ ಜಂಟಿಯಾಗಿ ಕ್ರೀಡಾಕೂಟವನ್ನು ಆಯೋಜಿಸುವ ಅಶಯ ನನ್ನದಾಗಿದೆ ಎಂದರು.

ಮಹಾರಾಷ್ಟ್ರ ಮಾಜಿ ಕಬಡ್ಡಿ ಆಟಗಾರ ಜಯ ಶೆಟ್ಟಿ ಅವರು ಮಾತನಾಡಿ, ಕ್ರೀಡೆ ಜೀವನದ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ಗೆಲುವು ಮುಖ್ಯವಲ್ಲ. ಭಾಗವಹಿಸುವುದು ಮುಖ್ಯ. ಪ್ರತಿಯೊಬ್ಬರು ಕ್ರೀಡಾ ಆಸಕ್ತಿ ಬೆಳೆಸಿಕೊಂಡು ಅದರಲ್ಲಿ ಭಾಗವಹಿಸಲು ಪ್ರಯತ್ನಿಸಬೇಕು. ಇಂತಹ ಕ್ರೀಡಾಕೂಟದಿಂದ ಒಳ್ಳೆಯ ಕೌಟುಂಬಿಕ ಸಂಬಂಧ ಬೆಳೆಯಲು ಸಾಧ್ಯವಾಗುತ್ತದೆ ಎಂದು ನುಡಿದರು.

ಈ ಸಂದರ್ಭದಲ್ಲಿ ವಿವಿಧ ಕ್ರೀಡಾಸ್ಪರ್ಧೆಯಲ್ಲಿ ವಿಜೇತರಾದ ಸದಸ್ಯ ಬಾಂಧವರಿಗೆ, ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿ ಶುಭಹಾರೈಸಿದರು. ವೇದಿಕೆಯಲ್ಲಿ ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ಹೇಮಂತ್‌ ವಿ. ಶೆಟ್ಟಿ, ಮುಲುಂಡ್‌ ಬಂಟ್ಸ್‌ನ ಉಪಾಧ್ಯಕ್ಷ ವಸಂತ ಎನ್‌. ಶೆಟ್ಟಿ ಪಲಿಮಾರು, ಜತೆ ಕಾರ್ಯದರ್ಶಿಗಳಾದ ಎನ್‌. ಹರಿಪ್ರಸಾದ್‌ ಶೆಟ್ಟಿ, ಸುಧಾಕರ್‌ ಆರ್‌. ಶೆಟ್ಟಿ, ಜತೆ ಕೋಶಾಧಿಕಾರಿ ಪ್ರಸಾದ್‌ ಪಿ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಿನುತಾ ಎಸ್‌. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಯುವ ವಿಭಾಗದ ಕಾರ್ಯಾಧ್ಯಕ್ಷ ಮೋಹಿತ್‌ ಎಂ. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಕಾರ್ಯಾಧ್ಯಕ್ಷ ವೇಣುಗೋಪಾಲ್‌ ಶೆಟ್ಟಿ ವಂದಿಸಿದರು. ಚಿತ್ರ-ವರದಿ : ಸುಭಾಶ್‌ ಶಿರಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next