ಕುಂದಾಪುರ: ಒಂದೊಂದು ಇಲಾಖೆಗೆ ಹೋದಾಗ ಒಂದೊಂದು ಕಾರ್ಡ್. ಕಿಸೆಯಲ್ಲಿ ಹತ್ತಾರು ಕಾರ್ಡ್‌ಗಳನ್ನು ಇಟ್ಟುಕೊಂಡು ತಿರುಗಾಡುವುದು ಕಷ್ಟ. ಇದರ ಜತೆಗೆ ಎಲ್ಲದಕ್ಕೂ ಆಧಾರ್ ಲಿಂಕ್ ಮಾಡಬೇಕಾದ ಅನಿವಾರ್ಯತೆ. ಈ ಎಲ್ಲ ಚಿಂತೆಗಳಿಗೆ ಕೇಂದ್ರ ಸರಕಾರ ಪರಿಹಾರ ಕಂಡುಕೊಳ್ಳಲು ಸಿದ್ಧತೆ ನಡೆಸುತ್ತಿದೆ. ಎಟಿಎಂ ಕಾರ್ಡ್ ಮಾದರಿಯ ಒಂದು ಬಹೂಪಯೋಗಿ ಕಾರ್ಡ್‌ನಲ್ಲಿ ಎಲ್ಲ ಕಾರ್ಡ್‌ಗಳ ಮಾಹಿತಿಗಳೂ ಅಡಕಗೊಳ್ಳಲಿವೆ.
ಸೆಪ್ಟಂಬರ್ ವೇಳೆಗೆ:
2019ರ ಸೆಪ್ಟಂಬರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಹೂಪಯೋಗಿ ಕಾರ್ಡ್ ಕುರಿತು ಘೋಷಣೆ ಮಾಡಿದ್ದು 2021ರಿಂದ ಚಾಲನೆ ದೊರೆಯಲಿದೆ ಎಂದಿದ್ದರು. ಸೆಪ್ಟಂಬರ್‌ನಿಂದ ನೋಂದಣಿ ಆರಂಭಗೊಳ್ಳುವ ನಿರೀಕ್ಷೆ ಇದೆ.
ನೇಮಕಾತಿ:
ಲಭ್ಯ ಮಾಹಿತಿ ಪ್ರಕಾರ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಹೈದರಾಬಾದ್‌ನ ತೇರಾ ಸಾಫ್ಟ್ವೇರ್ ಲಿಮಿಟೆಡ್ ಸಂಸ್ಥೆಗೆ ದತ್ತಾಂಶ ಸಂಗ್ರಹಿಸುವ ಜವಾಬ್ದಾರಿ ದೊರೆತಿದೆ. ಕಂಪೆನಿಯು ಈಗಾಗಲೇ ದತ್ತಾಂಶ ಸಂಗ್ರಾಹಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಸ್ವಯಂಸೇವಾ ಸಂಸ್ಥೆಗಳ ಮೂಲಕ ನೇಮಕಾತಿ ಮಾಡಲಾಗುತ್ತಿದ್ದು ಆ. 11ರಂದು ಕುಂದಾಪುರದಲ್ಲಿ ಈ ತಾಲೂಕಿನವರ ಸಂದರ್ಶನ ಪರೀಕ್ಷೆ ನಡೆಯಲಿದೆ. 3 ಪಂಚಾಯತ್‌ಗೊಬ್ಬ ಸಿಬಂದಿ, ನಗರದಲ್ಲಿ ಐವರ ನೇಮಕಾತಿ ಆಗಲಿದೆ. ಒಂದು ಪಂಚಾಯತ್‌ನಲ್ಲಿ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇನ್ನೊಂದು ಪಂಚಾಯತ್‌ನಲ್ಲಿ ನಡೆಯಲಿದೆ. ಮಾಹಿತಿಯನ್ನು ಕಂಪ್ಯೂಟರ್‌ಗೆ ಅಳವಡಿಸುವವರಿಗೆ ಒಂದು ಕಾರ್ಡ್‌ಗೆ 8 ರೂ.ಗಳಂತೆ ನಿಗದಿ ಮಾಡಲಾಗಿದೆ. ಅವರು ಸಾರ್ವಜನಿಕರ ಎಲ್ಲ ಬಗೆಯ ಕಾರ್ಡ್‌ಗಳ ಮಾಹಿತಿ ಸಂಗ್ರಹಿಸಲಿದ್ದಾರೆ. ಬಳಿಕ ಹೊಸ ಕಾರ್ಡ್‌ಗೆ ಹೊಸ ಸಂಖ್ಯೆ ದೊರೆಯಲಿದೆ.
ಸಂದೇಹ:
ಇಂತಹ ಕಾರ್ಡ್‌ನಿಂದಾಗಿ ಅಮೂಲ್ಯ ದಾಖಲೆಗಳ ಮಾಹಿತಿ ಸೋರಿಕೆಯಾದೀತೇ ಎಂಬ ಸಂಶಯವೂ ಜನರನ್ನು ಕಾಡತೊಡಗಿದೆ. ಈಗಾಗಲೇ ಆಧಾರ್ ಕುರಿತು ಅನೇಕ ಗೊಂದಲಗಳು ಉಂಟಾಗಿ ಹಂತ ಹಂತವಾಗಿ ಅದನ್ನು ಸರಿಪಡಿಸಿಕೊಳ್ಳಲಾಗುತ್ತಿದೆ. ಬಹೂಪ ಯೋಗಿ ಕಾರ್ಡ್‌ನ ರೀತಿಯಲ್ಲೇ ಒಂದು ದೇಶ ಒಂದು ಪಡಿತರ ಚೀಟಿ ಹೊರತರಲು ಕೇಂದ್ರ ಸರಕಾರ ಸಿದ್ಧತೆ ನಡೆಸುತ್ತಿದ್ದು ಈಗಾಗಲೇ 17 ರಾಜ್ಯಗಳು ಒಪ್ಪಿಗೆ ನೀಡಿವೆ.
ಏನಿದು ಬಹೂಪಯೋಗಿ ಕಾರ್ಡ್ :
ಚಿಪ್ ಹೊಂದಿರುವ ಈ ಕಾರ್ಡ್‌ನಲ್ಲಿ ಆಧಾರ್, ಚಾಲನ ಪರವಾನಿಗೆ, ಬ್ಯಾಂಕ್ ಖಾತೆಗಳ ಮಾಹಿತಿ, ಕಿಸಾನ್ ಕಾರ್ಡ್, ಪಾನ್ ಕಾರ್ಡ್, ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಕಾರ್ಮಿಕ ಗುರುತಿನ ಚೀಟಿ, ಆಯುಷ್ಮಾನ್ ಕಾರ್ಡ್, ಜೀವವಿಮಾ ಮಾಹಿತಿ ಸಹಿತ 21 ಬಗೆಯ ಕಾರ್ಡ್‌ಗಳ ಮಾಹಿತಿ ಲಭ್ಯ.
ಚಿಪ್ ಹೊಂದಿರುವ ಕಾರಣ ದೇಶದ ಯಾವುದೇ ಸ್ಥಳದಲ್ಲಿ ಕಾರ್ಡನ್ನು ಸ್ವೆ„ಪ್ ಮಾಡಿ ನಿರ್ದಿಷ್ಟ ವಿವರಗಳನ್ನು ಸುಲಭವಾಗಿ ಪಡೆಯಬಹುದು. ವಿದೇಶದಲ್ಲಿ ಈ ಮಾದರಿಯ ಕಾರ್ಡ್ ಈಗಾಗಲೇ ಅಸ್ತಿತ್ವದಲ್ಲಿದೆ.
ಮಾಹಿತಿ ಬಂದಿಲ್ಲ :
ಈತನಕ ಬಹೂಪಯೋಗಿ ಕಾರ್ಡ್‌ಗೆ ಮಾಹಿತಿ ಸಂಗ್ರಹಿಸುವ ಕುರಿತು ಸರಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಬಂದ ಬಳಿಕ ಅಗತ್ಯ ನೆರವು ನೀಡಲಾಗುವುದು.
–ಡಾ| ನವೀನ್ ಭಟ್, ಉಡುಪಿ ಜಿ.ಪಂ. ಸಿಇಒ