Advertisement

ತಲಾಖ್‌ ಮಸೂದೆಗೆ ಬಹುಪರಾಕ್‌

02:41 AM Jul 31, 2019 | sudhir |

ನ್ಯಾಯವೇ ಧ್ಯೇಯ ಎಂದ ಸರಕಾರ | ನಾಶವೇ ಉದ್ದೇಶ ಎಂದ ಕಾಂಗ್ರೆಸ್‌
ಅತ್ಯಂತ ಮಹತ್ವದ ತ್ರಿವಳಿ ತಲಾಖ್‌ಗೆ ಸಂಬಂಧಿಸಿದ ಮಸೂದೆಯು 99 ಸದಸ್ಯರ ಬೆಂಬಲ ಮತ್ತು 84 ಮಂದಿಯ ವಿರೋಧದ ನಡುವೆ ಅಂಗೀಕಾರವಾಗುವುದಕ್ಕೂ ಮುನ್ನ, ರಾಜ್ಯಸಭೆಯು ಹೈವೋಲ್ಟೆàಜ್‌ ಚರ್ಚೆ ಮತ್ತು ವಾಗ್ವಾದಗಳಿಗೆ ಸಾಕ್ಷಿಯಾಯಿತು. ಮಸೂದೆಗೆ ಸಂಬಂಧಿಸಿ ಮಾತನಾಡಿದ ಆಡಳಿತಾರೂಢ ಬಿಜೆಪಿ ಸದಸ್ಯರು, ಇದನ್ನು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಜಾರಿ ಮಾಡಲಾಗುತ್ತಿದೆ ಎಂದು ವಾದಿಸಿದರೆ, ಮುಸ್ಲಿಂ ಕುಟುಂಬಗಳನ್ನು ನಾಶ ಮಾಡುವುದೇ ಇದರ ಉದ್ದೇಶ ಎಂದು ವಿಪಕ್ಷ ಸದಸ್ಯರು ಆರೋಪಿಸಿದರು. ವಿವಿಧ ರಾಜಕೀಯ ಪಕ್ಷಗಳ ನಾಯಕರು ತಮ್ಮ ತಮ್ಮ ವಾದಗಳನ್ನು ಮುಂದಿಡುವ ಮೂಲಕ, ವಿಧೇಯಕದ ಚರ್ಚೆಯನ್ನು ಕುತೂಹಲದ ಘಟ್ಟಕ್ಕೆ ತಲುಪಿಸಿದ್ದೂ ಕಂಡುಬಂತು.

Advertisement

ರಾಜ್ಯಸಭೆಯಲ್ಲಿ ಯಾರು ಏನೆಂದರು?
ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ನಾಯಕ
– ಈ ಮಸೂದೆಯು ರಾಜಕೀಯ ಪ್ರೇರಿತವಾಗಿದ್ದು, ಮುಸ್ಲಿಂ ಕುಟುಂಬಗಳನ್ನು ನಾಶ ಮಾಡುವುದೇ ಇದರ ಪ್ರಮುಖ ಉದ್ದೇಶವಾಗಿದೆ. ಪತಿ-ಪತ್ನಿ ಪರಸ್ಪರರ ವಿರುದ್ಧ ವಾದಿಸಲು ವಕೀಲರನ್ನು ನೇಮಿಸಿಕೊಳ್ಳಬೇಕಾದ ಸ್ಥಿತಿ ಎದುರಾಗುತ್ತದೆ. ವಕೀಲರ ಶುಲ್ಕಕ್ಕಾಗಿ ತಮ್ಮಲ್ಲಿರುವ ಆಸ್ತಿಪಾಸ್ತಿ ಮಾರಾಟ ಮಾಡಬೇಕಾಗುತ್ತದೆ. ಜೈಲು ಅವಧಿ ಮುಗಿಯುವಾಗ ಇಬ್ಬರೂ ದಿವಾಳಿಯಾಗುತ್ತಾರೆ.

– ಈ ಮಸೂದೆಯಲ್ಲಿ ನಾವು ಯಾವ ಆಕ್ಷೇಪವನ್ನು ಎತ್ತಿದ್ದೆವೋ ಅದನ್ನು ಬಗೆಹರಿಸುವ ಬದಲಾಗಿ, ಸರಕಾರವು ಕೇವಲ ಕಾಸೆ¾ಟಿಕ್‌ ಸರ್ಜರಿ ಮಾಡಿದೆ. ಇಸ್ಲಾಂನಲ್ಲಿ ವಿವಾಹ ಎನ್ನುವುದು ಒಂದು ಸಿವಿಲ್‌ ಒಪ್ಪಂದ. ಆದರೆ, ಸರಕಾರವು ಈಗ ಈ ಕಾನೂನಿನ ಮೂಲಕ ಅದಕ್ಕೆ ಕ್ರಿಮಿನಲ್‌ ಲೇಪ ಹಚ್ಚುತ್ತಿದೆ.

– ತ್ರಿವಳಿ ತಲಾಖ್‌ ಕಾನೂನಿನಿಂದಾಗಿ ಜೈಲು ಸೇರಿದ ವ್ಯಕ್ತಿಯ ಪತ್ನಿಗೆ ಸರಕಾರವೇನಾದರೂ ಪೋಷಣೆ ಭತ್ತೆ ನೀಡುತ್ತದೆಯೇ ಎಂದು ನಾನು ಅರಿಯಲು ಬಯಸುತ್ತೇನೆ. ಜೈಲಲ್ಲಿ 3 ವರ್ಷಗಳನ್ನು ಕಳೆದ ವ್ಯಕ್ತಿಯು ಹೇಗೆ ತಾನೇ ವಾಪಸ್‌ ಹೋಗಿ ಪತ್ನಿಯೊಂದಿಗೆ ಶಾಂತಿಯುತವಾಗಿ ಜೀವಿಸಬಲ್ಲ?

– ಒಟ್ಟಿನಲ್ಲಿ ಈ ಕಾನೂನು ಮುಸ್ಲಿಂ ಕುಟುಂಬಗಳು ಮತ್ತು ಸಮಾಜವನ್ನು ನಾಶ ಮಾಡುವಂಥದ್ದು. ಸುಪ್ರೀಂ ಕೋರ್ಟ್‌ ಬಗ್ಗೆ ಅಷ್ಟೊಂದು ಗೌರವವಿರುವ ಕೇಂದ್ರ ಸರಕಾರವು, ಥಳಿಸಿ ಹತ್ಯೆಯಂಥ ಪ್ರಕರಣ ತಡೆಗೆ ಕಾನೂನು ಏಕೆ ತರುತ್ತಿಲ್ಲ?

Advertisement

– ಒಂದು ನಿರ್ದಿಷ್ಟ ಧರ್ಮವನ್ನು ನಾಶ ಮಾಡಲೆಂದು ಕಾನೂನು ಮಾಡಬಾರದು. ಅದಕ್ಕಾಗಿ ಈ ಮಸೂದೆಯನ್ನು ಸಂಸತ್‌ನ ಸ್ಥಾಯೀ ಸಮಿತಿಗೆ ಕಳುಹಿಸಿ. ಅಲ್ಲಿ ಯಾವುದನ್ನು ಉಳಿಸಿಕೊಳ್ಳಬೇಕು, ಯಾವುದನ್ನು ತೆಗೆಯಬೇಕು ಎಂಬ ನಿರ್ಧಾರವಾಗಲಿ.

– ಸರಕಾರವು ಅಸಾಂವಿಧಾನಿಕ ಕಾನೂನು ತರುವ ಬದಲು, ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಕಲ್ಪಿಸಿ, ಅವರ ಸಬಲೀಕರಣಕ್ಕೆ ಯತ್ನಿಸಲಿ. ಸಬಲೀಕರಣವು ಕೇವಲ ಮುಸ್ಲಿಂ ಮಹಿಳೆಯರಿಗೆ ಆದರೆ ಸಾಲದು, ಹಿಂದೂ, ಕ್ರಿಶ್ಚಿಯನ್‌, ಜೈನ ಮಹಿಳೆಯರ ಸಬಲೀಕರಣವೂ ಸರಕಾರದ ಉದ್ದೇಶವಾಗಬೇಕು.

ರವಿಶಂಕರ್‌ ಪ್ರಸಾದ್‌ ಕೇಂದ್ರ ಸಚಿವ
– ಗುಲಾಂ ನಬಿ ಆಜಾದ್‌ ಅವರೇ, ನೀವಿಂದು ಬಹಳಷ್ಟು ಮಾತನಾಡಿದ್ದೀರಿ. 1986ರಲ್ಲಿ ನೀವು 400 ಸೀಟುಗಳನ್ನು ಪಡೆದಿದ್ದಿರಿ. ಅದಾದ ಬಳಿಕ 9 ಲೋಕಸಭಾ ಚುನಾವಣೆಗಳು ನಡೆದಿವೆ. ಅವುಗಳ ಪೈಕಿ ಯಾವುದರಲ್ಲೂ ನೀವು ಬಹುಮತ ಗಳಿಸಿಲ್ಲ. ಏಕೆ ಎಂದು ಯೋಚಿಸಿ.

– 2014ರಲ್ಲಿ ಕಾಂಗ್ರೆಸ್‌ ಗೆದ್ದದ್ದು ಕೇವಲ 44ರಲ್ಲಿ. ಈಗ ನಿಮಗಿರುವುದು 52 ಸೀಟುಗಳು ಮಾತ್ರ. ತ್ರಿವಳಿ ತಲಾಖ್‌ ಪಾಪ ಎಂದು ಭಗವಂತನೇ ಹೇಳಿರುವಾಗ, ನಾವೇಕೆ ಅದರ ಬಗ್ಗೆ 4 ಗಂಟೆ ಚರ್ಚೆ ಮಾಡಬೇಕು?

– ಸಕಾರಾತ್ಮಕ ಬದಲಾವಣೆಗೆ ಭಾರತೀಯರು ಯಾವತ್ತೂ ಬೆಂಬಲ ನೀಡುತ್ತಾರೆ. ಈ ಮಸೂದೆಯನ್ನು ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ತರಲಾಗುತ್ತಿದೆ. ಇದನ್ನು ಯಾರೂ ರಾಜಕೀಯ ಕನ್ನಡಕ ಧರಿಸಿಕೊಂಡು ನೋಡಬಾರದು.

– ಒಂದೇ ಬಾರಿಗೆ ಮೂರು ಬಾರಿ ತಲಾಖ್‌ ಎಂದು ಹೇಳಿ ವಿಚ್ಛೇದನ ನೀಡುವ ಪ್ರಕ್ರಿಯೆಯನ್ನು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬಳಿಕವೂ ಈ ಪದ್ಧತಿ ಮುಂದುವರಿದಿದೆ.

– ಹಿಂದೂ ವಿವಾಹ ಕಾಯ್ದೆಗೆ ತಿದ್ದುಪಡಿ ತಂದಾಗ ಯಾರು ಕೂಡ ಧಾರ್ಮಿಕ ವಿಚಾರಗಳ ಕುರಿತು ಪ್ರಶ್ನಿಸಿಲ್ಲ, ಈಗೇಕೆ ಪ್ರಶ್ನಿಸುತ್ತೀರಿ?

– ಬಿಜೆಪಿಯು ಮುಸ್ಲಿಂ ಸಮುದಾಯದಿಂದ ಕಡಿಮೆ ಮತಗಳನ್ನು ಪಡೆಯುತ್ತದೆ. ಆದರೂ ನಾವು ಅವರನ್ನು ಕೈಬಿಟ್ಟಿಲ್ಲ. ಸಬ್‌ಕಾ ಸಾಥ್‌, ಸಬ್‌ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌ ಎಂಬ ತತ್ವದಡಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ.

ದೋಲಾ ಸೇನ್‌, ಟಿಎಂಸಿ ಸಂಸದೆ
ತ್ರಿವಳಿ ತಲಾಖ್‌ಗೆ ಸಂಬಂಧಿಸಿ ಅಧ್ಯಾದೇಶಕ್ಕೆ ತರಲಾಗಿದೆ ಎಂದಾಕ್ಷಣ, ಅದರ ಪರಿಶೀಲನೆ ನಡೆದಿದೆ ಎಂದರ್ಥವಲ್ಲ. ನಮ್ಮದು ಇನ್ನೂ ಅಧ್ಯಕ್ಷೀಯ ಮಾದರಿ ಅಥವಾ ಸರ್ವಾಧಿಕಾರಿ ಸರಕಾರವಾಗಿಲ್ಲ. ಅದು ಆಗುವವರೆಗಾದರೂ ನಾವು ಸಂಸದೀಯ ಪ್ರಜಾಪ್ರಭುತ್ವದಂತೆ ಕಾರ್ಯನಿರ್ವಹಿಸೋಣ. ಮಸೂದೆಯಂತೆ, ಪತಿಗೆ 3 ವರ್ಷ ಜೈಲು ವಿಧಿಸಲಾಗುತ್ತದೆ. ಅಂದರೆ ಆ 3 ವರ್ಷದ ಅವಧಿಯಲ್ಲಿ ಪತ್ನಿಗೆ ಮರುಮದುವೆಯಾಗುವ ಅವಕಾಶವಿದೆಯೇ? ಆಕೆಗೆ ಜೀವನಾಂಶವನ್ನಾದರೂ ನೀಡುವುದು ಹೇಗೆ? ಸರಕಾರಕ್ಕೆ ಮಹಿಳೆಯರ ಬಗ್ಗೆ ಅಷ್ಟೊಂದು ಕಾಳಜಿಯಿದ್ದರೆ, ಸರಕಾರವು ಇನ್ನೂ ಒಂದು ದಿನ ಅಧಿವೇಶನ ವಿಸ್ತರಿಸಿ, ಮಹಿಳಾ ಮೀಸಲಾತಿ ಮಸೂದೆ ಜಾರಿಗೆ ತರಲಿ. ಅದರಿಂದ 60 ಕೋಟಿ ಮಹಿಳೆಯರಿಗೆ ಅನುಕೂಲವಾಗುತ್ತದೆ.

ವಿಜಯ ಸಾಯಿ ರೆಡ್ಡಿ, ವೈಎಸ್ಸಾರ್‌ ಕಾಂಗ್ರೆಸ್‌
3 ವರ್ಷಗಳ ಕಾಲ ಪತಿಯನ್ನು ಜೈಲಿಗೆ ಅಟ್ಟುವುದೆಂದರೆ, ಅಲ್ಲಿಗೆ ಸಂಧಾನದ ಬಾಗಿಲು ಮುಚ್ಚಿದಂತೆ.
ಇದರಿಂದ ಆ ಮಹಿಳೆಗೆ ಆಗುವ ಅನುಕೂಲ ಯಾದರೂ ಏನು?

ಸಂಜಯ್‌ ರಾವತ್‌, ಶಿವಸೇನೆ
ಇದೊಂದು ಐತಿಹಾಸಿಕ ಮಸೂದೆ‌. ಇದು ಮುಸ್ಲಿಂ ಮಹಿಳೆಯರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ. ತ್ರಿವಳಿ ತಲಾಖ್‌ ಪದ್ಧತಿಯ ಬಳಿಕ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ಕಲ್ಪಿಸುವಂಥ ಸಂವಿಧಾನದ 370ನೇ ವಿಧಿಯೂ ರದ್ದಾಗುತ್ತದೆ, 35ಎ ವಿಧಿಯೂ ರದ್ದಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next