Advertisement

ಸರಳ ಬೋಧನೆಗೆ ಬಹುವಿಧ ಕಲಿಕೆ ಕಾರ್ಡ್‌

08:18 PM Aug 04, 2021 | Team Udayavani |

ಬೆಳ್ತಂಗಡಿ: ಕೋವಿಡ್‌ ಪ್ರಭಾವದಿಂದ ಪ್ರಾಥಮಿಕ ಶಾಲಾ ಮಕ್ಕಳ ಕಲಿಕೆಯ ಸಮಸ್ಯೆ ಒಂದು ತರವಾದರೆ, ತರಗತಿಗಳು ನಡೆಯದೆ ಪ್ರೌಢಶಾಲಾ ಹಂತದ (8, 9 ಮತ್ತು 10ನೇ ತರಗತಿ) ವಿದ್ಯಾರ್ಥಿಗಳಿಗೆ ಎದುರಾದ ಕಲಿಕೆ ಅಡ್ಡಿಗಳು ಇನ್ನೊಂದು ತರಹದ್ದು. ಆನ್‌ಲೈನ್‌ ತರಗತಿಗಳು ನಿರಂತರವಾಗಿ ನಡೆಯುತ್ತಿದ್ದರೂ ಬಹು ಸಂಖ್ಯಾಕ ವಿದ್ಯಾರ್ಥಿಗಳಿಗೆ ಇವೆಲ್ಲ ಪರಿಣಾಮಕಾರಿ ಮಾಧ್ಯ ಮವಾಗಿಲ್ಲ, ಹಲವರಿಗೆ ಇನ್ನೂ ಎಟಕದ ಮಾಧ್ಯಮವೂ ಆಗಿದೆ.

Advertisement

ಹೀಗಾಗಿ ವಿದ್ಯಾರ್ಥಿಗಳ ಕಲಿಕೆಯ ನಿರಂತರತೆಗೆ ಪ್ರೇರಣೆ ಮತ್ತು ಮಾರ್ಗದರ್ಶನ ಬೇಕಾಗುವ ಸಲುವಾಗಿ ಟಿ.ವಿ. ಆನ್‌ಲೈನ್‌, ವಾಟ್ಸ್‌ಆ್ಯಪ್‌ ಬಳಕೆಯೊಂದಿಗೆ ಅಥವಾ ಬಳಸದೆಯೂ ಕಲಿಕೆಯಲ್ಲಿ ನಿರಂತರತೆ ತರುವುದು ಹೇಗೆ ಎಂಬುದನ್ನು ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಕೃಷ್ಣ ಭಟ್‌ ಚೊಕ್ಕಾಡಿ ಅವರು ಕಲಿಕೆ ಕಾರ್ಡುಗಳ ಮೂಲಕ ಪರಿಚಯಿಸಿದ್ದಾರೆ.

ತಾನು ಬೋಧಿಸುವ ಸಮಾಜ ವಿಜ್ಞಾನ ವಿಷಯದ ಬೋಧನೆಗೆ ಅವರು ಕಂಡುಕೊಂಡ ಸರಳ, ನೇರ ಮಾರ್ಗವೇ ಈ ಕಲಿಕೆ ಕಾರ್ಡ್‌ಗಳಾಗಿದ್ದು, ಇದೊಂದು ಚಟುವಟಿಕೆ ಆಧಾರಿತ ಕಲಿಕೆ ವಿಧಾನವಾಗಿದೆ.

ಕಾರ್ಡ್‌ಗಳು ಎಂದರೆ…

ಈಗಾಗಲೇ ಪ್ರಶ್ನೋತ್ತರ ರೂಪದಲ್ಲಿ ಅನೇಕ ಕಾರ್ಡ್‌ಗಳು ಬಂದಿವೆ. ಆದರೆ ಇಲ್ಲಿ 8, 9 ಮತ್ತು 10ನೇ ತರಗತಿಯ ಸಮಾಜ ವಿಜ್ಞಾನದ ಪ್ರತೀ ಪಾಠಗಳ ಸಂಕ್ಷಿಪ್ತ ಮಾಹಿತಿ ಮತ್ತು ಅಭ್ಯಾಸದ ಪ್ರಶ್ನೆಗಳಿಗೆ ನೇರ ಉತ್ತರ ಸಿಕ್ಕುವ ಹಾಗೆ ವಿವರಣೆಗಳು ಈ ಕಾರ್ಡ್‌ನಲ್ಲಿವೆ. ಪಾಠಕ್ಕೆ ಸಂಬಂಧಿಸಿದಂತೆ ಪೂರಕ ಮತ್ತು ಹೆಚ್ಚುವರಿಯಾಗಿ ಆಯಾ ತರಗತಿಗಳ ಮಟ್ಟಕ್ಕೆ ಅನುಗುಣವಾಗಿ ವೈವಿಧ್ಯಮಯ ಚಟುವಟಿಕೆಗಳು ಮತ್ತು ಸೂಚನೆಗಳು ಇದರಲ್ಲಿದೆ.

Advertisement

ಚಟುವಟಿಕೆಗಳು :

ಬಲು ವಿಶಿಷ್ಟ ಚಟುವಟಿಕೆಗಳು ಈ ಕಾರ್ಡ್‌ಗಳಲ್ಲಿ ಜೋಡಿಸಲ್ಪಟ್ಟಿವೆ. ಬರೆಯುವ, ಓದುವ, ಗಮನಿಸುವ, ವೀಕ್ಷಿಸುವ, ಭೇಟಿಮಾಡಿ ವರದಿ ಬರೆಯುವ, ಇತರರನ್ನು ಮಾತನಾಡಿಸುವ-ಸಂದರ್ಶನಗಳು, ಪ್ರಶ್ನೆ ತಯಾರಿಸುವ, ಪದಬಂಧ ರಚಿಸುವ ಹೀಗೆ ಹತ್ತಾರು ಚಟುವಟಿಕೆಗಳಿವೆ. ಪರಿಣಾಮ ಯೋಚಿಸುವ, ತರ್ಕಿ ಸುವ, ಹೋಲಿಸಿ ವಿಶ್ಲೇಷಿಸುವುದಕ್ಕೆ ಪ್ರೇರಣೆ ನೀಡುತ್ತವೆ. ಹೆಚ್ಚುವರಿ ಮಾಹಿತಿ ತಿಳಿದುಕೊಳ್ಳಲು ಉನ್ನತ ಪ್ರಶ್ನೆಗಳು ಈ ಕಾರ್ಡ್‌ನಲ್ಲಿವೆ.

ಮಕ್ಕಳಿಗೆ ತಲುಪಿಸಲು ಕ್ರಮ:

ಉದಾಹರಣೆಗೆ 10ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕದ 39 ಪಾಠಗಳಿದ್ದರೆ, ಅದರ ಸಂಪೂರ್ಣ ಮಾಹಿತಿಗಳು ಮತ್ತು ಚಟುವಟಿಕೆಗಳು 20 ಕಾರ್ಡ್‌ ಗಳಲ್ಲಿ ಲಭ್ಯವಾಗುವಂತೆ ರೂಪುಗೊಳಿಸಲಾಗಿದೆ. ಇದನ್ನು ಜೆರಾಕ್ಸ್‌ ಪ್ರತಿ ಮಾಡಿ ತಲುಪಿಸಬಹುದು ಅಥವಾ ವಾಟ್ಸ್‌ ಆ್ಯಪ್‌ ಮೂಲಕವೂ ವೀಕ್ಷಿಸಬಹುದಾಗಿದೆ. ಚಟುವಟಿಕೆಗಳಲ್ಲಿ ಎಲ್ಲ ವಿದ್ಯಾರ್ಥಿಗಳು ತೊಡಗಿಕೊಳ್ಳಬಹುದಾಗಿದೆ.

ತರಗತಿಗಳು ಆರಂಭವಾಯಿತೆಂದರೆ ಈ ಕಾರ್ಡುಗಳೆಲ್ಲ ವ್ಯರ್ಥವಲ್ಲವೇ ಎಂಬ ಪ್ರಶ್ನೆ ಇಲ್ಲಿ ಬರುವುದಿಲ್ಲ. ಏಕೆಂದರೆ ಕಾರ್ಡು ತಯಾರಿಗೆ ಸಾಕಷ್ಟು ಅಧ್ಯಯನ ನಡೆಸಬೇಕಾಗುತ್ತದೆ. ಜತೆಗೆ ಇದೊಂದು ನೇರ ತರಗತಿ ಬೋಧನೆಗೆ ಸಂಬಂಧಿಸಿದ ಪಾಠ ಯೋಜನೆಯೂ ಆಗಿದೆ. ಹಾಗಾಗಿ ಕಾರ್ಡುಗಳು ಎಲ್ಲ ರೂಪದ ತರಗತಿಗಳಿಗೆ, ಎಲ್ಲ ಕಾಲಗಳಲ್ಲೂ ಬಳಸಿಕೊಳ್ಳುವಂತೆಯೂ ಇದೆ. ಪ್ರತೀ ತರಗತಿಗಳಿಗೆ ಅಳವಡಿಸಿಕೊಳ್ಳಬಹುದಾದಂತಹ ವಿವಿಧ ಬೋಧನೆ ಚಟುವಟಿಕೆಗಳ ಪ್ರತ್ಯೇಕ ಪಟ್ಟಿ ಎಲ್ಲ ಶಿಕ್ಷಕರಿಗೂ ಉಪಯೋಗಕಾರಿಯಾಗಿದೆ. -ರಾಮಕೃಷ್ಣ ಭಟ್‌ ಚೊಕ್ಕಾಡಿ, ಮುಖ್ಯ ಶಿಕ್ಷಕ, ಬೆಳಾಲು ಶ್ರೀ ಧ.ಮಂ.ಅ.ಪ್ರೌಢಶಾಲೆ

 

-ಚೈತ್ರೇಶ್‌ ಇಳಂತಿಲ

 

Advertisement

Udayavani is now on Telegram. Click here to join our channel and stay updated with the latest news.

Next