Advertisement

ಅನುಷ್ಠಾನಕ್ಕೆ ಬಾರದ ಬಹುಗ್ರಾಮ ನೀರಿನ ಯೋಜನೆ

11:58 PM Apr 25, 2019 | Team Udayavani |

ಪುತ್ತೂರು: ಕರಾವಳಿ ಭಾಗದಲ್ಲೂ ಬರದ ಸ್ಥಿತಿ ಕಾಣಿಸಿಕೊಳ್ಳುತ್ತಿದೆ. ನೀರಿನ ಮೂಲಗಳಿದ್ದರೂ, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣ ಸಮಸ್ಯೆಗಳು ಬಿಗಡಾಯಿಸುತ್ತಿವೆ. ಸರಕಾರದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಇನ್ನೂ ಅನುಷ್ಠಾನಕ್ಕೆ ಬರದಿರುವುದು ಇದಕ್ಕೊಂದು ಉದಾಹರಣೆ.

Advertisement

ದ.ಕ. ಜಿಲ್ಲೆಯಲ್ಲಿ 20 ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಸ್ತಾವನೆ ಕಳುಹಿಸಿದ್ದರೂ, ಶೇ. 75ರಷ್ಟು ಮಂಜೂರಾತಿಯನ್ನೇ ಪಡೆದಿಲ್ಲ. ತಾಲೂಕು ವ್ಯಾಪ್ತಿಯ ನೀರಿನ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಒಟ್ಟು 78.5 ಕೋಟಿ ರೂ.ಗಳ 4 ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸದ್ಯಕ್ಕೆ 1 ಪ್ರಸ್ತಾವನೆ ಮಾತ್ರ ಮಂಜೂರುಗೊಂಡರೂ, ಅದು ಕೂಡ ಕಾರ್ಯರೂಪಕ್ಕೆ ಬಂದಿಲ್ಲ.

ಪರಿಣಾಮಕಾರಿಯಾಗಿಲ್ಲ
ಪುತ್ತೂರು ಹಾಗೂ ಹಾಲಿ ಕಡಬ ತಾಲೂಕು ವ್ಯಾಪ್ತಿಯಲ್ಲಿ ಕುಮಾರಧಾರಾ ಮತ್ತು ನೇತ್ರಾವತಿ ನದಿಗಳು ಹರಿಯುತ್ತಿದ್ದರೂ, ಜನರ ಬೇಸಗೆಯ ನೀರಿನ ಸಮಸ್ಯೆಯನ್ನು ಬಗೆಹರಿಸಲು ಬಹುಗ್ರಾಮದಂತಹ ಯೋಜನೆಗಳನ್ನು ಪ್ರಯೋಜನಕಾರಿ ಯಾಗಿಸುವಲ್ಲಿ ಈವರೆಗೆ ವಿಫಲರಾಗಿದ್ದೇವೆ. ನೀರಿನ ಶಾಶ್ವತ ಯೋಜನೆಗಾಗಿ ಜನತೆ ಎದುರು ನೋಡುತ್ತಲೇ ಇದ್ದಾರೆ.

ಕಾರ್ಯರೂಪಕ್ಕೆ ಬಂದಿಲ್ಲ
ಅವಿಭಜಿತ ಪುತ್ತೂರು ತಾಲೂಕು ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಂಜೂರು ಮಾಡಲು ಎರಡು ಹಂತದಲ್ಲಿ ಅಧ್ಯಯನ ನಡೆಸಿ ಯೋಜನೆಯ ರೂಪುರೇಷೆ ತಯಾರಿಸಿ ಕಳುಹಿಸಿ ಕೊಡಲಾಗಿತ್ತು. ಸರಕಾರಕ್ಕೆ ಕಳುಹಿಸಲಾಗಿದ್ದ 4 ಪ್ರಸ್ತಾವನೆಗಳಲ್ಲಿ ಇದೀಗ ಒಂದು ಯೋಜನೆ ಮಂಜೂರಾಗಿದೆ ಎನ್ನಲಾಗುತ್ತಿದ್ದರೂ, ಇದು ಕಾರ್ಯರೂಪದಲ್ಲಿ ಕಾಣಿಸಿಕೊಂಡೇ ಇಲ್ಲ.

ನೀರೆತ್ತುವ ಯೋಜನೆ
ಕುಮಾರಧಾರಾ ಅಥವಾ ನೇತ್ರಾವತಿ ನದಿಯಲ್ಲಿ ಜಾಕ್‌ವೆಲ್‌ ನಿರ್ಮಿಸಿ ನದಿ ಪಕ್ಕದಲ್ಲಿ ಪಂಪ್‌ಹೌಸ್‌ ನಿರ್ಮಾಣ ಮಾಡಿ ಕಬ್ಬಿಣದ ಕೊಳವೆಯ ಮೂಲಕ ಬೃಹತ್‌ ಟ್ಯಾಂಕ್‌ಗೆ ನೀರು ಹಾಯಿಸಿ ಅದನ್ನು ಗ್ರಾಮಗಳಿಗೆ ಪೂರೈಸುವ ಯೋಜನೆ ಇದೆ.

Advertisement

78.5 ಕೋಟಿ ರೂ. ಯೋಜನೆ
ಹೊಸದಾಗಿ ರಚನೆಯಾದ ಕಡಬ ತಾಲೂಕು ಸೇರಿದಂತೆ ಅವಿಭಜಿತ ಪುತ್ತೂರು ತಾಲೂಕಿಗೆ ರೂಪಿಸಲಾಗಿರುವ ನಾಲ್ಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಒಟ್ಟು 78.5 ಕೋಟಿ ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಆಲಂಕಾರು ಮತ್ತು ಸುತ್ತಮುತ್ತಲಿನ 5 ಗ್ರಾಮಗಳ ಯೋಜನೆಗೆ 23 ಕೋಟಿ ರೂ., ಬೆಳಂದೂರು ಮತ್ತು 8 ಗ್ರಾಮಗಳ ಯೋಜನೆಗೆ 16.5 ಕೋಟಿ ರೂ., ಉಪ್ಪಿನಂಗಡಿ ಮತ್ತು 11 ಗ್ರಾಮಗಳ ಯೋಜನೆಗೆ 23 ಕೋಟಿ ರೂ., ಕಡಬ ಮತ್ತು 10 ಗ್ರಾಮಗಳ ಯೋಜನೆಗೆ 16 ಕೋಟಿ ರೂ. ಪಟ್ಟಿ ತಯಾರಿಸಲಾಗಿದೆ. ಇದರಲ್ಲಿ ಉಪ್ಪಿನಂಗಡಿ ಮತ್ತು 10 ಗ್ರಾಮಗಳ ಬಹುಗ್ರಾಮ ಯೋಜನೆಗೆ ಮಂಜೂರಾತಿ ದೊರೆತಿದೆ ಎಂದು ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಅಧಿಕಾರಿಗಳು ಒಂದು ವರ್ಷದ ಹಿಂದೆಯೇ ತಿಳಿಸಿದ್ದರೂ, ಟೆಂಡರ್‌ ಪ್ರಕ್ರಿಯೆಯ ಕುರಿತು ಅವರಿಗೆ ಮಾಹಿತಿ ಇಲ್ಲ. ಪ್ರಸ್ತಾವಿತ ಯೋಜನೆಗಳ ಕಾಮಗಾರಿ ಆರಂಭಗೊಂಡರೂ ಲೋಕಾರ್ಪಣೆಯಾಗಲು ಒಂದರಿಂದ ಎರಡು ವರ್ಷಗಳ ಸಮಯ ಬೇಕಾಗುತ್ತದೆ.

ಪ್ರಸ್ತಾವನೆ ಸಲ್ಲಿಸಿದ್ದೇವೆ
ನಾಲ್ಕು ಯೋಜನೆಗಳು ಜಾರಿಯಾದರೆ ಉಭಯ ತಾಲೂಕಿನ ಅರ್ಧ ಭಾಗದ ಜನರಿಗೆ ಬಹಳಷ್ಟು ಪ್ರಯೋಜನವಾಗಲಿದೆ. ಕೆಲವು ವರ್ಷಗಳ ಹಿಂದೆ ಪ್ರಸ್ತಾವನೆ ಸಲ್ಲಿಸಿದ್ದರೂ, ಮಂಜೂರಾತಿ ಸಿಕ್ಕಿಲ್ಲ.
– ಸತ್ಯೇಂದ್ರ ಸಾಲಿಯಾನ್‌ , ಎಇಇ, ಪಂಚಾಯತ್‌ ಎಂಜಿನಿಯರಿಂಗ್‌ ವಿಭಾಗ

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next