ಬೆಂಗಳೂರು: ನೈಋತ್ಯ ರೈಲ್ವೆ ಬೆಂಗಳೂರು ವಿಭಾಗ ಯಲಹಂಕ- ದೇವನಹಳ್ಳಿ ಹಾಗೂ ದೇವನಹಳ್ಳಿ- ಬಂಗಾರಪೇಟೆ- ಕೋಲಾರ ಮಾರ್ಗದ ರೈಲ್ವೆ ಟ್ರ್ಯಾಕ್‌ನ್ನು “ಮಲ್ಟಿ ಮಾಡಲ್’ ಪ್ಲಾನ್ ಮೂಲಕ ಅಭಿವೃದ್ಧಿ ಪಡಿಸಿ, ರೈಲು ಸಂಚಾರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮುಂದಾಗಿದೆ.
ನೈರುತ್ಯ ರೈಲ್ವೆ ಬೆಂಗಳೂರು ವಿಭಾಗದ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯಲಹಂಕ -ದೇವನಹಳ್ಳಿ ಮಾರ್ಗ ಹಾಗೂ ದೇವ ನಹಳ್ಳಿ-ಬಂಗಾರಪೇಟೆ- ಕೋಲಾರ ಮಾರ್ಗದ ರೈಲ್ವೆ ಸಿಂಗಲ್ ಟ್ರ್ಯಾಕ್‌ಗಳನ್ನು ಡಬಲಿಂಗ್ ಮಾಡಲು ಯೋಜನೆ ಹಾಕಿಕೊಂಡಿದ್ದು, ಮೊದಲ ಹಂತದಲ್ಲಿ ಎರಡು ಮಾರ್ಗದಲ್ಲಿ ಟ್ರ್ಯಾಕ್ ನಿರ್ಮಾ ಣದ ಕಾರ್ಯ ಸಾಧ್ಯತೆಗಳ ಕುರಿತು ಸಮೀಕ್ಷೆ ನಡೆಸಿ ವರದಿ ತಯಾರಿಸುವ ಸಿದ್ಧತೆ ನಡೆಯುತ್ತಿದೆ.
10.5 ಕೋಟಿ ಮಂಜೂರು: ಮೊದಲ ಹಂತದಲ್ಲಿ ಯಲಹಂಕ-ದೇವನಹಳ್ಳಿ ಮಾರ್ಗದ ಸುಮಾರು 23ಕಿ.ಮೀ. ಟ್ರ್ಯಾಕ್ ಡಬಲಿಂಗ್ ವರದಿ ಸಲ್ಲಿಕೆಗೆ 8 ಕೋಟಿ ಹಾಗೂ ದೇವನಹಳ್ಳಿ- ಬಂಗಾರಪೇಟೆ -ಕೋಲಾರ ಮಾರ್ಗದ ಸುಮಾರು 125 ಕಿ.ಮೀ. ಡಬಲಿಂಗ್ ಹಾಗೂ ಆಟೋಮ್ಯಾಟಿಕ್ ಸಿಗ್ನಲ್ ಆಳವಡಿಕೆ ಕುರಿತು ಅಧ್ಯಯನ ನಡೆಸಿ ಅಗತ್ಯವಿರುವ ಸ್ಥಳಾವಕಾಶ, ಕಾರ್ಯ ಸಾಧ್ಯತೆ ಹಾಗೂ ಅಸಾಧ್ಯತೆಗಳ ಕುರಿತು ಸಮಗ್ರ ಅಧ್ಯಯನ ನಡೆಸಿ ಸರ್ವೇ ನಡೆಸಲು 2.5ಕೋಟಿ ಮಂಜೂರಾಗಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಒಂದು ಜೋಡಿ ಟ್ರೈನ್!: ಪ್ರಸ್ತುತ ಬೆಂಗಳೂರು- ಕೋಲಾರ ಮಾರ್ಗದಲ್ಲಿ ಬೆಳಗ್ಗೆ ಹಾಗೂ ಸಂಜೆ ಯೊಂದು ರೈಲು ಸಂಚರಿಸುತ್ತಿದೆ. ಈ ಮಾರ್ಗವಾಗಿ ಐಟಿ ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಾರೆ. ಆದರೆ, ರೈಲುಗಳ ಓಡಾಟ ಕಡಿಮೆ ಇರುವುದರಿಂದ ಅನೇಕರು ಬಸ್ ಹಾಗೂ ಖಾಸಗಿ ವಾಹನಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಇನ್ನೂ ಕೈಗಾರಿಕಗಳ ಸರಕು ಹಾಗೂ ರೈತರ ಬೆಳೆಗಳನ್ನು ವಾಹನಗಳ ಮೂಲಕ ಕೋಲಾರ-ಬೆಂಗಳೂರು ಮಾರ್ಗವಾಗಿ ಸಾಗಟ ಮಾಡಲಾಗುತ್ತಿದೆ.
ಮಲ್ಟಿ ಮಾಡಲ್ ಸ್ಕೀಂ!: ನೈರುತ್ಯ ರೈಲ್ವೆ ಬೆಂಗಳೂರು ವಿಭಾಗ ಮಲ್ಟಿ ಮಾಡಲ್ ಪ್ಲಾನ್ ಗಮನದಲ್ಲಿ ಇಟ್ಟುಕೊಂಡು ರೈಲ್ವೆ ಟ್ರ್ಯಾಕ್ ಡಬಲಿಂಗ್ ಮಾಡಲಿದೆ. ಪ್ರಸ್ತುತ ಸಿಂಗಲ್ ಟ್ರ್ಯಾಕ್‌ನ್ನು ಮೇಲ್ದಜೇìಗೆರಿಸಿ ಡಬಲ್ ಮಾಡುತ್ತಿದೆ. ಇದರಿಂದ ಎರಡು ಮಾರ್ಗವಾಗಿ ಎಲೆಕ್ಟ್ರಿಕ್ ಮೆಮು ರೈಲುಗಳ ಸಂಖ್ಯೆ ಏರಿಕೆಯಾಗಲಿದೆ. ಇದರಿಂದ ನಿತ್ಯ ಸಂಚರಿಸುವ ಐಟಿ ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ, ವ್ಯಾಪಾರಸ್ಥರಿಗೆ ಸಾಕಷ್ಟು ಅನುಕೂಲವಾಗಲಿದೆ. ಇನ್ನೂ ರೈಲ್ವೆ ಲಾಜಿಸ್ಟಿಕ್ ಗಮನದಲ್ಲಿ ಇಟ್ಟುಕೊಂಡು ಗೂಡ್ಸ್ ರೈಲುಗಳ ಓಡಾಟವೂ ಹೆಚ್ಚಾಗುವುದರಿಂದ ಕೈಗಾರಿಕಾ ಘಟಕಗಳ ಸರಕು ಹಾಗೂ ರೈತರ ಬೆಳೆಗಳನ್ನು ಗೂಡ್ಸ್ ರೈಲುಗಳ ಮೂಲಕ ಸಾಗಾಟ ಮಾಡಲು ಅನುಕೂಲವಾಗಲಿದೆ. ಇದರಿಂದ ರೈಲ್ವೆ ಇಲಾಖೆಯ ಲಾಜಿಸ್ಟಿಕ್ ವ್ಯವಸ್ಥೆ ಇನ್ನಷ್ಟು ವಿಸ್ತಾರವಾಗಲಿದೆ. ಇನ್ನೂ ಯಲಂಹಕ-ದೇವನಹಳ್ಳಿ ಮಾರ್ಗವಾಗಿ ಟ್ರ್ಯಾಕ್ ಡಬಲಿಂಗ್‌ನಿಂದ ಮೆಮು ರೈಲು ಸಂಚಾರ ಹೆಚ್ಚಾಗಲಿದ್ದು, ಇದರಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸುವವರಿಗೆ ಅನುಕೂಲವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.
ನೈಋತ್ಯ ರೈಲ್ವೆ ಬೆಂಗಳೂರು ವಿಭಾಗದ ಯಲಹಂಕ-ದೇವನಹಳ್ಳಿ ಹಾಗೂ ದೇವನಹಳ್ಳಿ- ಕೋಲಾರ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಡಬಲಿಂಗ್‌ಗೆ ಕುರಿತು ಸರ್ವೇ ಕಾರ್ಯಕ್ಕೆ ಅನುದಾನ ಮಂಜೂರಾಗಿದೆ. ಟ್ರ್ಯಾಕ್ ಡಬಲಿಂಗ್‌ನಿಂದಾಗಿ 2 ಮಾರ್ಗದ ರೈಲುಗಳ ಸಂಚಾರ ಹೆಚ್ಚಿಸಬಹುದಾಗಿದೆ. ಇನ್ನೂ ಕೋಲಾರದ ರೈತರಿಗೆ ತಮ್ಮ ಬೆಳೆಯನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಲು ಅನುಕೂಲವಾಗಲಿದೆ.
● ಕುಸುಮಾ ಹರಿಪ್ರಸಾದ್, ನೈಋತ್ಯ ರೈಲ್ವೆ ಹೆಚ್ಚುವರಿ ವ್ಯವಸ್ಥಾಪಕಿ
-ತೃಪ್ತಿ ಕುಮ್ರಗೋಡು