Advertisement
ಯೋಜನೆಗಾಗಿ ಹೊಂಡ ತೆಗೆದು ಪ್ರಾರಂಭಿಕ ಸಿದ್ಧತೆಯಲ್ಲಿ ಬಾಕಿ ಆಗಿರುವ ನಗರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಕ್ಷಿಪ್ರಗತಿಯಲ್ಲಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಇದೀಗ ಸ್ಮಾರ್ಟ್‌ಸಿಟಿ ಮುಂದಡಿ ಇಟ್ಟಿದ್ದು, ಟೆಂಡರ್ ವಹಿಸಿಕೊಂಡ ಸಂಸ್ಥೆಯವರ ಜತೆಗೆ ಮಹತ್ವದ ಮಾತು ಕತೆಯನ್ನು ನಡೆಸುತ್ತಿದ್ದಾರೆ. ಕೆಲವೊಂದು ಸಮಸ್ಯೆಗಳಿಂದ ಕಾಮಗಾರಿ ನಡೆಸಲು ಅಸಾಧ್ಯವಾಗಿದ್ದ ಗುತ್ತಿಗೆದಾರ ಸಂಸ್ಥೆಯೂ ಇದೀಗ ಕಾಮಗಾರಿಯನ್ನು ಮತ್ತಷ್ಟು ವೇಗದಿಂದ ಮುಂದುವರಿಸುವ ನಿಟ್ಟಿನಲ್ಲಿ ವಿಶೇಷ ಆಸ್ಥೆ ವಹಿಸಿದೆ. ಕೆಲವೇ ದಿನದಲ್ಲಿ ಈ ಕುರಿತಾದ ಅಂತಿಮ ಚಿತ್ರಣ ಹೊರಬೀಳುವ ನಿರೀಕ್ಷೆಯಿದೆ.
ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಪ್ರಮುಖರಾದ ಅನುರಾಧಾ ಪ್ರಭು ಅವರು ‘ಉದಯವಾಣಿ-ಸುದಿನ’ಕ್ಕೆ ಪ್ರತಿಕ್ರಿಯಿಸಿ ‘ನಮ್ಮ ಸಂಸ್ಥೆಯು ಮಂಗಳೂರು ಸಹಿತ ಹಲವು ಕಡೆಗಳಲ್ಲಿ ವಿವಿಧ ಯೋಜನೆಗಳನ್ನು ಈಗಾಗಲೇ ಯಶಸ್ವಿಯಾಗಿ ನಡೆಸಿದೆ. ಹಂಪನಕಟ್ಟೆ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗಿತ್ತು. ಈಗಾಗಲೇ ಕೋಟ್ಯಂತರ ರೂ.ಗಳನ್ನು ವೆಚ್ಚ ಮಾಡಿ ಪ್ರಾರಂಭಿಕ ಕೆಲಸ ನಡೆಸಲಾಗಿದೆ. ಕೆಲವು ಕಾರಣದಿಂದ ತಾತ್ಕಾಲಿಕವಾಗಿ ಕಾಮಗಾರಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಮತ್ತೆ ಕಾಮಗಾರಿ ಆರಂಭಿಸಲು ನಾವು ಮುಂದಾಗಿದ್ದೇವೆ. ಈ ಬಗ್ಗೆ ಸ್ಮಾರ್ಟ್ ಸಿಟಿ ಹಾಗೂ ಇಲಾಖೆಯ ಗಮನಕ್ಕೂ ತರಲಾಗಿದೆ’ ಎನ್ನುತ್ತಾರೆ.
Related Articles
Advertisement
ಏನಿದು ‘ಬಿಓಟಿ’ ಸ್ವರೂಪ?ಬಿಲ್ಡ್, ಆಪರೇಟ್, ಟ್ರಾನ್ಸ್‌ಫರ್ (ಬಿಓಟಿ -ನಿರ್ಮಾಣ, ನಿರ್ವಹಣೆ, ಹಸ್ತಾಂತರ) ಸ್ವರೂಪದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಂದರೆ ಗುತ್ತಿಗೆದಾರನೇ ಸ್ವಂತ ಮೂಲದಿಂದ ಹಣ ವಿನಿಯೋಗಿಸಿ ಕಾಮಗಾರಿಯನ್ನು ಮಾಡಿ, ಕಟ್ಟಡ ಆದ ಬಳಿಕ ಅದರ ನಿರ್ವಹಣೆ/ಬಾಡಿಗೆ ಹಣವನ್ನು ಗ್ರಾಹಕ ರಿಂದ ಪಡೆದುಕೊಂಡು ನಿಭಾಯಿಸಬೇಕು. ಇದರಲ್ಲಿಯೇ ಸ್ಥಳೀಯಾಡಳಿತಕ್ಕೆ ವಾರ್ಷಿಕವಾಗಿ ನಿಗದಿತ ಮೊತ್ತವನ್ನು ಗುತ್ತಿಗೆದಾರ ಪಾವತಿಸಬೇಕು. 30 ವರ್ಷಗಳ ಬಳಿಕ ಸ್ಥಳೀಯಾಡಳಿತಕ್ಕೆ ಈ ಕಟ್ಟಡವನ್ನು ಬಿಟ್ಟು ಕೊಡುವುದು ಬಿಓಟಿ ನಿಯಮ. ಕ್ಷಿಪ್ರವಾಗಿ ನಡೆಯಲಿ ಕಾಮಗಾರಿ; ಆಶಯ
ಹಲವು ಕಾಲದಿಂದ ಬಾಕಿಯಾಗಿರುವ ಮಲ್ಟಿ ಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಯನ್ನು ಜನಸ್ನೇಹಿ ನೆಲೆಗಟ್ಟಿನಲ್ಲಿ ಮುಂದುವರಿಸುವುದು ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ಕರ್ತವ್ಯ. ಸ್ಥಳೀಯರಿಗೆ ಸಮಸ್ಯೆ ಆಗದಂತೆ ಹಾಗೂ ಭವಿಷ್ಯತ್ತಿಗೆ ಅನುಕೂಲವಾಗುವ ಯೋಜನೆಯನ್ನು ನಿಯಮಬದ್ಧ ವಾಗಿ ಹಾಗೂ ಸಮಯಕ್ಕೆ ಸರಿಯಾಗಿ ನಡೆಸುವ ದೊಡ್ಡ ಜವಾಬ್ದಾರಿ ಇದೆ. ನಗರದ ಹೃದಯ ಭಾಗದಲ್ಲಿ ನಡೆಯುವ ಯೋಜನೆ ಮುಂದೆ ವಿಳಂಬವಾಗದೆ ಕ್ಷಿಪ್ರಗತಿಯಲ್ಲಿ ನಡೆಸುವುದು ಸರಕಾರಿ ವ್ಯವಸ್ಥೆಯ ಮೇಲಿರುವ ಗುರುತರ ಜವಾಬ್ದಾರಿ ಎಂಬುದು ಸ್ಥಳೀಯರ ಆಶಯ.