Advertisement

ಬಹು ಆಯಾಮ ಆರೋಗ್ಯ ಸೂತ್ರ

08:25 AM Aug 24, 2017 | Team Udayavani |

ಪರಿಸರ ಗಣಪ ಭಾಗ 5ಗಣಪತಿಗೆ 21 ಪತ್ರಗಳಿಂದ, 21 ನಾಮಗಳಿಂದ, 21 ಪುಷ್ಪಗಳಿಂದ ಅರ್ಚನೆ ಮಾಡುವ ಕ್ರಮವಿದೆ. ಮಳೆಗಾಲದಲ್ಲಿ ಗಣೇಶ ಚತುರ್ಥಿ ಬರುತ್ತಿದೆ. ಮಳೆಗಾಲದಲ್ಲಿಯೇ ಶೀತಜ್ವರಾದಿಗಳು ಹೆಚ್ಚಾಗಿ ಕಂಡುಬರುತ್ತವೆ. ವಿಗ್ರಹವನ್ನು ಶುದ್ಧ ಮಣ್ಣಿನಿಂದ ತಯಾರಿಸಿ ಅದಕ್ಕೆ ಅರಶಿನ, ಕುಂಕುಮ, ಶ್ರೀಗಂಧಗಳಿಂದ ಮತ್ತು ವಿವಿಧ ಪತ್ರಗಳು, ಪುಷ್ಪಗಳಿಂದ ಅರ್ಚಿಸಿ ಗಣಪತಿ ವಿಗ್ರಹವನ್ನು ವಿಸರ್ಜಿಸುವುದು ಕ್ರಮ. ಇವೆಲ್ಲ ಸೇರಿದರೆ ನೀರು ಮಾಲಿನ್ಯಗೊಳ್ಳುವುದಿಲ್ಲ, ಇದ್ದ ಮಾಲಿನ್ಯ ತೊಲಗಬೇಕಷ್ಟೆ. ಪ್ರಕೃತಿಯಿಂದ ಬಂದ ಮಣ್ಣೂ ಸೇರಿದಂತೆ ಎಲ್ಲವನ್ನೂ ಪ್ರಕೃತಿಗೇ ಸಮರ್ಪಿಸುವ “ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ದಾಸರ ಹಾಡಿನ ಬದುಕನ್ನು ಪ್ರಾಚೀನರು ಕಟ್ಟಿಕೊಟ್ಟಿದ್ದಾರೆ. ಆದರೆ ನಾವು ಮಾಡುತ್ತಿರುವ ಅಧ್ವಾನದಿಂದ ಸರಕಾರ ಪರಿಸರ ಇಲಾಖೆ ಮೂಲಕ ಪತ್ರಿಕಾ ಪ್ರಕಟನೆ ಕೊಡುವ ಸ್ಥಿತಿಗೆ ತಲುಪಿದೆ. 

Advertisement

ಗಣೇಶನ ಹಬ್ಬದಲ್ಲಿ ತಯಾರಿಸುವ ಹಬೆ ಆಧಾರಿತ ಅಡುಗೆಯೂ ಆರೋಗ್ಯದಾಯಿ. “ಹಬೆಯಲ್ಲಿ ಬೇಯಿಸುವುದರಿಂದಲೇ ಇಡ್ಲಿ ಆರೋಗ್ಯಕ್ಕೆ ಉತ್ತಮ’ ಎನ್ನುವುದನ್ನು ಹೆಸರಾಂತ ವೈದ್ಯ ಡಾ|ಬಿ.ಎಂ.ಹೆಗ್ಡೆ ಭಾಷಣಗಳಲ್ಲಿ ಹೇಳುವುದಿದೆ. ಗಣೇಶನ ಹಬ್ಬದಲ್ಲಿ ಮಾಡುವ ಕಡುಬು, ಕಾಯಿಕಡುಬು ಇತ್ಯಾದಿ ಅನೇಕ ಖಾದ್ಯಗಳು ಹಬೆಯಲ್ಲಿಯೇ ಬೆಂದಿರುವುದು.

ಪಂಚಗಜ್ಜಾಯ ಇರಬಹುದು, ಮೋದಕ ಇರಬಹುದು ಇವೆಲ್ಲವನ್ನೂ ಬೆಲ್ಲದಲ್ಲಿ ಮಾಡುವ ಕ್ರಮವಿದೆ. ನಮಗೆ ಸಕ್ಕರೆ ರುಚಿಯನ್ನು ತೋರಿಸಿ ಬೆಲ್ಲವನ್ನು ಮರೆಯುವಂತೆ ಮಾಡಿದ ಕಾಣದ ಶಕ್ತಿ ಈಗ ಅಕಾಲದಲ್ಲಿ ಮಧುಮೇಹ ಬಂದಿರುವುದು ಕಂಡು ಸಕ್ಕರೆ ತಿನ್ನಬೇಡಿ ಎನ್ನುತ್ತಿವೆ. ಬೆಲ್ಲ ತಿನ್ನಿ, ಸಕ್ಕರೆ ಬಿಡಿ ಎನ್ನುವವರು ಸಿಗುವುದೇ ದುರ್ಲಭ. ಸಿಕ್ಕಿದರೂ ಇವರ ಮಾತನ್ನು ಕೇಳದಿರುವಷ್ಟು ಕ್ಷೀಣವಾಗಿದೆ. 

ಚೌತಿಯಲ್ಲಿ ಕಡುಬೇ ಪ್ರಸಿದ್ಧ. ಕಡುಬನ್ನು ಹಲಸಿನ ಎಲೆಯಲ್ಲಿ ತಯಾರಿಸುತ್ತಾರೆ. ಹಲಸಿನ ಎಲೆಗೂ ಉತ್ತಮ ಔಷಧೀಯ ಗುಣವಿದೆ. ಹಳ್ಳಿಗಳಲ್ಲಿ ಹಲಸಿನ ಎಲೆಯ ಚಿಗುರಿನಿಂದಲೂ ಅಡುಗೆ ತಯಾರಿಸುವ ಕ್ರಮವಿದೆ. ಹಲಸಿನ ಎಲೆಯನ್ನು ನಿತ್ಯವೂ ಅನ್ನ/ ಸಾಂಬಾರುಗಳನ್ನು ಬೇಯಿಸುವಾಗ ಹಾಕಿ ಅದರ ಸಾರವನ್ನು ಸ್ವೀಕರಿಸಿದರೆ ಮಧುಮೇಹ ನಿಯಂತ್ರಣಕ್ಕೆ ಉತ್ತಮ ಎನ್ನುವುದು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತದೆ. ಹಲಸು ಎಂದಲ್ಲ. ಇಂತಹ ನೂರಾರು ಮರಗಳ ಪ್ರಯೋಜನಕ್ಕೆ ನಾವು ಬೆಲೆ ಕಟ್ಟಲೇ ಇಲ್ಲ. ಬೆಲೆ ಯಾವುದಕ್ಕೆ ಕಟ್ಟುತ್ತಿದ್ದೇವೆಂದರೆ “ಹಣದ ಬಲದಲ್ಲಿ ಪ್ರಚಾರ ಕೊಟ್ಟ ವಸ್ತುಗಳಿಗೆ’. ಇಂತಹ ಅಡುಗೆಗಳು ಉತ್ತಮವಾದರೂ ನಮ್ಮ ಅಜ್ಞಾನದ ಕಾರಣದಿಂದ ಈ ಅಡುಗೆಯನ್ನು ರೋಗ ತರಿಸಲು ಕಾರಣವಾಗುತ್ತಿರುವ ಪಾತ್ರೆಗಳಲ್ಲಿ ತಯಾರಿಸುತ್ತಿದ್ದೇವೆ. ಹಿಂದಿನವರು ಸಂಗ್ರಹಿಸಿಟ್ಟ ಉತ್ತಮ ಗುಣಮಟ್ಟದ ಪಾತ್ರೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಿ, ಆರೋಗ್ಯಕ್ಕೆ ಹಾನಿಯಾದ ದುಬಾರಿ ಪಾತ್ರೆಗಳನ್ನು ತಂದು ರೋಗಿಗಳಾಗುತ್ತಿದ್ದೇವೆ. ಇದರಿಂದಾಗಿ ತಿನ್ನುವ ಹಣಕಾಸು ಶಕ್ತಿ ಮತ್ತು ತಿನ್ನದಂತಹ ಆರೋಗ್ಯ ಶಕ್ತಿಯನ್ನು ಏಕಕಾಲದಲ್ಲಿ ಸಂಪಾದಿಸಿದ್ದೇವೆ. 

21 ಪತ್ರ, ಪುಷ್ಪಗಳಲ್ಲಿ ಕೆಲವು ಯಾವುದೆಂದೇ ಗೊತ್ತಿಲ್ಲ. ಕೇವಲ ಹೆಸರಿ ನಲ್ಲಿಯೇ ಪೂಜೆ ಸಲ್ಲುತ್ತಿದೆ. ಇವೆಲ್ಲದರ ಬದಲು ದೂರ್ವೆ (ಗರಿಕೆ ಹುಲ್ಲು) ಸಾಕೆಂದು ಶಾಸ್ತ್ರಗಳು ಸಾರುತ್ತಿವೆ. ಇದರಲ್ಲಿ ಅನೇಕ ಔಷಧೀಯ ಗುಣಗಳಿವೆ. ಇಂತಹ ಅನೇಕ ಔಷಧೀಯ ಸಸ್ಯಗಳ ಸಾರವನ್ನು ಆಹಾರದ ಜತೆ ಸೇರಿಸಿ ಸ್ವೀಕರಿಸಿದರೆ ಆರೋಗ್ಯಕ್ಕೆ ಹೇಗೆ ಅನುಕೂಲವಾಗಬಹುದು ಎಂಬ ಕುರಿತು ಸಂಶೋಧನೆಗಳು ನಡೆದರೆ ಆರೋಗ್ಯ ವಿಜ್ಞಾನ ಜನಸಾಮಾನ್ಯರಿಗೆ ಕೈಗೆಟುಕುತ್ತದೆ.

Advertisement

ದೂರ್ವೆಗೆ (ಗರಿಕೆ ಹುಲ್ಲು) ತುಳಸಿ ಅನಂತರದ ಸ್ಥಾನವಿದೆ. ಇವೆರಡೂ ಕ್ರಿಮಿನಾಶಕ ಗುಣಗಳನ್ನು ಹೊಂದಿವೆ. ಜ್ವರ, ಗಂಟುನೋವು, ಸೋಂಕು ರೋಗ, ಕೆಮ್ಮು, ಮಹಿಳೆಯರ ಋತುಸ್ರಾವದ ಸಂದರ್ಭ ಉಂಟಾಗುವ 
ಅತಿ ರಕ್ತ ಸ್ರಾವ, ಜೀರ್ಣ, ಮೂತ್ರದ ಸಮಸ್ಯೆಗಳಿಗೆ ದೂರ್ವೆಯನ್ನು ಇತರ ಔಷಧೀಯ ಸಸ್ಯ ಉತ್ಪನ್ನಗಳ ಜತೆ ಬಳಸಲಾಗುವುದು. 
– ಡಾ| ಮಹಮ್ಮದ್‌ ಫೈಸಲ್‌, ಸಹಾಯಕ ಪ್ರಾಧ್ಯಾಪಕರು, ದ್ರವ್ಯಗುಣ ವಿಭಾಗ, ಎಸ್‌ಡಿಎಂ ಆಯುರ್ವೇದ ಕಾಲೇಜು-ಆಸ್ಪತ್ರೆ, ಕುತ್ಪಾಡಿ, ಉದ್ಯಾವರ

-  ಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next