Advertisement

ಶ್ರೀಮಂತಿಕೆ ಮೆರೆದ ಮುಲ್ತಾನಿ, ಝಿಂಝೋಟಿ

10:14 AM Oct 24, 2019 | mahesh |

ರಂಜನಿ ಮೆಮೊರಿಯಲ್‌ ಟ್ರಸ್ಟ್‌ ವತಿಯಿಂದ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ನಡೆದ ಆರನೆಯ ರಂಜನಿ ಸಂಸ್ಮರಣ ವರ್ಷಾಚರಣೆಯ ನಾಲ್ಕನೇ ದಿನದ ಕಛೇರಿಯನ್ನು ಮೈಸೂರಿನ ಶ್ರೀಮತಿದೇವಿ ನಡೆಸಿಕೊಟ್ಟರು. ಅವರಿಗೆ ಹಾರ್ಮೋನಿಯಂನಲ್ಲಿ ಸತೀಶ್‌ ಭಟ್‌ ಹೆಗ್ಗಾರ್‌ ಮತ್ತು ತಬಲಾದಲ್ಲಿ ಭೀಮಾ ಶಂಕರ್‌ ಸಹಕರಿಸಿದ್ದರು.

Advertisement

ಶ್ರೀಮತಿ ದೇವಿಯವರ ಕಛೇರಿಯಲ್ಲಿ ಎದ್ದು ಕಾಣುವ ಅಂಶವೆಂದರೆ ಶ್ರುತಿ ಶುದ್ಧತೆಯಿಂದೊಡಗೂಡಿದ ತ್ರಿಸ್ಥಾಯಿಯಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲ ಉತ್ಕೃಷ್ಟ ಮಟ್ಟದ ನಾಜೂಕಾಗಿ ಪಳಗಿಸಿದ ಧ್ವನಿ ಸೌಕರ್ಯ. ಮುಲ್ತಾನಿಯ ಆವರೋಹದ ಗರಿಸಾದಲ್ಲಿ ಅವರು ವಹಿಸುವ ಎಚ್ಚರ ಶ್ಲಾಘನೀಯ. ಇದರ ರಿಷಭಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ತೋಡಿಯ ಛಾಯೆ ಬಾರದಂತೆ ವಹಿಸಿದ ಎಚ್ಚರ ಗಮನಾರ್ಹ. ಹಾಗಾದಾಗಲೇ, ತೀವ್ರ ಮ ಮತ್ತು ನಿಗಳ ಜಾತಿಗೆ ಸೇರಿದ ಮುಲ್ತಾನಿಗೆ ಸ್ವಂತಿಕೆ ಬರುವುದು. ಈ ರಾಗದಲ್ಲಿ ಹೆಣೆದ ವಿವಿಧ ಗತಿಯ ಸುಂದರ ತಾನ್‌ಗಳು ಮತ್ತು ವರಸೆಗಳು ಮುಲ್ತಾನಿಯ ಗಾಂಭೀರ್ಯವನ್ನು ಎತ್ತಿಡಿದಿವೆ. ಝಿಂಝೊàಟಿಯ ಬಂದಿಶ್‌ ನಲ್ಲಂತೂ ಅವರು ನೇಯ್ದ ರಕ್ತಿಭಾವ ಮನನೀಯ. ಮಧ್ಯ ಲಯದ ಬಂದಿಶ್‌ ಮತ್ತು ತರಾನಾವು ಒಂದಕ್ಕೊಂದು ಹೊಂದಿಕೆಯಾಗುವ ಮುಂದುವರಿಕೆಯ ಭಾಗವೋ ಎನ್ನುವಂತಿದ್ದವು. ಸತೀಶ್‌ ಅವರು ಶ್ರೀಮತಿಯ ಗಾಯನದ ಎಡೆ ಎಡೆಗಳಲ್ಲಿ ಎಚ್ಚರದಿಂದ ಪೂರಕವಾದ ಹಿತವಾದ ಸಾಥಿಯನ್ನು ಹಾರ್ಮೋನಿಯಂನಲ್ಲಿ ನೀಡಿದ್ದಾರೆ. ಗಾಯನದ ಪ್ರತಿ ಅಂಶವನ್ನು ಮೆಲ್ಲುತ್ತಾ ಮುಗುಳುನಗೆಯೊಂದಿಗೆ ಜಾಣ್ಮೆಯ ಉಠಾವ್‌ ಕೊಡುವ ತಬಲಾಜೀ ಭೀಮಾ ಶಂಕರ್‌ ಅವರು ನಿಜಕ್ಕೂ ಅಭಿನಂದನೀಯರು. “ಅವ ಧೂತಾ’ ನಿರ್ಗುಣಿ ಭಜನ್‌ ಅಂತೂ ಗುನುಗುನಿಸುವ ಧ್ವನಿಯಾಗಿ ಹೊರ ಹೊಮ್ಮಿತು. ಪ್ರಬುದ್ಧ ಕಲಾವಿದೆಯಾಗುತ್ತಿರುವ ಶ್ರೀಮತಿದೇವಿ ಬಹಳ ಎತ್ತರಕ್ಕೆ ಏರುತ್ತಿರುವ ಸೂಚನೆಯಿತ್ತಿದ್ದಾರೆ.

– ಕೇದಾರನಾಥ

Advertisement

Udayavani is now on Telegram. Click here to join our channel and stay updated with the latest news.

Next