ಲಾಹೋರ್: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಫ್ರಾಂಚೈಸಿ ಮುಲ್ತಾನ್ ಸುಲ್ತಾನ್ಸ್ ನ ಮಾಲೀಕ ಅಲಂಗೀರ್ ತರೀನ್ ಅವರು ಲಾಹೋರ್ ನ ಗುಲ್ಬರ್ಗ್ ಪ್ರದೇಶದಲ್ಲಿನ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾಗಿರುವ 63 ವರ್ಷ ವಯಸ್ಸಿನ ಅಲಂಗೀರ್ ಅವರು ದಕ್ಷಿಣ ಪಂಜಾಬ್ (ಪಾಕಿಸ್ತಾನ) ನಲ್ಲಿ ಪ್ರಮುಖ ಉದ್ಯಮಿಯಾಗಿ ತಮ್ಮ ಹೆಸರನ್ನು ಮಾಡಿದವರು. ಪಾಕಿಸ್ತಾನದ ಅತಿದೊಡ್ಡ ನೀರು ಶುದ್ಧೀಕರಣ ಘಟಕಗಳಲ್ಲಿ ಒಂದನ್ನು ನಿರ್ವಹಿಸಿದ ಅಲಂಗೀರ್ ಅವರ ಆತ್ಮಹತ್ಯೆ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.
ಮುಲ್ತಾನ್ ಸುಲ್ತಾನ್ಸ್ ಸಿಇಒ ಹೈದರ್ ಅಜರ್ ಅವರು ಈ ಸುದ್ದಿಯನ್ನು ದೃಢಪಡಿಸಿದ್ದು, ತರೀನ್ ಅವರ ಕುಟುಂಬಕ್ಕೆ ತೀವ್ರ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ನಾನು ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಭಿಮಾನಿ: ಡಿ.ಕೆ.ಶಿವಕುಮಾರ್
“ಅಲಂಗೀರ್ ತರೀನ್ ನಮ್ಮ ತಂಡದ ಮೌಲ್ಯಯುತ ಸದಸ್ಯ ಮತ್ತು ಗೌರವಾನ್ವಿತ ವ್ಯಕ್ತಿತ್ವ. ಅವರ ಹಠಾತ್ ಮತ್ತು ಅಕಾಲಿಕ ನಿಧನದಿಂದ ನಾವು ತುಂಬಾ ದುಃಖಿತರಾಗಿದ್ದೇವೆ. ಈ ನಂಬಲಾಗದಷ್ಟು ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬದೊಂದಿಗೆ ಇವೆ” ಎಂದು ಅಜರ್ ಹೇಳಿದ್ದಾರೆ.
2021ರಲ್ಲಿ ಮುಲ್ತಾನ್ ಸುಲ್ತಾನ್ ತಂಡವು ಫೈನಲ್ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಸೋಲಿಸಿ ಮೊದಲ ಬಾರಿ ಪಿಎಸ್ಎಲ್ ಕಿರೀಟ ಗೆದ್ದುಕೊಂಡಿತ್ತು.