Advertisement

Mullikatte-ಅರಾಟೆ: ಚತುಷ್ಪಥ ಹೆದ್ದಾರಿ ಕಾಮಗಾರಿಯಿಂದ ಸಮಸ್ಯೆಗಳ ಸರಮಾಲೆ

02:55 PM Nov 04, 2024 | Team Udayavani |

ಕುಂದಾಪುರ: ಬೈಂದೂರು – ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪಥ ಕಾಮಗಾರಿ ಆರಂಭಗೊಂಡ ಬಳಿಕ ಹೊಸಾಡು ಗ್ರಾಮದ ಮುಳ್ಳಿಕಟ್ಟೆ-ಅರಾಟೆ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಉಂಟಾಗಿದೆ. ಇಲ್ಲಿ ಸ್ಥಳೀಯರ ಬೇಡಿಕೆಗಳಿಗೆ ಈವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ದೊರೆತಿಲ್ಲ. ಹೀಗಾಗಿ ಜನ ಈಗ ಬೀದಿಗಿಳಿದು ಹೋರಾಟಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

Advertisement

ಹೆದ್ದಾರಿ ಕಾಮಗಾರಿಯಿಂದ ಮುಳ್ಳಿಕಟ್ಟೆ ಪರಿಸರದಲ್ಲಿ ಹತ್ತಾರು ಸಮಸ್ಯೆಗಳು ಕಾಣಿಸಿಕೊಂಡಿವೆ. ಕಳೆದ ಆರೇಳು ವರ್ಷಗಳಿಂದ ಈ ಸಮಸ್ಯೆ ಬಗೆಹರಿಸಲು ಇಲ್ಲಿನ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ಆದರೆ ಈವರೆಗೆ ಹೆದ್ದಾರಿ ಪ್ರಾಧಿಕಾರವಾಗಲಿ, ಅಧಿಕಾರಿಗಳು, ಜನಪ್ರತಿನಿಧಿಗಳಾಗಲಿ ಇದನ್ನು ಗಂಭೀರವಾಗಿ ಪರಿಗಣಿಸದೇ, ನಿರ್ಲಕ್ಷ್ಯ ತೋರಿದ್ದಾರೆ ಅನ್ನುವುದು ಊರವರ ಆರೋಪ.

ಮಳೆ ನೀರಿನಿಂದ ಮನೆಗಳಿಗೆ ಸಂಕಷ್ಟ
ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಹೊಸಾಡು ಗ್ರಾ.ಪಂ. ವ್ಯಾಪ್ತಿಯ ಮುಳ್ಳಿಕಟ್ಟೆ, ಅರಾಟೆ ಭಾಗದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆಯಿಲ್ಲದೆ ಪ್ರತೀ ಮಳೆಗೂ ಆವಾಂತರ ಸೃಷ್ಟಿಯಾಗುತ್ತಿದೆ. ಹೆದ್ದಾರಿ ಅಗಲೀಕರಣದಿಂದಾಗಿ ಇಲ್ಲಿ ಮಳೆ ನೀರು ಹರಿದು ಹೋಗಲು ಜಾಗವಿಲ್ಲ. ಹೆದ್ದಾರಿ, ಗೇರು ನಿಗಮ ಜಾಗದ ನೀರು, ಖಾಸಗಿ ಜಾಗದ ನೀರು, ಮೊವಾಡಿ ಕಡೆಯಿಂದ ಬರುವಂತಹ ಮಳೆ ನೀರನ್ನೆಲ್ಲ ಹೊಸಾಡು ಕಡೆಗೆ ಬಿಡಲಾಗುತ್ತಿದೆ. ಇದರಿಂದ ಇಲ್ಲಿನ ಸ್ಥಳೀಯ 7-8 ಮನೆಗಳಿಗೆ ನಿತ್ಯ ತೊಂದರೆಯಾಗುತ್ತಿದೆ. ಬಾವಿ ನೀರು ಕಲುಷಿತಗೊಂಡಿದೆ. 250 ಎಕರೆ ಗದ್ದೆಗಳಿಗೂ ತೊಂದರೆಯಾಗುತ್ತಿದೆ. ಮಳೆ ನೀರು ಸರಿಯಾಗಿ ಹರಿದು ಹೋಗಲು ಮೊವಾಡಿಯಿಂದ ಅರಾಟೆಯ ಸೌಪರ್ಣಿಕ ನದಿಯವರೆಗೆ ಸಮರ್ಪಕ ಕಾಂಕ್ರೀಟ್‌ ಚರಂಡಿ ನಿರ್ಮಿಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಸರ್ವಿಸ್‌ ರಸ್ತೆ ಇಲ್ಲ
ಅರಾಟೆಯಿಂದ ಮುಳ್ಳಿಕಟ್ಟೆ ಹಾಗೂ ಮುಳ್ಳಿಕಟ್ಟೆಯಿಂದ ಮೊವಾಡಿಯವರೆಗೆ ಇಕ್ಕೆಲಗಳಲ್ಲೂ ಸರ್ವಿಸ್‌ ರಸ್ತೆ ಬೇಕು ಅನ್ನುವುದು ಇಲ್ಲಿನ ಜನರ ಬಹು ವರ್ಷಗಳ ಬೇಡಿಕೆ. ಆದರೆ ಈವರೆಗೆ ಸರ್ವಿಸ್‌ ರಸ್ತೆ ಆಗುವ ಬಗ್ಗೆ ಯಾವುದೇ ಬೆಳವಣಿಗೆಗಳೇ ಆಗಿಲ್ಲ. ಇದರಿಂದ ಸ್ಥಳೀಯರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಂಡರ್‌ಪಾಸ್‌ ಅಥವಾ ಮೇಲ್ಸೆತುವೆ ನಿರ್ಮಾಣದ ಬೇಡಿಕೆಯೂ ನೆನೆಗುದಿಗೆ ಬಿದ್ದಿದೆ.

ಬೀದಿ ದೀಪಗಳಿಲ್ಲ
ಮುಳ್ಳಿಕಟ್ಟೆಯಿಂದ ಮೊವಾಡಿವರೆಗಿನ ಹೆದ್ದಾರಿಯಲ್ಲಿ ದಾರಿದೀಪಗಳಿಲ್ಲ. ರಾತ್ರಿ ವೇಳೆ ಹೆದ್ದಾರಿಯ ಇಕ್ಕೆಲಗಳಲ್ಲಿ ಜಾನುವಾರುಗಳು ಮಲಗುತ್ತಿದ್ದು ದಾರಿದೀಪದ ವ್ಯವಸ್ಥೆ ಇಲ್ಲದಿರುವುದರಿಂದ ರಾತ್ರಿ ವೇಳೆ ವಾಹನಗಳು ಸಂಚರಿಸಲು ಸಮಸ್ಯೆಯಾಗುತ್ತಿದೆ. ಇದರಿಂದ ಅನೇಕ ಅಪಘಾತಗಳೂ ಸಂಭವಿಸಿವೆ.

Advertisement

ಹೆದ್ದಾರಿ ಚತುಷ್ಪಥ ಕಾಮಗಾರಿ ಪೂರ್ಣಗೊಂಡರೂ ಮುಳ್ಳಿಕಟ್ಟೆ-ಅರಾಟೆ ಗ್ರಾಮಸ್ಥರಿಗೆ ಮಾತ್ರ ಇದರಿಂದ ಇನ್ನಷ್ಟು ತೊಂದರೆ ಪಡುತ್ತಿರುವುದು ದುರಂತ. ಅಗತ್ಯದ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಅಲೆದಾಡುತ್ತಿರುವ ಗ್ರಾಮಸ್ಥರ ಸಹನೆಯ ಕಟ್ಟೆಯೊಡೆಯುವ ದಿನಗಳು ದೂರವಿಲ್ಲ.

ಮೂಟೆ ಹೊತ್ತು ಹೆದ್ದಾರಿ ದಾಟಬೇಕು
ಹೆದ್ದಾರಿ 66 ರಲ್ಲಿರುವ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಜಂಕ್ಷನ್‌ ಪ್ರದೇಶ ಅಪಘಾತ ತಾಣವಾಗಿದೆ. ಇದೊಂದು ಅವೈಜ್ಞಾನಿಕ ರೀತಿಯ ಜಂಕ್ಷನ್‌ ನಂತಿದ್ದು, ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಕಂಟಕವಾಗಿ ಪರಿಣಮಿಸುತ್ತಿದೆ. ಇಲ್ಲಿ ಪ್ರತಿನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿರುತ್ತವೆ. ಒಂದು ಕಡೆ ಗಂಗೊಳ್ಳಿ ರಸ್ತೆ, ಇನ್ನೊಂದೆಡೆ ನಾಡ-ಗುಡ್ಡೆಯಂಗಡಿ ರಸ್ತೆ, ಮಧ್ಯೆ ಹೆದ್ದಾರಿ ಹಾದುಹೋಗುತ್ತದೆ. ಗಂಗೊಳ್ಳಿ, ಅಥವಾ ನಾಡ ಕಡೆಯವರು ಹೆದ್ದಾರಿ ದಾಟಬೇಕಾದರೆ ಪ್ರಯಾಸಪಡಬೇಕಾದ ಸ್ಥಿತಿಯಿದೆ. ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸುವ ಆತಂಕ ತಪ್ಪಿದ್ದಲ್ಲ. ಅದಕ್ಕಾಗಿಯೇ ಇಲ್ಲಿ ನಿರಂತರ ಅಪಘಾತಗಳು ಸಂಭವಿಸುತ್ತಿವೆ. ಪಾದಚಾರಿಗಳಂತೂ ಜೀವ ಕೈಯಲ್ಲಿ ಹಿಡಿದುಕೊಂಡೇ ಹೆದ್ದಾರಿ ದಾಟಬೇಕಾಗಿದೆ. ಹೊಸಾಡು ಗ್ರಾಮಸ್ಥರು ಗ್ರಾ.ಪಂ., ವಿಎ ಕಚೇರಿ, ಪಡಿತರ, ಅಂಚೆ ಕಚೇರಿ ಹೀಗೆ ಎಲ್ಲದಕ್ಕೂ ಹೆದ್ದಾರಿ ದಾಟಿ ಬರಬೇಕಾಗಿದೆ. ಪಡಿತರಕ್ಕೆ ಬರುವ ಜನ 30 ಕೆಜಿ ಅಕ್ಕಿ ಹೊತ್ತುಕೊಂಡು ಈ ಹೆದ್ದಾರಿ ದಾಟಬೇಕಾದ ಅನಿವಾರ್ಯತೆಯಿದೆ.

ಹೋರಾಟ ಅನಿವಾರ್ಯ
ಇಲ್ಲಿನ ಜಂಕ್ಷನ್‌ ಅಪಾಯಕಾರಿಯಾಗಿದೆ. ಇಲ್ಲಿ ಅಂಡರ್‌ಪಾಸ್‌ ಅಥವಾ ಮೇಲ್ಸೆತುವೆ ನಿರ್ಮಿಸಬೇಕೆಂಬ ಬೇಡಿಕೆ ಬಹಳ ವರ್ಷಗಳಿಂದ ಇದೆ. ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ರಚನೆ, ದಾರಿದೀಪಗಳ ಅಳವಡಿಕೆ, ಬಸ್‌ ತಂಗುದಾಣ ನಿರ್ಮಾಣ ಸಹಿತ ಅಗತ್ಯ ಮೂಲ ಸೌಲಭ್ಯಗಳನ್ನು ಈವರೆಗೆ ಒದಗಿಸಿಲ್ಲ. ಜನರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೆದ್ದಾರಿ ತಡೆ ನಡೆಸಿ ಹೋರಾಟ ನಡೆಸುತ್ತೇವೆ.- ಚಂದ್ರಶೇಖರ ಪೂಜಾರಿ, ಹೊಸಾಡು ಗ್ರಾ.ಪಂ.ಮಾಜಿ ಅಧ್ಯಕ್ಷ

ಇಲ್ಲಿಗೆ ಬಂದು ಸಮಸ್ಯೆ ಆಲಿಸಲಿ
ಇಲ್ಲಿನ ಶೇ. 80 ರಷ್ಟು ಜನ ಹೆದ್ದಾರಿಯ ಕೆಲ ಭಾಗದಲ್ಲಿದ್ದಾರೆ. ಆದರೆ ಎಲ್ಲದಕ್ಕೂ ನಾವು ಹೆದ್ದಾರಿ ಮೇಲ್ಭಾಗವನ್ನು ಅವಲಂಬಿಸಿದ್ದೇವೆ. ಹೆದ್ದಾರಿ ದಾಟುವುದೇ ಕಷ್ಟ. ಎಲ್ಲರಿಗೂ ಮನವಿ ಕೊಟ್ಟಿದ್ದೇವೆ. ಆದರೆ ಈವರೆಗೆ ಯಾರಿಂದಲೂ ಪರಿಹಾರ ಸಿಕ್ಕಿಲ್ಲ. ಸಾವು ನೋವು ಅಪಾರ ಆಗಿವೆ. ಡಿಸಿ, ಸಂಸದರಿಗೆ ಮನವಿ ಕೊಟ್ಟು, ಇಲ್ಲಿಗೆ ಬಂದು ಸಮಸ್ಯೆ ಆಲಿಸಲು ಮನವಿ ಮಾಡಿಕೊಳ್ಳುತ್ತಿದ್ದೇವೆ.
– ಪ್ರದೀಪ್‌ ಬಿಲ್ಲವ ಹೊಸಾಡು, ಸ್ಥಳೀಯರು

Advertisement

Udayavani is now on Telegram. Click here to join our channel and stay updated with the latest news.

Next