Advertisement

Mulleria: 4.76 ಕೋಟಿ ರೂ. ವಂಚನೆ ಪ್ರಕರಣ; ಆರೋಪಿ ಬೆಂಗಳೂರಿನಲ್ಲಿರುವ ಶಂಕೆ

09:05 PM May 14, 2024 | Team Udayavani |

ಮುಳ್ಳೇರಿಯ: ಸದಸ್ಯರಿಗೆ ತಿಳಿಯದೆ ಅವರ ಹೆಸರಿನಲ್ಲಿ 4.76 ಕೋಟಿ ರೂ. ಗಳ ಚಿನ್ನಾಭರಣ ಸಾಲ ತೆಗೆದು ತಲೆಮರೆಸಿಕೊಂಡ ಸಹಕಾರಿ ಸಂಸ್ಥೆಯ ಕಾರ್ಯದರ್ಶಿ, ಸಿಪಿಎಂ ಲೋಕಲ್‌ ಸಮಿತಿ ಸದಸ್ಯ ಬೆಂಗಳೂರಿನಲ್ಲಿರುವುದಾಗಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

Advertisement

ಆರೋಪಿಯನ್ನು ಪತ್ತೆಹಚ್ಚಲು ಆದೂರು ಪೊಲೀಸರು ಶೀಘ್ರ ಬೆಂಗಳೂರಿಗೆ ತೆರಳಲಿದ್ದಾರೆ.

ಕಾರಡ್ಕ ಅಗ್ರಿಕಲ್ಚರಿಸ್ಟ್‌ ವೆಲ್ಫೆರ್‌ ಕೋ-ಆಪರೇಟಿವ್‌ ಸೊಸೈಟಿಯ ಅಧ್ಯಕ್ಷ ಬೆಳ್ಳೂರು ಕಿನ್ನಿಂಗಾರಿನ ಸೂಫಿ ನೀಡಿದ ದೂರಿನಂತೆ ಕರ್ಮಂತೋಡಿ ನಿವಾಸಿ, ಸಿಪಿಎಂ ಮುಳ್ಳೇರಿಯ ಲೋಕಲ್‌ ಸಮಿತಿ ಸದಸ್ಯ ಕೆ. ರತೀಶ್‌ ವಿರುದ್ಧ ಆದೂರು ಪೊಲೀಸರು ಕೇಸು ದಾಖಲಿಸಿದ್ದಾರೆ. ಇಲಾಖೆ ಮಟ್ಟದ ಪರಿಶೀಲನೆಯಲ್ಲಿ ಕೋಟ್ಯಂತರ ರೂ. ಗಳ ವಂಚನೆ ನಡೆದಿರುವುದು ಪತ್ತೆಹಚ್ಚಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ 4,75,99,907 ರೂ. ವಂಚನೆ ಪತ್ತೆಹಚ್ಚಲಾಗಿದೆ. ಜನವರಿ ತಿಂಗಳಿಂದ ಹಲವು ಬಾರಿ ಅಡವು ಚಿನ್ನ ಇಲ್ಲದೆ 7 ಲಕ್ಷ ರೂ. ವರೆಗೆ ಪ್ರತೀ ಸದಸ್ಯನ ಹೆಸರಲ್ಲಿ ಸಾಲ ತೆಗೆಯಲಾಗಿದೆ. ಈ ವಿಷಯ ಅರಿವಿಗೆ ಬಂದ ಹಿನ್ನೆಲೆಯಲ್ಲಿ ಆಡಳಿತ ಸಮಿತಿಗೆ ತಿಳಿಸಿದ್ದು, ಬಳಿಕ ಪೊಲೀಸರಿಗೆ ದೂರು ನೀಡಲು ನಿರ್ದೇಶಿಸಲಾಯಿತು. ಇದೇ ವೇಳೆ ಒಂದು ವಾರದೊಳಗೆ ಹಣವನ್ನು ಮರಳಿ ಪಾವತಿಸುವುದಾಗಿ ರತೀಶ್‌ ಕೆಲವರಲ್ಲಿ ತಿಳಿಸಿದ್ದಾನೆನ್ನಲಾಗಿದೆ. ಆದರೆ ಅಧ್ಯಕ್ಷರು ದೂರು ನೀಡಿದ ಬೆನ್ನಲ್ಲೇ ಕಾರ್ಯದರ್ಶಿಯಾದ ರತೀಶ್‌ ಊರಿನಿಂದ ತಲೆಮರೆಸಿಕೊಂಡಿದ್ದಾನೆ.

ಸೈಬರ್‌ ಸೆಲ್‌ನ ಸಹಾಯದೊಂದಿಗೆ ನಡೆಸಿದ ತನಿಖೆಯಲ್ಲಿ ರತೀಶ್‌ ಬೆಂಗಳೂರಿನಲ್ಲಿರುವುದಾಗಿ ತಿಳಿದು ಬಂದಿದೆ. ಈ ಪ್ರಕರಣವನ್ನು ಕೂಡಲೇ ಕ್ರೈಂ ಬ್ರ್ಯಾಂಚ್‌ಗೆ ಹಸ್ತಾಂತರಿಸಲಾಗುವ ಸಾಧ್ಯತೆಯಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next