ಶಿರಸಿ : ವಿಶ್ವ ಆರೋಗ್ಯದಿನದ ಅಂಗವಾಗಿ ಶಿರಸಿಯ ಪ್ರಕೃತಿ ಸಂಸ್ಥೆವತಿಯಿಂದ ವಿನೂತನವಾದ ಬಿಳೆ ಮುಳ್ಳಣ್ಣು ಹಬ್ಬವನ್ನು ತಾಲೂಕಿನ ದೊಡ್ಡೂರಿನ ಬೆಟ್ಟದಲ್ಲಿ ಆಚರಿಸಲಾಯಿತು.
ಪ್ರಕೃತಿ ಸಂಸ್ಥೆಯ ಪಾಂಡುರಂಗ ಹೆಗಡೆ ಮಾತನಾಡಿ, ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧ ಬಲಗೊಂಡಾಗ ಆರೋಗ್ಯ ಮತ್ತು ಸ್ವಾಸ್ಥ್ಯ ಒದಗಿ ಬರುತ್ತದೆ. ಪೂರಕವಾಗಿ ತಲೆಮಾರುಗಳ ನಡುವಿನ ಸಂಬಂಧಗಳು ಬಲಗೊಳ್ಳಬೇಕಾದ ಅಗತ್ಯ ಇಂದಿನದ್ದಾಗಿದೆ. ಈ ಹಿನ್ನೆಲೆಯಲ್ಲಿ ಹಿರಿಯರೊಂದಿಗೆ ಕಿರಿಯರು ಕೂಡಿ ನಿಸರ್ಗ ಸ್ನೇಹ ಬೆಸೆದುಕೊಳ್ಳುವ ಒಂದು ಪ್ರಯತ್ನ ಇದು.
ಪ್ರಕೃತಿಯಲ್ಲಿ ಕಾಲಮಾನಕ್ಕೆ ಅನುಗುಣವಾಗಿ ಆಹಾರ, ನಿಸರ್ಗದಲ್ಲಿ ಬದಲಾವಣೆ ಕಾಣಬಹುದು. ಅಂತಹ ಒಂದು ವೈಶಿಷ್ಟ್ಯವೇ ಬಿಳೆ ಮುಳ್ಳೆಹಣ್ಣು ಎಂದರು. ಗಿಡಮೂಲಿಕಾ ತಜ್ಞ ಜಿ.ಎಸ್. ಹೆಗಡೆ ಲಕ್ಕಿಸವಲು, ಅತ್ಯಂತ ಕಡಿಮೆ ವೆಚ್ಚದಲ್ಲಿ ಮನುಷ್ಯನ ನರಗಳ ಚೈತನ್ಯವನ್ನು ಹೆಚ್ಚಿಸುವ ಟಾನಿಕ್ ಇದಾಗಿದೆ. ಆ್ಯಂಟಿ ಆಕ್ಸಿಡೆಂಟ್ ಇರುವ ಇರುವ ಈ ಮುಳ್ಳಣ್ಣು ದೇಹಕ್ಕೆ ಬೇಸಿಗೆಯಲ್ಲಿ ತಂಪನ್ನು ನೀಡುವಲ್ಲಿ ಸಹಕಾರಿಯಾಗಿದೆ ಎಂದರು.
ಝಿಝೀಪಸ್ ರೊಗೊಸಾ ಎಂದು ಕರೆಯಲ್ಪಡುವ ಈ ಹಣ್ಣು ಬೋರೆ ಹಣ್ಣಿನ ಪರಿವಾರಕ್ಕೆ ಸೇರಿದ್ದು. ಮತ್ತೂಂದು ಪ್ರಭೇದವೇ ಕರೆ ಮುಳ್ಳಣ್ಣು ಅಥವಾ ಪರಿಗೆ ಹಣ್ಣು ಎಂದು ಕರೆಯುತ್ತಾರೆ. ಇಡೀ ಗಿಡ ಮೊನಚಾದ ಮುಳ್ಳಿನಿಂದ ಕೊಡಿರುವುದರಿಂದ ಹಣ್ಣು ಕೊಯ್ಯವಾಗ ಸ್ವಲ್ಪ ಎಚ್ಚರ ತಪ್ಪಿದರೆ ಕೈಗೆ ಚುಚ್ಚುವುದು ಖಚಿತ. ಬಹುಶಃ ಈ ಕಾರಣದಿಂದಾಗಿ ಕಾಡಿನಲ್ಲಿರುವ ಮಂಗಗಳು ಇದನ್ನು ತಿನ್ನದೇ ಇರುವುದರಿಂದ ಅದು ಮನುಷ್ಯನಿಗೆ, ಪಕ್ಷಿಗಳಿಗೆ ಸವಿಯಲು ಸಿಗುತ್ತಿದೆ ಎಂದೂ ಅನೇಕರು ಹೇಳಿದರು. ಎರಡು ತಾಸು ಈ ಬೆಟ್ಟದಲ್ಲಿ ಅಲೆದಾಡುತ್ತಾ ವಿವಿಧ ರೀತಿಯ, ಬೇರೆ ಬೇರೆ ರುಚಿಯಿರುವ ಬಾಯಿಯಲ್ಲಿ ಇಟ್ಟ ತತ್ ಕ್ಷಣ ಕರಗಿ ಸವಿ ನೀಡುವ ಮುಳ್ಳಣ್ಣು ಹಬ್ಬದಲ್ಲಿ ಭಾಗವಹಿಸಲು ಬಂದ ಮಹಿಳೆಯರು, ಹಿರಿಯ ನಾಗರಿಕರು ಮತ್ತು ಮಕ್ಕಳು ಸವಿದು ಬಾಯಿ ಚಪ್ಪರಿಸಿದರು.
ಸಾಹಿತಿ ಮಾರುತಿ ಅಂಕೋಲೆಕರ, ಈ ಹಬ್ಬ ನನ್ನ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಟ್ಟಿತು, ಇಷ್ಟು ಪ್ರಮಾಣದಲ್ಲಿ ಮುಳ್ಳಣ್ಣು ಗಿಡಗಳನ್ನು ನಾಡು ನೋಡಿರಲಿಲ್ಲ ಹೇಳಿದರು. ಈ ಗಿಡದ ಬೇರು ಮತ್ತು ತೊಗಟೆಯನ್ನು ಔಷಧಿಯಲ್ಲಿ ಬಳಸುವ ಮತ್ತು ಅದರ ವಿವಿಧ ರೀತಿಯ ಉಪಯೋಗದ ಕುರಿತು ವಿವಿರವಾದ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಗಳು ನೀಡಿದರು.
ಇಂತಹ ಕಾಡು ಹಣ್ಣುಗಳು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವುದರಿಂದ ಅವುಗಳ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕುರಿತು ಚರ್ಚೆ ನಡೆಯಿತು. ರಸ್ತೆಯ ಪಕ್ಕದಲ್ಲಿದ್ದರೂ ಸಹ ಮಕ್ಕಳು ಇಲ್ಲಿರುವ ಮುಳ್ಳಣ್ಣನ್ನು ತಿನ್ನದೇ ಬಿಟ್ಟಿರುವುದು ಹೊಸ ತಲೆಮಾರಿನವರಿಗೆ ಈ ಕಾಡು ಹಣ್ಣುಗಳ ಬಗ್ಗೆ ಆಸಕ್ತಿ ಇಲ್ಲದಿರುವುದನ್ನು ತೋರಿಸುತ್ತದೆ. ಪೌಷ್ಠಿಕಾಂಶಗಳಿಂದ ಕೂಡಿರುವ ಈ ಹಣ್ಣುಗಳು ಪೇಟೆಯಿಂದ ಖರೀದಿಸಿದ ಹಣ್ಣಿಗಿಂತ ಹೆಚ್ಚಿನ ಆರೋಗ್ಯವನ್ನು ಒದಗಿಸುತ್ತದೆ. ಪ್ರಕೃತಿ ಸಂಸ್ಥೆ ಏರ್ಪಡಿಸಿದ್ದ ಈ ಕಾರ್ಯಕ್ರಮದಲ್ಲಿ ಪಾಂಡುರಂಗ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ಬೆಂಗಳೂರಿನ ಐಟಿ ಉದ್ಯೋಗಿ ವಿನ್ಯಾಸ ಕುಮಾರ, ತ್ರಯಿ, ಸುಬ್ಬಣ್ಣ ಮಣಭಾಗಿ ಮತ್ತು ಇತರರು ಪಾಲ್ಗೊಂಡಿದ್ದರು.