Advertisement

ಮೂಲ್ಕಿ ನಗರ ಪಂಚಾಯತ್‌ ಮಾಸಿಕ ಸಭೆ

02:17 PM Feb 05, 2018 | |

ಮೂಲ್ಕಿ : ಜನರಿಗೆ ಅಗತ್ಯವುಳ್ಳ ಕುಡಿಯುವ ನೀರಿನ ವ್ಯವಸ್ಥೆ ಮತ್ತು ನಿರ್ವಹಣೆಯ ಕಾಮಗಾರಿಗಳನ್ನು ನಡೆಸಲು ದೂರದ ಊರಿನ ಜನರಿಗೆ ಟೆಂಡರ್‌ ಆಗಿರುವುದನ್ನು ರದ್ದು ಪಡಿಸಿ ಊರಿನ ಜನರಿಗೆ ಅದೇ ದರದಲ್ಲಿ ಕೊಟ್ಟಲ್ಲಿ ಉತ್ತಮ ಸೇವೆ ಸಿಗಲು ಸಾಧ್ಯ ಎಂದು ಸದಸ್ಯೆ ವಿಮಲಾ ಪೂಜಾರಿ ತಿಳಿಸಿದರು. ಅವರು ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಮಾತನಾಡಿದರು.

Advertisement

ಈ ಹಿಂದಿನಿಂದಲೂ ದೂರದ ಗುತ್ತಿಗೆದಾರರ ಬಗ್ಗೆ ನಮಗೆ ಅನುಭವ ಇರುವ ಹಾಗೆ ಅವರ ಸೇವೆಯಲ್ಲಿ ವ್ಯತ್ಯಯ ಉಂಟಾಗಿರುವುದನ್ನು ಸಭೆಯ ಗಮನಕ್ಕೆ ತಂದ ಅವರು ಮೂಲ ಸೌಕರ್ಯದಲ್ಲಿ ಅತೀ ಪ್ರಾಮುಖ್ಯವಾಗಿರುವ ನೀರಿನ ವ್ಯವಸ್ಥೆಯಲ್ಲಿ ಉತ್ತಮ ಸೇವೆ ಕೊಡುವವರಿಗೆ ಆದ್ಯತೆ ನೀಡಬೇಕು. ದರ ಕಡಿಮೆ ಎಂದು ಸರಿಯಾಗಿ ಸ್ಪಂದಿಸದವರಿಗೆ ಗುತ್ತಿಗೆ ಕೊಡುವುದು ಸರಿಯಲ್ಲ ಎಂದರು.  ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸುನೀಲ್‌ ಆಳ್ವ ಭರವಸೆ ನೀಡಿದರು.

ಕಾಮಗಾರಿ ಮುಂದೂಡಿಕೆ
ಕಾರ್ನಾಡಿನ ಕುದ್ಕ ಪಲ್ಲದ ಮಾತಾ ಅಮೃತಾನಂದಮಯಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಿಸುವ ಜಾಗದ ಸಮೀಪದಲ್ಲಿಯೇ ಮನೆಗಳು ಇವೆ. ಇದರಿಂದಾಗಿ ಸ್ಥಳೀಯರಿಗೆ ತೊಂದರೆಯಾಗುತ್ತದೆ ಎಂದು ವಿಮಲಾ ಪೂಜಾರಿ ತಿಳಿಸಿದರು.

ಶೇ. 95ರಷ್ಟು ಜನ ಇದೇ ಜಾಗ ಸೂಕ್ತ ಎಂದಿದ್ದಾರೆ. ಸ್ಥಳೀಯ ಸದಸ್ಯೆಮೀನಾಕ್ಷಿ ಬಂಗೇರ ಕೂಡ ಕಾಮಗಾರಿ ವಿಳಂಬ ಬೇಡ ಇದೇ ಜಾಗದಲ್ಲಿ ನಡೆಸುವುದು ಸೂಕ್ತ ಎಂದು ಹೇಳಿದ್ದಾರೆ ಎಂದು ತಿಳಿಸಿದ ಸುನೀಲ್‌ ಆಳ್ವ ಸೂಕ್ತ ರೀತಿಯಲ್ಲಿ ಎರಡು ದಿನಗಳ ಒಳಗೆ ಪರಿಹಾರವಾಗಿ ಜನರನ್ನು ಒಪ್ಪಿಸಿದರೆ ನಿಮ್ಮ ಮನವಿಗಾಗಿ ಎರಡು ದಿನಗಳ ಕಾಲ ಕಾಮಗಾರಿಯನ್ನು ಮುಂದೂಡಲಾಗುವುದು ಎಂದರು.

ಅಕ್ರಮ ಸಕ್ರಮ ಯತ್ನ
94ಸಿಸಿ ಕಲಂ ಅನ್ವಯ ಕೆಲವು ರಸ್ತೆ ಬದಿಯ ವ್ಯವಹಾರ ಕೇಂದ್ರಗಳನ್ನು ಸೇರಿಸಿಕೊಂಡು ಆಕ್ರಮ ಸಕ್ರಮಗೊಳಿಸಲು
ಪ್ರಯತ್ನ ನಡೆಯುತ್ತಿದೆ. ಆದರೆ ನಗರ ಪಂಚಾಯತ್‌ನ ಜಾಗವನ್ನು ಅತಿಕ್ರಮಣ ಮಾಡುವುದು ಕಂಡು ಬಂದರೆ ಯಾವುದೇ ದಾಕ್ಷಿಣ್ಯ ಇಲ್ಲದೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

Advertisement

ಮೂಲ್ಕಿ ಸರಕಾರಿ ಆಸ್ಪತ್ರೆಯ ನೀರಿನ ಸಮಸ್ಯೆಯ ಬಗ್ಗೆ ಆಸ್ಪತ್ರೆಯ ವೈದ್ಯಾದಿಕಾರಿ ಡಾ| ಅಜಿತ್‌ ಶೆಟ್ಟಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಕುಷ್ಟ ರೋಗದ ಅರಿವಿನ ಬಗ್ಗೆ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೈ ಮೇಲೆ ಬೀಳುವ ಬಿಳಿ ಹಾಗೂ ತಾಮ್ರದ ವರ್ಣದ ಕಲೆಗಳ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಮುಂದೆ ದೇಹದ ನರಗಳು ದುರ್ಬಲಗೊಂಡು ಸಮಸ್ಯೆ ಉಲ್ಬಣಿಸುವ ಭಯ ಇದೆ. ಈಗಲೇ ಸಾರ್ವಜನಿಕರಲ್ಲಿ ಇಂತಹ ಕಲೆಗಳು ಕಂಡು ಬಂದಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ತಪಾಸಣೆಗೆ ಒಳಗಾಗಿ ಪರಹಾರ ಕಂಡು ಕೊಳ್ಳಲು ನಗರ ಪಂಚಾಯತ್‌ನ ಆಡಳಿತ ಸಹಕರಿಸುತ್ತದೆ ಎಂದರು.

ನ.ಪಂ.ನೂತನ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ಶೈಲೇಶ್‌ ಕುಮಾರ್‌ ಅವರನ್ನು ಮುಂದಿನ ಒಂದು ವರ್ಷದ ಅವಧಿಗೆ ಸಭೆ ಸರ್ವಾನುಮತದಿಂದ ಆಯ್ಕೆ ಮಾಡಿತು. ನಿರ್ಗಮನ ಅಧ್ಯಕ್ಷ ಹರ್ಷರಾಜ್‌ ಶೆಟ್ಟಿ ಅವರನ್ನು ಸುನೀಲ್‌ ಆಳ್ವ ಅಭಿನಂದಿಸಿದರು.

ಕುಡಿಯುವ ನೀರಿನ ಸಮಸ್ಯೆ
ಮಾನಂಪಾಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗುತ್ತಾ ಇದೆ ಇಲ್ಲಿಗೆ ಒಂದು ಬೋರ್‌ವೆಲ್‌ ಮಂಜೂರು
ಮಾಡಿ ಕೊಡುವಂತೆ ಸದಸ್ಯ ಉಮೇಶ್‌ ಮಾನಂಪಾಡಿ ಸಭೆಯಲ್ಲಿ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಬೇಕಾದಷ್ಟು ನೀರಿನ ಲಭ್ಯತೆ ಇದ್ದರೆ ಮಾನಂಪಾಡಿಗೆ ಮಾತ್ರವಲ್ಲ ಎಲ್ಲ ವಾರ್ಡುಗಳಲ್ಲೂ ಬೋರ್‌ ತೆರೆಯಲಾಗುವುದು ಎಂದರು. ಮುಖ್ಯಾಧಿಕಾರಿ ಇಂದು ಎಂ. ಸ್ವಾಗತಿಸಿದರು.

ಪುರಸಭೆಯಾಗಿ ಪರಿಷ್ಕರಿಸಿ
ನಗರ ಪಂಚಾಯತ್‌ನ್ನು ಪುರಸಭೆಯಾಗಿ ಪರಿಷ್ಕರಿಸಲು ಇಲ್ಲಿಯ ಜನ ಸಂಖ್ಯೆ ಹೆಚ್ಚಾಗಿದೆ. ಆದರೆ 2011ರ ಜನಗಣತಿಯನ್ನು ಮಾನದಂಡವಾಗಿ ಬಳಸುತ್ತಿರುವುದರಿಂದ ಜನಸಂಖ್ಯೆ ದಾಖಲೆ ಬದಲಾಗಿಲ್ಲ. ಪುರಸಭೆಯಾಗಿ ಪರಿವರ್ತನೆ ಮಾಡುವ ಅಗತ್ಯ ಇದೆ ಎಂದು ಸದಸ್ಯ ಪುತ್ತು ಬಾವಾ ಹೇಳಿದರು. ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ಮೂಡಾದಿಂದ ಸಿಂಗಲ್‌ ಲೇಔಟ್‌ ಪರಿವರ್ತನೆಯ ಕೆಲಸಗಳಿಗೆ ಕಿರುಕುಳವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಮಹಾನಗರ ಪಾಲಿಕೆಯಂತೆ ನಮ್ಮಿಂದಲೇ ಮನೆ ನಿರ್ಮಾಣಕ್ಕೆ ಅನುಮತಿ ಕೊಡುವ ವ್ಯವಸ್ಥೆ ಆಗಲಿ ಎಂದು ಪುತ್ತು ಬಾವಾ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಸುನೀಲ್‌ ಆಳ್ವ ಕೆಲವು ತಾಂತ್ರಿಕ ತೊಂದರೆಗಳಿಂದ ಇದು ಸಾಧ್ಯವಾಗುತ್ತಿಲ್ಲ. ಆದರೆ ಮೂಡಾದಿಂದ ಇದಕ್ಕೆ ಸೂಕ್ತ ಬದಲಾವಣೆ ಆಗುವುದಾದರೆ ಉತ್ತಮ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next