ಮಂಗಳೂರು: ವಿಜಯ ಬ್ಯಾಂಕ್ ವಿಲೀನದ ಬಗ್ಗೆ ನಾಟಕೀಯ ಬೇಸರ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್‌ಗೆ ನಿಜಕ್ಕೂ ಕಾಳಜಿ ಇದ್ದರೆ ಮೂಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ಲೈಟ್‌ಹೌಸ್ ಹಿಲ್ ರಸ್ತೆಗೆ ಇರಿಸಲಿ ಎಂದು ದ.ಕ. ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಆಗ್ರಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್‌ಗೆ ನಿಜವಾಗಿಯೂ ತಾಕತ್ತಿದ್ದರೆ ಮೂಲ್ಕಿ ಸುಂದರರಾಮ ಶೆಟ್ಟರ ಹೆಸರನ್ನು ರಸ್ತೆಗೆ ಇರಿಸಲಿ. ಇಲ್ಲವಾದರೆ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ತತ್‌ಕ್ಷಣ ಅಥವಾ ಮುಂದಿನ ಮನಪಾದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ತತ್‌ಕ್ಷಣವೇ ರಸ್ತೆಗೆ ನಾಮಕರಣ ಮಾಡಲಿದ್ದೇವೆ ಎಂದರು.
ಪಂಪ್‌ವೆಲ್ ಫ್ಲೆಓವರ್ ಬಗ್ಗೆ ಮಾತನಾಡುವ ಕಾಂಗ್ರೆಸಿಗರು, ಉಸ್ತುವಾರಿ ಸಚಿವರ ಕ್ಷೇತ್ರದ ಒಂಬತ್ತು ಕೆರೆಯಲ್ಲಿ ಕಳೆದ 13 ವರ್ಷಗಳಿಂದ ಪಾಳು ಬಿದ್ದಿರುವ ಆಶ್ರಯ ಮನೆಗಳ ಸುಧಾರಣೆಗೆ ಯಾಕೆ ಮನಸ್ಸು ಮಾಡುತ್ತಿಲ್ಲ ಎಂಬುದಕ್ಕೆ ಉತ್ತರಿಸಬೇಕು. ವಾಸಕ್ಕೆ ಯೋಗ್ಯವಿಲ್ಲದ ರೀತಿಯಲ್ಲಿ ನಿರ್ಮಿಸಿದ ಮನೆಗಳನ್ನು ಯಾವ ಕಾರಣಕ್ಕೆ 13 ವರ್ಷದಿಂದ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಹೆದ್ದಾರಿ ಕಾಮಗಾರಿಯನ್ನು ನವಯುಗ ಸಂಸ್ಥೆಯವರಿಗೆ ನೀಡಿದ್ದು ಕಾಂಗ್ರೆಸ್ ಸರಕಾರ. ಅಂದು ಕಾಂಗ್ರೆಸ್ ಮಾಡಿದ ತಪ್ಪಿನಿಂದಾಗಿ ದ.ಕ. ಜಿಲ್ಲೆಗೆ ಸಮಸ್ಯೆ ಎದುರಾಗಿದೆ ಎಂದರು.
ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಅವರು 16,500 ಕೋ.ರೂ.ಗಳ ಯೋಜನೆಯನ್ನು ಜಿಲ್ಲೆಗೆ ತಂದಿದ್ದಾರೆ. ಮುಂದಿನ 2 ವರ್ಷದಲ್ಲಿ ಈ ಎಲ್ಲ ಯೋಜನೆಗಳು ಪೂರ್ಣಗೊಳ್ಳಲಿವೆ. ಬಳ್ಪ ಆದರ್ಶ ಗ್ರಾಮ ಯೋಜನೆಯು ಯಶಸ್ವಿಯಾಗಿದೆ ಎಂಬುದನ್ನು ಗುಲ್ಬರ್ಗ ವಿ.ವಿ. ವರದಿ ತಿಳಿಸಿದೆ ಎಂದರು.
ಹಿಂದೂ ವಿರೋಧಿ ನೀತಿ ಅನುಸರಿಸುತ್ತಿರುವ ಮೈತ್ರಿ ಸರಕಾರವು ಈಗ ಉಳಾಯಿಬೆಟ್ಟು ಘಟನೆಯ ಒಂದು ವರ್ಗದ ಆರೋಪಿಗಳ ಮೇಲಿನ ಕೇಸನ್ನು ಹಿಂಪಡೆದಿದೆ. ಈ ಮೂಲಕ ತುಷ್ಟೀಕರಣ ನೀತಿ ಅನುಸರಿಸಲಾಗುತ್ತಿದೆ. ಎರಡೂ ಧರ್ಮದವರ ಕೇಸ್ ಯಾಕೆ ಹಿಂಪಡೆಯಲಿಲ್ಲ ಎಂಬುದಕ್ಕೆ ಉತ್ತರ ನೀಡಲಿ ಎಂದರು. ಪತ್ರಿಕಾಗೋಷ್ಠಿಯಲ್ಲಿ ರುಕ್ಮಯ ಪೂಜಾರಿ, ಗಣೇಶ್ ಹೊಸಬೆಟ್ಟು, ಪ್ರಭಾ ಮಾಲಿನಿ, ಕೃಷ್ಣಪ್ಪ, ಸಂಜಯ ಪ್ರಭು ಉಪಸ್ಥಿತರಿದ್ದರು.